ಮಳವಳ್ಳಿ ಪುರಸಭೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಸೋಲು

KannadaprabhaNewsNetwork |  
Published : Aug 17, 2025, 01:38 AM IST
16ಕೆಎಂಎನ್ ಡಿ34 | Kannada Prabha

ಸಾರಾಂಶ

ಮಳವಳ್ಳಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ವಿರುದ್ಧ ಜೆಡಿಎಸ್, ಬಿಜೆಪಿ ಹಾಗೂ ಕೆಲ ಪಕ್ಷೇತರ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಉಳಿದ ಎರಡೂವರೆ ತಿಂಗಳ ಅವಧಿಗೆ ಪುಟ್ಟಸ್ವಾಮಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ವಿರುದ್ಧ ಜೆಡಿಎಸ್, ಬಿಜೆಪಿ ಹಾಗೂ ಕೆಲ ಪಕ್ಷೇತರ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಉಳಿದ ಎರಡೂವರೆ ತಿಂಗಳ ಅವಧಿಗೆ ಪುಟ್ಟಸ್ವಾಮಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕೆಲ ಪಕ್ಷೇತರರು ಸೇರಿದಂತೆ 12 ಮಂದಿ ಸದಸ್ಯರು ಜು.17ರಂದು ಅಧ್ಯಕ್ಷ ಪುಟ್ಟಸ್ವಾಮಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಶನಿವಾರ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವಿಶ್ವಾಸ ನಿರ್ಣಯ ಮಂಡನೆಗೆ ಸಭೆ ಕರೆದಿದ್ದರು.

ಆದರೆ, ಪತ್ರಕ್ಕೆ ಸಹಿ ಮಾಡಿದ್ದ 12 ಸದಸ್ಯರ ಪೈಕಿ 7 ಮಂದಿ ಮಾತ್ರ ಗೊತ್ತುವಳಿ ಸಭೆಗೆ ಹಾಜರಾದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದ ಅವಿಶ್ವಾಸ ನಿರ್ಣಯ ಮಂಡನೆಯನ್ನು ಕೈಬಿಡಲಾಗಿದೆ ಎಂದು ಎಸಿ ಘೋಷಿಸಿದರು.

ಸೋಲಾಗುತ್ತಿದ್ದಂತೆಯೇ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದ ಜೆಡಿಎಸ್ ಸದಸ್ಯ ಟಿ.ನಂದಕುಮಾರ್ ಮಾತನಾಡಿ, ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಿಂದ ದೂರವಿಡಲು ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರರು ಸೇರಿ ಮೈತ್ರಿಕೂಟ ರಚನೆ ಮಾಡಿಕೊಂಡು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು ಎಂದರು.

ಕಳೆದ 9 ತಿಂಗಳ ಹಿಂದೆ ಮೈತ್ರಿಕೂಟದ ಮೂಲಕ ಅಧ್ಯಕ್ಷರಾಗಿದ್ದ ಪುಟ್ಟಸ್ವಾಮಿ 6 ತಿಂಗಳು ಕಳೆದರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದವು. ಆದರೆ, ಸಹಿ ಮಾಡಿದ ಕೆಲ ಸದಸ್ಯರು ಶಾಸಕರ ಅನೈತಿಕ ರಾಜಕಾರಣದಿಂದ ಸಭೆಗೆ ಗೈರಾಗಿರುವುದರಿಂದ ನಮಗೆ ಹಿನ್ನಡೆಯಾಯಿತು ಎಂದರು.

ಶಾಸಕರು ಕುದುರೆ ವ್ಯಾಪಾರ ನಡೆಸಿ ನಮ್ಮ ಜೊತೆಯಲ್ಲಿದ್ದ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದಾರೆ. ಇದು ನಮ್ಮ ಸೋಲಲ್ಲ. ಮುಂದಿನ ದಿನಗಳಲ್ಲಿ ಪಟ್ಟಣದ ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಉಪಾಧ್ಯಕ್ಷ ಎನ್.ಬಸವರಾಜು ಮಾತನಾಡಿ, ಅಧ್ಯಕ್ಷ ಪುಟ್ಟಸ್ವಾಮಿ ಸದಸ್ಯರ ವಿಶ್ವಾಸ ಕಳೆದುಕೊಂಡು ತಮ್ಮ ಕಚೇರಿಯನ್ನು ರಿಯಲ್ ಎಸ್ಟೇಟ್ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಸಂವಿಧಾನದಡಿ ಅಧಿಕಾರ ಪಡೆದಿರುವವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ, ಸ್ವಾತಂತ್ರ್ಯ ದಿನಾಚರಣೆಗೆ ಗೈರಾಗಿ ಅಗೌರವ ತೋರಿದ್ದಾರೆ. ಅಭಿವೃದ್ಧಿ ಬಗ್ಗೆ ಅರಿವಿಲ್ಲದವರು ಅಧ್ಯಕ್ಷರಾಗಿ ಮುಂದುವರೆಸಲು ಶಾಸಕರು ಸಹಕಾರ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ, ಸದಸ್ಯರಾದ ಎಂ.ಟಿ.ಪ್ರಶಾಂತ್, ಆರ್.ಎನ್.ಸಿದ್ದರಾಜು, ನಾಗೇಶ್, ನೂರುಲ್ಲಾ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌