ಮಾಲವಿ ಡ್ಯಾಂನ ಗೇಟ್ ಸ್ಥಗಿತ: ಅಪಾರ ನೀರು ಪೋಲು

KannadaprabhaNewsNetwork | Published : Sep 21, 2024 1:58 AM

ಸಾರಾಂಶ

ತುಂಗಾಭದ್ರಾ ಹಿನ್ನೀರು ಹರಿದು ಬರುತ್ತಿದ್ದರೂ ತಾಲೂಕಿನ ಮಾಲವಿ ಜಲಾಶಯದ ಗೇಟ್ ಸ್ಥಗಿತಗೊಂಡಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಸುರೇಶ ಯಳಕಪ್ಪನವರ

ಹಗರಿಬೊಮ್ಮನಹಳ್ಳಿ: ತುಂಗಾಭದ್ರಾ ಹಿನ್ನೀರು ಹರಿದು ಬರುತ್ತಿದ್ದರೂ ತಾಲೂಕಿನ ಮಾಲವಿ ಜಲಾಶಯದ ಗೇಟ್ ಸ್ಥಗಿತಗೊಂಡಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಮಾಲವಿ ಡ್ಯಾಂ ೨೫ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಈಗ ಕೇವಲ ೧೧ ಅಡಿ ಮಾತ್ರ ನೀರು ಸಂಗ್ರಹವಾಗಿದೆ. ೯ನೇ ಗೇಟ್‌ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದೆ. ಪೈಪ್‌ಲೈನ್ ಮೂಲಕ ಬರುತ್ತಿರುವ ನೀರು ಡ್ಯಾಂನಲ್ಲಿ ನಿಲ್ಲದೇ ಹರಿದು ಹೋಗುತ್ತಿದೆ. ಇದು ರೈತರ ನಿದ್ದೆಗೆಡಿಸಿದೆ.

ಗೇಟ್ ದುರಸ್ತಿ ಕಾಮಗಾರಿಗಾಗಿ ಸರ್ಕಾರ ₹೪.೨ ಕೋಟಿ ಮೊತ್ತ ಮೀಸಲಿರಿಸಿದರೂ ಈವರೆಗೂ ಕಾಮಗಾರಿ ಕೈಗೊಂಡಿಲ್ಲ. ಜಲಾಶಯದ ಬಲದಂಡೆ ಕಾಲುವೆ ೩೨.೫ ಕಿ.ಮೀ. ಇದ್ದು, ಇಡೀ ಕಾಲುವೆಯ ಉದ್ದಗಲಕ್ಕೂ ಗಿಡಮರಗಳು ಬೆಳೆದಿವೆ. ಇದು ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದೆ. ಜೊತೆಗೆ ಎಡದಂಡೆ ಕಾಲುವೆಯ ೧೬.೫ ಕಿ.ಮೀ.ವರೆಗೂ ಮುಳ್ಳುಕಂಠಿ ತುಂಬಿಕೊಂಡಿವೆ. ಎರಡು ಕಾಲುವೆಗಳಲ್ಲಿ ನೀರು ಹೋಗದ ಪರಿಸ್ಥಿತಿ ಇದ್ದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ವ್ಯರ್ಥವಾಗುತ್ತಿರುವ ನೀರು:

ಜಲಾಶಯದ ಅಚ್ಚುಕಟ್ಟು ಪ್ರದೇಶಗಳಾದ ಮಾಲವಿ, ಚಿಂತ್ರಪಳ್ಳಿ, ಕಡ್ಲಬಾಳು, ಬಾಚಿಗೊಂಡನಹಳ್ಳಿ, ಹರೇಗೊಂಡನಹಳ್ಳಿ, ಬ್ಯಾಸಿಗಿದೇರಿ, ಹಗರಿಬೊಮ್ಮನಹಳ್ಳಿ ರೈತರು ಹೊಲಗಳಿಗೆ ನೀರುಣಿಸಿಕೊಳ್ಳುವ ಆಸೆ ಮರಿಚೀಕೆಯಾಗಿದೆ. ಡ್ಯಾಂನ ಉಪಕಾಲುವೆಯ ಗೇಟ್‌ಗಳು ತುಕ್ಕು ಹಿಡಿದು ಸ್ಥಗಿತಗೊಂಡಿವೆ. ಜಲಾಶಯಕ್ಕೆ ಒಳಪಟ್ಟ ಪ್ರವಾಸಿ ಮಂದಿರದ ಕೊಠಡಿಗಳು ಕುಸಿದಿವೆ. ಗಿಡಗಂಟಿ ಬೆಳೆದು ನಿಂತಿವೆ. ಜಲಾಶಯದ ಮೇಲೆ ವಿದ್ಯುತ್ ವ್ಯವಸ್ಥೆ ಇಲ್ಲ.

ಮಾಲವಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಈ ಹಿಂದೆ ₹೧೬೫ ಕೋಟಿ ಅನುದಾನ ನೀಡಿದ್ದರು. ಹೂವಿನಹಡಗಲಿ ತಾಲೂಕಿನ ರಾಜವಾಳದಿಂದ ಪೈಪ್‌ಲೈನ್ ಮೂಲಕ ಜಲಾಶಯ ತುಂಬಿಸಲಾಯಿತು. ಆದರೆ ಈಗೀನ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ೯ನೇ ಗೇಟ್ ದುರಸ್ತಿ ಕಾಣದೇ ನೀರು ಪೋಲಾಗುತ್ತಿದೆ.

ರೈತರ ಕಣ್ಣೊರೆಸುವ ತಂತ್ರ:

ಇತ್ತೀಚೆಗೆ ಅಧಿಕಾರಿಗಳು ಗೇಟ್ ರಿಪೇರಿಗೆ ಮುಂದಾಗಿ ತಾತ್ಕಾಲಿಕ ತಡೆ ಮಾಡಿದ್ದರೂ ನೀರು ಸೋರಿಕೆ ಮಾತ್ರ ನಿಂತಿಲ್ಲ. ರೈತರ ಒತ್ತಾಯಕ್ಕೆ ತಾತ್ಕಾಲಿಕ ತಡೆಯಾಗಿ ಗೋಣಿಚೀಲಗಳನ್ನು ಬಳಸಿ ಪ್ಯಾಕ್ ಮಾಡಿದ್ದು, ಈಗ ಗೋಣಿ ಚೀಲಗಳು ಕೊಳೆಯಲು ಆರಂಭಿಸಿವೆ. ಶಾಶ್ವತ ಪರಿಹಾರ ಕಾಣ ಬೇಕಾದರೆ ಸರ್ಕಾರ ಗೇಟ್ ದುರಸ್ತಿಗೆ ನೀಡಿದ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕಿದೆ.

ರಾಜ್ಯ ಸರ್ಕಾರದಿಂದ ಈ ಮೊದಲು ₹೧೬೫ ಕೋಟಿ ಅನುದಾನ ಬಂದಾಗ ಮಾಲವಿ ಜಲಾಶಯಕ್ಕೆ ನೀರು ತರಲಾಯಿತು. ಈಗೀನ ಜನಪ್ರತಿನಿಧಿಗಳಿಗೆ ಪೈಪ್‌ಲೈನ್ ಮೂಲಕ ಜಲಾಶಯಕ್ಕೆ ಹರಿದು ಬರುತ್ತಿರುವ ನೀರನ್ನು ಉಳಿಸಿಕೊಳ್ಳಲಾಗುತ್ತಿಲ್ಲ ಎನ್ನುತ್ತಾರೆ ಮಾಲವಿ ಗ್ರಾಮದ ರೈತ ಹ್ಯಾಳ್ಯಾದ ಚನ್ನಬಸಪ್ಪ.

ಜಲಾಶಯದ ನೀರು ಖಾಲಿ ಆದ ಮೇಲೆ ಹೊಸ ಗೇಟ್‌ ಅಳವಡಿಕೆ ಮಾಡಬೇಕು. ಡ್ಯಾಂನ ಎರಡು ಬದಿಯ ಕಾಲುವೆಗಳನ್ನು ಸ್ವಚ್ಛಗೊಳಿಸಲು ಅನುದಾನ ಒದಗಿಸಬೇಕು. ಇಲ್ಲವಾದಲ್ಲಿ ಡ್ಯಾಂನ ನೀರು ಕೇವಲ ಎರಡು ಗ್ರಾಮಗಳ ಅಚ್ಚುಕಟ್ಟು ರೈತರ ಅಂತರ್ಜಲ ಪ್ರಮಾಣ ಸುಧಾರಿಸಲು ಸೀಮಿತವಾಗುತ್ತದೆ ಎನ್ನುತ್ತಾರೆ ಬಾಚಿಗೊಂಡನಹಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ರೋಹಿತ್.

Share this article