ಯುವ ಪೀಳಿಗೆಗೆ ಕುವೆಂಪು ಚಿಂತನೆ ಅರಿವು ಮೂಡಿಸಿ

KannadaprabhaNewsNetwork |  
Published : May 23, 2024, 01:46 AM IST
nayana 3 | Kannada Prabha

ಸಾರಾಂಶ

ನಾಡೋಜ ಜಿ.ಕೃಷ್ಣಪ್ಪ ವಿರಚಿತ ‘ನಮ್ಮ ಕುವೆಂಪು’ ಕೃತಿ ಲೋಕಾರ್ಪಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಪುರೋಹಿತ ಶಾಹಿ ವಿರೋಧಿ ಸಾಹಿತ್ಯದ ಮೂಲಕ ಸಮಾಜ ಯಾವ ದಿಕ್ಕಲ್ಲಿ ಸಾಗಬೇಕು ಎಂಬುದನ್ನು ತಿಳಿಸಿದ ಕುವೆಂಪು ಚಿಂತನೆ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಬೇಕಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ.ಚೀ.ಬೋರಲಿಂಗಯ್ಯ ಹೇಳಿದರು. ನಗರದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಆಯೋಜಿಸಿದ್ದ ನಾಡೋಜ ಜಿ.ಕೃಷ್ಣಪ್ಪ ವಿರಚಿತ ‘ನಮ್ಮ ಕುವೆಂಪು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವಾಲಯದೊಳಗೆ ಪೂಜಾರಿಗಳ ಹಂಗಿನಲ್ಲಿದ್ದ ದೇವರನ್ನು ಪ್ರಕೃತಿಯಲ್ಲಿ ತಂದಿದ್ದು ಕುವೆಂಪು ಹೆಗ್ಗಳಿಕೆ. ಪುರೋಹಿತಶಾಹಿಯನ್ನು ಅವರಂತೆ ಗಟ್ಟಿ ಧ್ವನಿಯಲ್ಲಿ ವಿರೋಧಿಸಿದ ಇನ್ನೊಬ್ಬ ಸಾಹಿತಿಯಿಲ್ಲ. ಮುಖ್ಯವಾಗಿ ಪುರಾಣದಲ್ಲಿದ್ದ ತಪ್ಪಿಗೆ ಚಿಕಿತ್ಸೆ ನೀಡುವ ಧೈರ್ಯ ತೋರಿದ್ದರು. ಮೊಬೈಲ್‌ ವ್ಯಸನದಲ್ಲಿ ಮುಳುಗಿರುವ ಮಕ್ಕಳು, ಯುವಕರಿಗೆ ಕುವೆಂಪು ಚಿಂತನೆಗಳ ಬಗ್ಗೆ ತಿಳಿಸಿ ಸರಿಯಾದ ದಿಕ್ಕು ತೋರಬೇಕು’ ಎಂದರು.

‘ಅಂಬೇಡ್ಕರ್‌ ಅವರನ್ನು ದಲಿತರು, ಬಸವಣ್ಣನನ್ನು ಲಿಂಗಾಯತರು ಹಾಗೂ ಕುವೆಂಪು ಅವರನ್ನು ಒಕ್ಕಲಿಗರು ಸೀಮಿತ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಬೇಕು. ಬದಲಾಗಿ ಕುವೆಂಪು ಅವರ ವಿಶ್ವ ಮಾನವ ತತ್ವವನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ‘ಪ್ರತಿದಿನ ಸರಾಸರಿ 600-650 ಜನರಂತೆ ವರ್ಷಕ್ಕೆ ಸರಿಸುಮಾರು ಎರಡೂವರೆ ಲಕ್ಷ ಜನ ಕವಿಶೈಲಕ್ಕೆ ಭೇಟಿ ನೀಡುತ್ತಾರೆ. ಪ್ರತಿಷ್ಠಾನದಿಂದ ಕುವೆಂಪು ಹಾಗೂ ಅವರ ಕೃತಿಗಳ ಕುರಿತು ಈವರೆಗೆ ₹3 ಕೋಟಿ ಮೊತ್ತದಷ್ಟು ಪುಸ್ತಕಗಳು ಮಾರಾಟವಾಗಿದೆ. ಇದು ಕುವೆಂಪು ಕಾರ್ಯಗಳ ಶಕ್ತಿಗೆ ನಿದರ್ಶನ. ರಾಜಧಾನಿ ಬೆಂಗಳೂರಲ್ಲಿ ಕುವೆಂಪು ಕಾರ್ಯಕ್ಕಾಗಿ ಸರ್ಕಾರ ಆಸಕ್ತಿ ತೋರಬೇಕು. ಪ್ರತಿಷ್ಠಾನದಿಂದ ಬಿಡಿಎ ಸಿಎ ನಿವೇಶನ ಪಡೆದು ಭವನ ನಿರ್ಮಾಣದ ಕೆಲಸ ಮಾಡಲಾಗುತ್ತಿದ್ದು, ನೆರವು ಅಗತ್ಯ’ ಎಂದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ‘ಸಂಸ್ಥೆಯಿಂದ ಹದಿನೆಂಟನೇ ಕೃತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಸಾಹಿತ್ಯ ಓದು ಅಭಿಯಾನದ ಅಡಿಯಲ್ಲಿ ಕೃತಿ ವಿತರಣೆಗೆ‌ ಯೋಜಿಸಲಾಗಿದೆ’ ಎಂದು ತಿಳಿಸಿದರು.

ಗೌರವಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ