ಪ್ರಗತಿ ಪರಿಶೀಲನೆ
ವಿಶೇಷಚೇತನರಿಗೆ ಒದಗಿಸುವ ಸೇವೆ ಸೌಲಭ್ಯಗಳಿಗೆ ಸಂಪೂರ್ಣವಾಗಿ ನೆರವಾಗಲು ನಗರ, ಗ್ರಾಮೀಣ ಮಟ್ಟದಲ್ಲಿ ವಿವಿಧೋದ್ದೇಶ ಕಾರ್ಯಕರ್ತರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.
ನಗರದಲ್ಲಿ ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಅನುಷ್ಠಾನ ಮತ್ತು ವಿಕಲಚೇತನರ ಪ್ರಗತಿ ಪರಿಶೀಲಿಸಿ ಮಾತನಾಡಿದರು.ವಿಶೇಷಚೇತನರಿಗೆ ಸರ್ಕಾರದ ಸವಲತ್ತು ಯೋಜನೆ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ನಗರ, ಗ್ರಾಮೀಣ ಭಾಗದಲ್ಲಿ ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ ಕಾರ್ಯಕರ್ತರು ವಿಶೇಷವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ. ರಾಜ್ಯದಲ್ಲಿ ೭ ಸಾವಿರಕ್ಕೂ ಹೆಚ್ಚು ವಿವಿಧೋದ್ದೇಶ ಕಾರ್ಯಕರ್ತರು ವಿಶೇಷಚೇತನರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ವಿಶೇಷಚೇತನರನ್ನು ನೋಡಿಕೊಳ್ಳುವ ಆರೈಕೆದಾರರಿಗೂ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸಭೆಗಳ ಮೂಲಕ ವಿಕಲಚೇತನರ ಕುಂದುಕೊರತೆಗಳನ್ನು ಆಲಿಸಲಾಗುತ್ತದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸೂಕ್ತ ಅವಕಾಶಗಳನ್ನು ನಿಯಮಾನುಸಾರ ನೀಡಲೇಬೇಕು. ವಿಶೇಷಚೇತನರ ಸರ್ವಾಂಗೀಣ ಅಭಿವೃದ್ಧಿ, ಅಂಗವಿಕಲರ ಅಧಿನಿಯಮ ಪ್ರಕಾರ ಎಲ್ಲವನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಅಗತ್ಯ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.