ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಂಗಳವಾದ್ಯ ಹಾಗೂ ಜನಪದ ಕಲಾ ತಂಡಗಳೊಂದಿಗೆ ಆದಿಜಗದ್ಗರುಗಳ ಉತ್ಸವ ಮೂರ್ತಿ, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ ಹರಗುರುಚರ ಮೂರ್ತಿಗಳು ಮೆರವಣಿಗೆಯಲ್ಲಿ ಸಾಗಿ ಸರ್ವಧರ್ಮಗಳ ಭಾವೈಕ್ಯತಾ ಸಾಮರಸ್ಯದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾತ್ಯತೀತ ಅರಿವು ಮೂಡಿಸಲಾಯಿತು. ಮನೆ ಮುಂದೆ ಬಂದ ಉತ್ಸವ ಮೂರ್ತಿ ಹಾಗೂ ಸ್ವಾಮೀಜಿ ಅವರಿಗೆ ಮಹಿಳೆಯರು ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.
ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸುತ್ತೂರು ಜಯಂತಿ ಮಹೋತ್ಸವದಲ್ಲಿ ಧ್ವಜಾರೋಹಣವನ್ನು ಮಡೇನಹಳ್ಳಿ ಶ್ರೀತೋಂಟದಾರ್ಯ ಮಠದ ಅರುಣಾಚಲ ಸ್ವಾಮಿಗಳು ನೆರವೇರಿಸಿ ಸಂದೇಶ ನೀಡಿದರು.ಯುವ ಮುಖಂಡ ಹಾಗೂ ಉದ್ಯಮಿ ವೆಂಕಟೇಶ್ ಮಾತನಾಡಿ, ಉತ್ಸವಮೂರ್ತಿ ಮೆರವಣಿಗೆ ಹಾಗೂ ಸುತ್ತೂರು ಶ್ರೀಗಳ ದರ್ಶನ ಸಿಕ್ಕಿರುವುದು ಗ್ರಾಮದ ಜನರ ಪುಣ್ಯವಾಗಿದೆ. ಭಾವೈಕ್ಯತೆ ಪ್ರತಿರೂಪವಾಗಿ ನಡೆಯುತ್ತಿರುವ ಜಯಂತ್ಯುತ್ಸವ, ರಾಷ್ಟ್ರಪತಿ ಆಗಮನ ಸೇರಿದಂತೆ ವಿಶೇಷ ಘಟನೆಗಳು ಇತಿಹಾಸ ಪುಟದಲ್ಲಿ ಸೇರಿವೆ. ಸುತ್ತೂರು ಶ್ರೀಗಳ ಅಶೀರ್ವಾದ ಮನೆ ಮುಂದೆಯೇ ಸಿಕ್ಕಿರುವುದು ನಮ್ಮ ಭಾಗ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸುತ್ತೂರು ಶ್ರೀಗಳು, ಗ್ರಾಮದ ಮುಖಂಡರಾದ ಪುರಸಭೆ ಮಾಜಿ ಸದಸ್ಯ ಪ್ರಶಾಂತ್, ವೆಂಕಟಗಿರಿಗೌಡ, ಮಲ್ಲಯ್ಯ, ತಮ್ಮಯ್ಯ, ಶಿವಲಿಂಗ ಸೇರಿದಂತೆ ಹಲವರನ್ನು ಪುಷ್ಪಮಾಲೆ ಹಾಕಿ ಅಭಿನಂದಿಸಿ ಅಶೀರ್ವದಿಸಿದರು.ಭಾವೈಕ್ಯತಾ ಯಾತ್ರೆಯ ಕಾರ್ಯಕ್ರಮದಲ್ಲಿ ಹರಗುರು ಚರಮೂರ್ತಿಗಳು, ಸಾವಿರಾರು ಸದ್ಭಕ್ತರು, ಜೆ.ಎಸ್.ಎಸ್. ವಿದ್ಯಾಪೀಠದ ಅಧಿಕಾರಿಗಳು, ಗ್ರಾಮದ ಮುಖಂಡರು ಭಾಗವಹಿಸಿದ್ದರು.