ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಯೋಜನೆ ಕುರಿತು ಆಯೋಜಿಸಿದ್ದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಲ್ಸ್ ಪೋಲಿಯೋ ಕುರಿತು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚು ಪ್ರಚಾರ ನಡೆಸಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಾದ್ಯಂತ 71 ಬೂತ್‌ಗಳಲ್ಲಿ ನವಜಾತಶಿಶುವಿನಿಂದ 5 ವರ್ಷದೊಳಗಿನ 12577 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯ್ತಿ ಮತ್ತು ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿ ಶೇ.100ರಷ್ಟು ಗುರಿ ಸಾಧಿಸಬೇಕು. ಪೋಲಿಯೋ ಲಸಿಕೆಯಿಂದ ಯಾವೊಂದು ಮಗುವೂ ಸಹ ವಂಚಿತವಾಗಬಾರದು. ಮಕ್ಕಳಿಗೆ ಲಸಿಕೆ ಹಾಕಲು ಒಟ್ಟು 284 ಸಿಬ್ಬಂದಿ ಮತ್ತು 15 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ಸ್ಥಳಗಳು ಹಾಗೂ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನೆಲ್ಲಿಗೆರೆ ಕ್ರಾಸ್ ಮತ್ತು ಕದಬಹಳ್ಳಿ ಟೋಲ್ ಕೇಂದ್ರಗಳಲ್ಲಿಯೂ ಸಹ ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಬಳಿಕ ಫ್ಲೋರೋಸಿಸ್ ನಿಯಂತ್ರಣ, ತಂಬಾಕು ಸೇವನೆ ಮತ್ತು ಮಾರಾಟ ಕಾಯ್ದೆ ಅನುಷ್ಠಾನ, ಪ್ರಸವ ಪೂರ್ವ, ಪ್ರಸವ ನಂತರದ ಭ್ರೂಣಲಿಂಗ ಪತ್ತೆ ಹತ್ಯೆ, ಬಾಲ್ಯವಿವಾಹ ನಿಷೇಧ, ಡೆಂಘೀ ನಿಯಂತ್ರಣ, ರಾಷ್ಟ್ರೀಯ ಮಲೇರಿಯಾ, ಕುಷ್ಠ-ಕ್ಷಯರೋಗ ಮುಕ್ತ ಭಾರತ, ರಾಷ್ಟ್ರೀಯ ಆರ್‌ಬಿಎಸ್‌ಕೆ, ಎಂಆರ್ ಲಸಿಕಾ ಆಶಾ ಕುಂದುಕೊರತೆ ಕಾರ್ಯಕ್ರಮ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಎಆರ್‌ಟಿಒ ಹೊನ್ನೇಗೌಡ, ಕಾರ್ಮಿಕ ನಿರೀಕ್ಷಕ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.