ದುರಾಡಳಿತ, ಭ್ರಷ್ಟಾಚಾರ ನಿರುದ್ಯೋಗಕ್ಕೆ ನೇರ ಕಾರಣ: ರವಿ ಕೃಷ್ಣಾರೆಡ್ಡಿ

KannadaprabhaNewsNetwork | Published : Sep 2, 2024 2:02 AM

ಸಾರಾಂಶ

ಯುವಜನರಿಗೆ ಉತ್ತಮ ಶಿಕ್ಷಣ ಮತ್ತು ಸಾಮರ್ಥ್ಯ ಹೊಂದಿದ್ದರೂ ಸಹ ಅದಕ್ಕೆ ಸಮನಾದ ಉದ್ಯೋಗ ದೊರೆಯುತ್ತಿಲ್ಲ, ಇದಕ್ಕೆ ಒಂದು ಪ್ರಮುಖ ಕಾರಣ ಅವರಿಗೆ ಸೂಕ್ತವಾದ ಮಾರ್ಗದರ್ಶನದ ಕೊರತೆ ಆಗಿದೆ ಎಂದು ಕೆ.ಆರ್.ಎಸ್. ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಹೇಳಿದರು.

ಶಿಗ್ಗಾಂವಿ: ಯುವಜನರಿಗೆ ಉತ್ತಮ ಶಿಕ್ಷಣ ಮತ್ತು ಸಾಮರ್ಥ್ಯ ಹೊಂದಿದ್ದರೂ ಸಹ ಅದಕ್ಕೆ ಸಮನಾದ ಉದ್ಯೋಗ ದೊರೆಯುತ್ತಿಲ್ಲ, ಇದಕ್ಕೆ ಒಂದು ಪ್ರಮುಖ ಕಾರಣ ಅವರಿಗೆ ಸೂಕ್ತವಾದ ಮಾರ್ಗದರ್ಶನದ ಕೊರತೆ ಆಗಿದೆ ಎಂದು ಕೆ.ಆರ್.ಎಸ್. ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಹೇಳಿದರು.ಪಟ್ಟಣದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಯುವಜನರಿಗಾಗಿ ಏರ್ಪಡಿಸಿದ್ದ ವೃತ್ತಿಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಸರ್ಕಾರಗಳು ಇಂತಹ ಕನಿಷ್ಠ ಮಟ್ಟದ ಕೆಲಸವನ್ನು ಕೂಡಮಾಡದಂತಹ ಸ್ಥಿತಿಯಲ್ಲಿ ಇವೆ. ಭ್ರಷ್ಟಾಚಾರ ಮತ್ತು ದುರಾಡಾಳಿತವೇ ನಾಡಿನಲ್ಲಿನ ನಿರುದ್ಯೋಗಕ್ಕೆ ನೇರ ಕಾರಣವಾಗಿದೆ. ಕೆ.ಆರ್.ಎಸ್. ಪಕ್ಷವು ಶಿಗ್ಗಾಂವಿ ಸವಣೂರು ಕ್ಷೇತ್ರವನ್ನು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸಲಿದ್ದು, ಇಂತಹ ಕೆಲಸಗಳನ್ನು ಪಕ್ಷವು ನಿರಂತರವಾಗಿ ಮಾಡಲಿದೆ ಎಂದು ಹೇಳಿದರು.ವಿಷಯತಜ್ಞರಾಗಿ ವೃತ್ತಿ, ಉದ್ಯೋಗ – ನೌಕರಿಗಳ ಬಗ್ಗೆ ಮಾರ್ಗದರ್ಶನ ಮಾಡಿದ ತುಮಕೂರಿನ ಯುವಕೇಂದ್ರದ ನಿರ್ದೇಶಕರಾದ ಜ್ಞಾನ ಸಿಂಧುಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಮತ್ತು ಯುವಜನರು ಯಾವ ರೀತಿ ತರಬೇತಿ ಪಡೆದುಕೊಳ್ಳಬೇಕು, ಮುಂದಿನ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು, ಆ ನಿಟ್ಟಿನಲ್ಲಿ ಏನೆಲ್ಲ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಬೆಂಗಳೂರಿನಿಂದ ಆಗಮಿಸಿದ್ದ ಮತ್ತೊಬ್ಬ ವಿಷಯ ತಜ್ಞರಾದ ಅಕ್ಷಯ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಉದ್ಯೋಗ ಮತ್ತು ನೌಕರಿಗಳ ಬಗ್ಗೆ ಮಾಹಿತಿ ನೀಡಿ, ನಿರಂತರ ಅಧ್ಯಯನ ಮತ್ತು ತರಬೇತಿಯು ತಮ್ಮ ಆಸಕ್ತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಎಲ್ಲಾ ಅವಕಾಶಗಳು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೆ.ಆರ್.ಎಸ್.ಪಕ್ಷದ ಉಪಾಧ್ಯಕ್ಷ ಎಸ್. ಎಚ್. ಲಿಂಗೇಗೌಡ, ಹಾವೇರಿ ಜಿಲ್ಲಾ ಅಧ್ಯಕ್ಷ ಧರ್ಮರಾಬಿಂದಲಗಿ, ಪ್ರಧಾನಕಾರ್ಯದರ್ಶಿ ಯಲ್ಲಪ್ಪ ಕಾಡಶೆಟ್ಟಿಹಳ್ಳಿ, ಈರಣ್ಣ ಬಾರಕೇರ ಇದ್ದರು.

Share this article