ಕನ್ನಡಪ್ರಭ ವಾರ್ತೆ, ತುಮಕೂರುವಿಶ್ವಕರ್ಮ ಸಮುದಾಯದ ಯುವಜನಾಂಗಕ್ಕೆ ಸಮುದಾಯದ ಪರಂಪರೆಯ ಅರಿವು ಮೂಡಿಸಬೇಕಿದೆ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಪ್ರತಿಪಾದಿಸಿದರು.ಅವರು ನಗರದ ಚಿಕ್ಕಪೇಟೆಯ ಶ್ರೀ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಪಂಚಕಸುಬುಗಳ ಮೂಲಕ ಮಾನವನ ಪ್ರತಿಕಾರ್ಯಕ್ಕೂ ನೆರವಾಗುತ್ತಿರುವ ವಿಶ್ವಕರ್ಮ ಸಮಾಜ ಕಲೆಗೆ ಹೆಸರಾದ ಸಮುದಾಯ. ಮಹಾನ್‌ಶಿಲ್ಪಿಗಳು, ಸಂಗೀತ ವಿದ್ವಾಂಸರು, ಕರಕುಶಲ ತಜ್ಞರು ಈ ಸಮುದಾಯದ ಕೀರ್ತಿಯನ್ನು ಬೆಳಗಿದ್ದಾರೆ. ಆದರೆ ಅವರ ಹಿರಿಮೆ-ಗರಿಮೆಗಳ ಬಗ್ಗೆ ಸಮುದಾಯದ ಯುವಪೀಳಿಗೆಯಲ್ಲಿ ಅರಿವಿಲ್ಲ. ಹಾಗಾಗಿ ಸಮುದಾಯ ಅಥವಾ ಅಭಿವೃದ್ಧಿ ನಿಗಮದಿಂದ ಸಮಾಜದ ಸಾಧಕರ ಪ್ರೇರಣಾ ಗ್ರಂಥವನ್ನು ಹೊರತರುವ ಅಗತ್ಯವಿದೆ ಎಂದರು.ನೀವು ಏಕಾಗ್ರತೆಯಿಂದ ಶ್ರಮ ಪಟ್ಟು ಅತ್ಯಂತ ಕ್ಲಿಷ್ಟದಾಯಕವಾದ ಕುಸುರಿ ಕೆಲಸದ ಮೂಲಕ ಸಾಮಾನ್ಯ ಲೋಹಕ್ಕೆ ಆಭರಣದ ಮೌಲ್ಯಕೊಡುತ್ತೀರಿ. ಆದರೆ ಅದನ್ನು ಬ್ರಾಂಡಿಂಗ್ ಹೆಸರಲ್ಲಿ ವರ್ತಕರು ಹೆಚ್ಚಿನ ಲಾಭ ಪಡೆಯುತ್ತಾರೆ. ತೆರೆಯ ಹಿಂದೆ ಉಳಿಯುವ ಸಮುದಾಯದ ಕುಶಲ ಕರ್ಮಿಗಳ ಜೀವನ ಭದ್ರತೆ ಬಗ್ಗೆ ಸಮಾಜದ ಸಂಘಸಂಸ್ಥೆಗಳು, ಸರ್ಕಾರ ನೆರವಿಗೆ ಬರಬೇಕಿದೆ ಎಂದು ಹೇಳಿಕಾಳಿಕಾಂಬ ಪತ್ತಿನ ಸಹಕಾರ ಸಂಘದ ಆಡಳಿತಮಂಡಳಿಯವರು ಸಂಸ್ಥಾಪನಾ ದಿನದ ಹೆಸರಲ್ಲಿ ಸದಸ್ಯರು, ಅವರ ಕುಟುಂಬ ವರ್ಗದವರಿಗೆ ಆರೋಗ್ಯ ತಪಾಸಣೆ ಸೇರಿ ವಿವಿಧ ಸೇವಾ ಕಾರ್ಯ ಮಾಡಿರುವುದು ಮಾದರಿಕಾರ್ಯ ಎಂದು ಶ್ಲಾಘಿಸಿದರು.ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಸುಜ್ಞಾನಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿ ಎಸ್‌ಎಂಎಸ್ ಸೇವೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಈ ಬಾರಿ 50 ಕೋಟಿ ವಿಶೇಷ ಅನುದಾನ ಘೋಷಿಸಿದ್ದು, ಶೈಕ್ಷಣಿಕ ನೆರವಿಗೆ ಎಷ್ಟೇ ಅರ್ಜಿ ಬಂದರೂ ಪರಿಗಣಿಸುವಂತೆ ರಾಜ್ಯಾದ್ಯಂತ ಸೂಚನೆ ನೀಡಿರುವೆ. ಪಿಎಂ ವಿಶ್ವಕರ್ಮ ಯೋಜನೆಯಡಿ ಎಲ್ಲಾ ಸಮುದಾಯಗಳನ್ನು ಸೇರಿಸಿರುವುದರಿಂದ ಪಂಚಕಾಯಕ ವೃತ್ತಿಯಲ್ಲಿ ತೊಡಗಿರುವವರಿಗೆ ನ್ಯಾಯಯುತ ಪಾಲು ದೊರೆಯುತ್ತಿಲ್ಲ. ರಾಜಕೀಯ ಪಕ್ಷಗಳು ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕಿದ್ದು, ಕಾಳಿಕಾಂಬ ಪತ್ತಿನ ಸಹಕಾರ ಸಂಘ ಮುಂದೆ ಬ್ಯಾಂಕ್ ಆಗಿ ಪ್ರಗತಿ ಕಾಣಲಿ ಎಂದು ಆಶಿಸಿದರು.ಶ್ರೀಗುರುಕುಲ-ಕಾಳಿಕಾಂಬ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದ ಶ್ರೀಗುರುಕುಲ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ಮಲ್ಲಿಕಾರ್ಜುನಯ್ಯ, ಇಂದು ಆರೋಗ್ಯ ಸೇವೆ ದುಬಾರಿಯಾಗಿರುವ ಪರಿಸ್ಥಿತಿಯಲ್ಲಿ ಪರಸ್ಪರ ಸಹಕಾರದ ಆರೋಗ್ಯಕ್ಕೆ ನೆರವಾಗಬೇಕೆಂದು ನಮ್ಮ ಸಹಕಾರಿಯಿಂದ ಗುರುಕುಲ ಕ್ಲಿನಿಕ್-ಡಯೋಗ್ನಾಸ್ಟಿಕ್ ಸೆಂಟರ್ ತೆರೆದು ರಿಯಾಯಿತಿ ದರದ ಸೇವೆ ನೀಡುತ್ತಿದ್ದು, ಈ ಸಹಕಾರಿ ಸದಸ್ಯರು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಸಹಕಾರಿ ಅಧ್ಯಕ್ಷ ಎಸ್.ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿ ಸಂಸ್ಥಾಪಕರು, ಹಿಂದಿನ, ಹಾಲಿ ಕಾರ್ಯಕಾರಿ ಮಂಡಳಿ, ಸಿಬ್ಬಂದಿಯ ಸಹಕಾರದಿಂದ ಸಂಸ್ಥೆ 1800 ಕ್ಕೂ ಅಧಿಕ ಸದಸ್ಯರೊಂದಿಗೆ ವಾರ್ಷಿಕ 30 ಕೋಟಿಗೂ ಅಧಿಕವಹಿವಾಟಿನೊಂದಿಗೆ ಸಂಘ ಮುನ್ನೆಡೆಯಲು ಸಾಧ್ಯವಾಗಿದೆ ಎಂದು ಹೇಳಿ ಸಂಸ್ಥೆಯ ನೂತನ ಸೇವೆಗಳ ಬಗ್ಗೆ ವಿವರಿಸಿದರು. ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಹೆಬ್ಬೂರು ನಾಗರಾಜಚಾರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಬೆಳಿಗ್ಗೆಯಿಂದ ಶಿಬಿರ ಯಶಸ್ವಿಯಾಗಿ ನೆರವೇರಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯೋಜನ ಪಡೆದುಕೊಳ್ಳುವಂತಾಗಬೇಕೆಂದರು