ಕನ್ನಡ ಪ್ರಭ ವಾರ್ತೆ ಮಳವಳ್ಳಿ
ನೀರಿನ ಸಮಸ್ಯೆ ನಿರಂತರವಾಗಿದ್ದರೂ ಬಗೆಹರಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಪುರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಪಡಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಮುಂದಿನ ತಿಂಗಳು ದಂಡಿನಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿ ಹಬ್ಬವು ಸಮೀಪಿಸುತ್ತಿರುವುದರಿಂದ ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಎಇಇ ನದಾಫ್ ಮಾತನಾಡಿ, ಪಟ್ಟಣದ ಬಹುತೇಕ ಸ್ಥಳಗಳಲ್ಲಿ ನಲ್ಲಿಗಳಿಗೆ ಮೋಟರ್ ಅಳವಡಿಸಿಕೊಳ್ಳುತ್ತಿದ್ದಾರೆ. ನೀರು ಪೋಲಾಗುತ್ತಿರುವುದನ್ನು ತಡೆಯಲು ಸಾರ್ವಜನಿಕರು ಮುಂದಾಗುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ಉದ್ಬವವಾಗುತ್ತಿದೆ ಎಂದರು.ಇದಕ್ಕೆ ಪ್ರತಿಕ್ರಹಿಸಿದ ಸದಸ್ಯರು, ಅಧಿಕಾರಿಗಳು ಮತ್ತು ನೀರುಗಂಟಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೇ ಸಮಸ್ಯೆಗಳನ್ನು ಬಗೆಹರಿಸಬಹುದು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳು ಕಳೆದ ಐದಾರು ವರ್ಷಗಳಿಂದಲೂ ಜೀವಂತವಾಗಿರಿಸಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಸದಸ್ಯ ಶಿವಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಅಕ್ರಮವಾಗಿ ಕೊಳಯಿ ಸಂಪರ್ಕ ತೆಗೆದುಕೊಂಡಿರುವುದನ್ನು ಕೂಡಲೇ ಕಡಿತಗೊಳಿಸಬೇಕು. ಪೋಲಾಗುತ್ತಿರುವ ನೀರನ್ನು ತೆಡೆಯಬೇಕೆಂದು ಸಲಹೆ ನೀಡಿದರು.ಪುರಸಭೆ ಸದಸ್ಯ ಸಿದ್ದರಾಜು ಮಾತನಾಡಿ, ಮಾರೇಹಳ್ಳಿ ಸೇರಿದಂತೆ ಹಲವು ವಾರ್ಡ್ ಗಳಲ್ಲಿ ಒಳಚರಂಡಿ, ನೀರು, ರಸ್ತೆ ಸೇರಿದಂತೆ ಹಲವು ಸಮಸ್ಯೆ ಇದ್ದು ಕೂಡಲೇ ಬಗೆಹರಿಸಬೇಕು. ಸದಸ್ಯರನ್ನು ಕಡೆಗಣಿಸಿ ಆಡಳಿತಾಧಿಕಾರಿಗಳು ಕೆಲವೊಂದು ವಿಷಯಗಳಿಗೆ ಅನುಮೋದನೆ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಮಾ ಖರ್ಚು ಮಾಹಿತಿಯನ್ನು ಸಭೆ ನಡೆಯುವ ಕಡಿಮೆ ಅವಧಿಯಲ್ಲಿ ನೀಡಿರುವುದರಿಂದ ಮುಂದಿನ ಸಭೆಯಲ್ಲಿ ಚರ್ಚಿಸುವಂತೆ ಮುಂದೂಡಬೇಕೆಂದು ಒತ್ತಾಯಿಸಿದರು.ಸದಸ್ಯ ಪ್ರಶಾಂತ್‌ಕುಮಾರ್ ಮಾತನಾಡಿ, ಪಟ್ಟಣದ ಹಲವು ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣವಾದರೂ ಕೂಡ ಉಪಯೋಗಕ್ಕೆ ಬಾರದಂತಾಗಿದೆ. ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಶಾಶ್ವತ ಬೀಗ ಮುದ್ರೆ ಹಾಕುವುದಾಗಿ ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಮಾತನಾಡಿ, ಕಾಮಗಾರಿ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಪುರಸಭೆಗೆ ಹಸ್ತಾಂತರ ಮಾಡಿಕೊಂಡಿಲ್ಲ. ಗುತ್ತಿಗೆದಾರನಿಗೆ ಬಿಲ್ ಕೂಡ ಪಾವತಿ ಮಾಡಿಲ್ಲ ಎಂದರು. ಇದೇ ವೇಳೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸದಸ್ಯರು ಒಕ್ಕೋರಳಿನ ತೀರ್ಮಾನ ಕೈಗೊಂಡರು.ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಮುಂದಿನ ತಿಂಗಳು ದಂಡಿನಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿ ಹಬ್ಬವು ಪಟ್ಟಣದಲ್ಲಿ ವಿಜೃಂಬಣೆಯಿಂದ ನಡೆಯುವುದರಿಂದ ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸಿಡಿ ಹೋಗುವ ರಸ್ತೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದೇ ವೇಳೆ ಹಲವು ವಿಷಯಗಳನ್ನು ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ ಸೇರಿದಂತೆ ಇತರರು ಇದ್ದರು.