ಯುವಜನತೆಗೆ ಅಂಬೇಡ್ಕರ್ ಆದರ್ಶಗಳ ಅರಿವು ಮೂಡಿಸಿ

KannadaprabhaNewsNetwork | Published : May 19, 2025 2:06 AM
ರಾಮನಗರ: ಎಲ್ಲ ವರ್ಗದ ಜನರಿಗೂ ಸಮಾನವಾದ ಹಕ್ಕುಗಳನ್ನು ಸಂವಿಧಾನದ ಮೂಲಕ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಯಶಸ್ವಿಯಾಗಿಸಲು ಸಹಕರಿಸಿದ ಪುರಜನರು, ಪೌರಕಾರ್ಮಿಕರು ಮತ್ತು ನಗರಸಭೆ ಸದಸ್ಯರು, ಅಧಿಕಾರಿ ವೃಂದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ನಗರಸಭಾಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.
Follow Us

ರಾಮನಗರ: ಎಲ್ಲ ವರ್ಗದ ಜನರಿಗೂ ಸಮಾನವಾದ ಹಕ್ಕುಗಳನ್ನು ಸಂವಿಧಾನದ ಮೂಲಕ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಯಶಸ್ವಿಯಾಗಿಸಲು ಸಹಕರಿಸಿದ ಪುರಜನರು, ಪೌರಕಾರ್ಮಿಕರು ಮತ್ತು ನಗರಸಭೆ ಸದಸ್ಯರು, ಅಧಿಕಾರಿ ವೃಂದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ನಗರಸಭಾಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.

ನಗರಸಭೆ ಸಭಾಂಗಣದಲ್ಲಿ ವಿವಿಧ ಸಂಘಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ 134 ನೇ ಜಯಂತಿ ಅದ್ಧೂರಿಯಾಗಿ ಆಚರಿಸಿ ಅವರ ಆಚಾರ-ವಿಚಾರಗಳನ್ನು ಇಂದಿನ ಯುವಜನರಿಗೆ ತಿಳಿಸಬೇಕೆಂಬ ನಗರಸಭೆಯ ಕನಸು ಸಾಕಾರವಾಗಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಆಶಯದಂತೆ ತಳ ಸಮಾಜವನ್ನು ಆರ್ಥಿಕವಾಗಿ ಮೇಲೆತ್ತಿ ಸಾಮಾಜಿಕ ಅಸಮಾನತೆ ತೊಲಗಿಸ ಬೇಕೆಂದು ನಗರಸಭೆ ವತಿಯಿಂದ ಐದು ಲಕ್ಷ ರು.ಗಳ ಮೀಸಲಿಡಲಾಗಿತ್ತು. ಆ ಅನುದಾನದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿಂದುಳಿದ, ಮಡಿವಾಳ ಸಮಾಜದವರಿಗೆ ಕಿಟ್‌ಗಳು, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು 10 ಸಾವಿರ ಬಟ್ಟೆ ಬ್ಯಾಗ್, ಬೀದಿಬದಿ ವ್ಯಾಪಾರಿಗಳಿಗೆ ನೆರಳಿಗಾಗಿ 1 ಸಾವಿರ ಛತ್ರಿಗಳು ಸೇರಿದಂತೆ ವೃತ್ತಿಯಾಧಾರಿತ ಅನೇಕ ಸವಲತ್ತುಗಳನ್ನು ಕಾರ್ಯಕ್ರಮದಲ್ಲಿ ವಿತರಿಸಿದ್ದು ನನಗೆ ಬಹಳ ಸಂತಸ ತಂದಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ, ಶೋಷಿತ ವರ್ಗದವರಿಗೆ ನಿರಂತರ ಧ್ವನಿ, ಶಾಸನ ಸಭೆಯಲ್ಲಿ ಎಲ್ಲರಿಗೂ ಸಮಾನ ಕಾನೂನು ಜಾರಿಗೆ ತಂದ ಅವರ ಜಯಂತಿಯನ್ನು ವ್ಯವಸ್ಥಿತವಾಗಿ ಮಾಡಲು ಇದಕ್ಕೆಲ್ಲಾ ಪ್ರೇರಣೆಯಾಗಿತ್ತು. ಈ ಕಾರ್ಯಕ್ರಮದ ಯಶಸ್ವಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಹೆಚ್.ಎ.ಇಕ್ಬಾಲ್‌ಹುಸೇನ್, ಸೇರಿದಂತೆ ಪೌರಾಯುಕ್ತ ಜಯಣ್ಣ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರ ಸಹಕಾರ ಅಮೂಲ್ಯವಾಗಿತ್ತು. ವಿರೋಧ ಪಕ್ಷದ ಸದಸ್ಯರ ಸಹಕಾರವನ್ನು ಮರೆಯುವಂತಿಲ್ಲ. ನಗರಸಭಾ ಸದಸ್ಯರು ಪಕ್ಷಾತೀತವಾಗಿ ಬೆಂಬಲ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುವಾಗ ರಾಜಕೀಯ ಅಡ್ಡಿಯಾಗಬಾರದೆಂಬುದನ್ನು ನಗರಸಭೆ ಸದಸ್ಯರು ತೋರಿಸಿ ಇತರ ನಗರಸಭೆಗಳಿಗೆ ಮಾದರಿ ಎಂದು ಹೇಳಿದರು.

ನಾನು ನಾಲ್ಕು ಬಾರಿ ನಗರಸಭೆಗೆ ಸದಸ್ಯನಾಗಿ ಆಯ್ಕೆಯಾಗಿ ಎರಡು ಬಾರಿ ಅಧ್ಯಕ್ಷನಾಗಿದ್ದೇನೆ. ನಗರದ ಜನತೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಎಲ್ಲಾ ಸಂಘ, ಸಂಸ್ಥೆಗಳು ನಮ್ಮನ್ನು ಹರಸಿದ್ದರು. ಅಂದಿನಿಂದಲೇ ಪ್ರಾಮಾಣಿಕವಾಗಿ ನಾವು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದರೂ ನಿರೀಕ್ಷೆಯ? ಸಾಧನೆ ಸಾಧ್ಯವಾಗಲಿಲ್ಲ. ಅನೇಕ ವಿಚಾರಗಳನ್ನು ಆಧ್ಯತೆ ಮೇರೆಗೆ ಕೆಲಸ ಮಾಡುತ್ತಿದ್ದೇವೆ. ಮುಂದೆಯೂ ಎಲ್ಲರ ಸಹಕಾರ ಮತ್ತು ಬೆಂಬಲವನ್ನು ನಿರೀಕ್ಷೆ ಮಾಡುತ್ತೇವೆ ಎಂದು ಶೇಷಾದ್ರಿ ತಿಳಿಸಿದರು.

ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ನಗರದಲ್ಲಿ ಮೇ 15 ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ನಗರದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿಯಾಗಿ ನಡೆಸಿದ ಕೀರ್ತಿ ಶಶಿ ಅವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮ ರಾಜ್ಯಮಟ್ಟದ ಕಾರ್ಯಕ್ರಮಕ್ಕೂ ಮಿಗಿಲಾಗಿ ಆಚರಣೆ ಮಾಡಿದ್ದು ಎಲ್ಲ ವರ್ಗದ ಜನರ ಮೆಚ್ಚುಗೆಗೆ ಪಾತ್ರವಾಯಿತು. ಈ ಎಲ್ಲ ಕಾರಣದಿಂದ ಇಂದು ನಗರದ ಜನತೆಯ ಪರವಾಗಿ ಕೆ.ಶೇಷಾದ್ರಿ ಅವರಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದೇವೆ ಎಂದರು.

ವಿವಿಧ ಜಾತಿ, ಧರ್ಮಗಳನ್ನು ಒಗ್ಗೂಡಿಸಿಕೊಂಡು ಕೆ.ಶೇಷಾದ್ರಿ ಅವರು ಅಂಬೇಡ್ಕರ್ ಜಯಂತಿ ಮಾಡಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಆಹ್ವಾನಿಸಿ ನಗರದ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಭವಿಷ್ಯದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಎಲ್ಲಾ ಜಾತಿ, ಜನಾಂಗದವರನ್ನು ವಿಶ್ವಾಸದಿಂದ ಅವರು ಶಾಸಕರಾಗುವ ಅವಕಾಶವನ್ನು ಕ್ಷೇತ್ರದ ಜನತೆ ನೀಡಲಿ ಎಂದು ಆಶಿಸಿದರು.

ಈ ವೇಳೆ ನಗರಸಭಾ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಮುಹಿನ್ ಖುರೇಷಿ, ಸಮದ್, ನರಸಿಂಹ ಪೌರಾಯುಕ್ತ ಡಾ.ಜಯಣ್ಣ ಪ್ರಾಧಿಕಾರದ ನಿರ್ದೇಶಕ ಪ್ರವೀಣ್ ಮುಖಂಡರಾದ ಶಿವಕುಮಾರಸ್ವಾಮಿ, ಮುಖಂಡರಾದ ದೊಡ್ಡಿಸುರೇಶ್, ಕಬ್ಬಡಿ ವಿಜಿ, ದೇವರಾಜು, ನಾರಾಯಣಪ್ಪ, ಶಫಿ, ಶಿವರಾಜು, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಎನ್.ಸುರೇಶ್, ಪದಾಧಿಕಾರಿಗಳಾದ ಬಾನಂದೂರುಶಿವಕುಮಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಜರಿದ್ದು ಅಭಿನಂದಿಸಿದರು.

-----------------------------

18ಕೆಆರ್ ಎಂಎನ್ 7.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹಾಗೂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರ ಸ್ವಾಮಿ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಅಭಿನಂದಿಸಿದರು.

------------------------------