ನ.15ಕ್ಕೆ ಮಾಲೆಕಲ್ಲು ಅಮರಗಿರಿ ರಾಜಗೋಪುರ ಲೋಕಾರ್ಪಣೆ: ಸಚಿವ ಶಿವಲಿಂಗೇಗೌಡ

KannadaprabhaNewsNetwork |  
Published : Sep 23, 2026, 01:30 AM IST
ನ.15ರಂದು ಮಾಲೆಕಲ್ಲು ಅಮರಗಿರಿ ರಾಜಗೋಪುರ ಲೋಕಾರ್ಪಣೆ | Kannada Prabha

ಸಾರಾಂಶ

ದೇವಾಲಯದ ಅಭಿವೃದ್ಧಿ ಸಮಿತಿ, ಗ್ರಾಮಸ್ಥರು ಹಾಗೂ ಭಕ್ತರನ್ನೊಳಗೊಂಡು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾಲೆಕಲ್ಲು ಅಮರಗಿರಿ ತಿರುಪತಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ದೇವಾಲಯದ ಸಂಪ್ರದಾಯ ಹಾಗೂ ಧಾರ್ಮಿಕ ವಿಧಿವಿಧಾನಗಳಂತೆ ನ.15ರಂದು ರಾಜಗೋಪುರದ ಲೋಕಾರ್ಪಣೆ ನಡೆಯಲಿದೆ. ನ.16ರಂದು ವಿಶೇಷ ಧಾರ್ಮಿಕ ಸಮಾರಂಭ ಆಯೋಜಿಸಲಾಗಿದ್ದು, ಮುಜರಾಯಿ ಸಚಿವ ಬಸಂತಪ್ಪ ಸೇರಿ ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ದೇವಾಲಯದ ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರು ತೀರ್ಮಾನಿಸಲಿದ್ದಾರೆ

ಕನ್ನಡಪ್ರಭವಾರ್ತೆ ಅರಸೀಕೆರೆ

ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಾಲೆಕಲ್ಲು ಅಮರಗಿರಿ ತಿರುಪತಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ರಾಜಗೋಪುರ, ಯಾತ್ರಿ ನಿವಾಸ ಹಾಗೂ ದಾಸೋಹ ಮಂದಿರವನ್ನು ನ.15 ಮತ್ತು 16ರಂದು ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.

ದೇವಾಲಯದ ಅಭಿವೃದ್ಧಿ ಸಮಿತಿ, ಗ್ರಾಮಸ್ಥರು ಹಾಗೂ ಭಕ್ತರನ್ನೊಳಗೊಂಡು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾಲೆಕಲ್ಲು ಅಮರಗಿರಿ ತಿರುಪತಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ದೇವಾಲಯದ ಸಂಪ್ರದಾಯ ಹಾಗೂ ಧಾರ್ಮಿಕ ವಿಧಿವಿಧಾನಗಳಂತೆ ನ.15ರಂದು ರಾಜಗೋಪುರದ ಲೋಕಾರ್ಪಣೆ ನಡೆಯಲಿದೆ. ನ.16ರಂದು ವಿಶೇಷ ಧಾರ್ಮಿಕ ಸಮಾರಂಭ ಆಯೋಜಿಸಲಾಗಿದ್ದು, ಮುಜರಾಯಿ ಸಚಿವ ಬಸಂತಪ್ಪ ಸೇರಿ ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ದೇವಾಲಯದ ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.

ಎರಡು ದಿನ ಭಕ್ತರಿಗೆ ನಿರಂತರ ದಾಸೋಹದ ವ್ಯವಸ್ಥೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಕೈಗೊಳ್ಳಲಿರುವ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮಾಲೆಕಲ್ಲು ಅಮರಗಿರಿ ಕ್ಷೇತ್ರಕ್ಕೆ ಆಗಮಿಸಿದ ಕೆ.ಎಂ. ಶಿವಲಿಂಗೇಗೌಡ ಅವರನ್ನು ದೇವಾಲಯದ ಸಂಪ್ರದಾಯದಂತೆ ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಮಂಗಳಾರತಿ ಸ್ವೀಕರಿಸಿ ಉತ್ತಮ ಮಳೆ-ಬೆಳೆಯಾಗಿ ರಾಜ್ಯದ ಜನತೆ ಸಮೃದ್ಧಿ ಹಾಗೂ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ದೇವಾಲಯದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಲೋಕಾರ್ಪಣೆ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ಸಂತೋಷ್ ಕುಮಾರ್, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಗತಿಪರ ಸಂಘಟನೆಗಳ ಪ್ರಮುಖರು ಭಾಗವಹಿಸಿ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಅಶೋಕ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್, ರೇಣುಕಾಸ್ವಾಮಿ, ರಂಗಸ್ವಾಮಿ, ಅಮ್ಮನಹಟ್ಟಿ ಹರೀಶ್, ಮಾಜಿ ಸದಸ್ಯ ಈಶ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಾತಿನ ತುಣುಕು ವೈರಲ್ ಮಾಡಿ ಅಪಪ್ರಚಾರ: ಸಚಿವರ ಆರೋಪ

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಕಲೇಶಪುರ ತಾಲೂಕಿನಲ್ಲಿ ನಡೆದ ಪ್ರಜಾಸೇವಾ ಆಂದೋಲನದ ವೇಳೆ ತಾವು ನೀಡಿದ ಹೇಳಿಕೆ ಒಂದು ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಅಧಿಕಾರಿಗಳು ಜನಸಾಮಾನ್ಯರೊಂದಿಗೆ ಗೌರವಯುತವಾಗಿ ನಡೆದುಕೊಂಡು ಸೇವೆ ಒದಗಿಸಬೇಕು ಎಂಬುದಷ್ಟೇ ತಮ್ಮ ಉದ್ದೇಶವಾಗಿತ್ತು. ಅಲ್ಲದೆ, ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ಲಂಚ ನೀಡಬಾರದು ಎಂದು ತಾವು ಸ್ಪಷ್ಟವಾಗಿ ಹೇಳಿದ್ದರೂ, ಆ ಮಾತುಗಳನ್ನು ಮರೆಮಾಚಿ ಕೇವಲ ಒಂದು ತುಣುಕನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಆರೋಪ ಮಾಡುವವರು ಯಾವುದೇ ಹೇಳಿಕೆಯ ಸಂದರ್ಭ ಹಾಗೂ ಸಂಪೂರ್ಣ ವಿಚಾರವನ್ನು ತಿಳಿದುಕೊಂಡು ಮಾತನಾಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.

ಜನರ ಬಳಿಗೇ ತೆರಳಿ ಕುಂದುಕೊರತೆ ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾಸೇವಾ ಆಂದೋಲನದ ಮೂಲಕ ಕ್ರಮ ಕೈಗೊಂಡಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆದರೆ ಇದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವು ನಾಯಕರು ಅಪಾರ್ಥ ಬರುವ ರೀತಿಯಲ್ಲಿ ವಿಚಾರಗಳನ್ನು ಬಿಂಬಿಸುತ್ತಿದ್ದಾರೆ ಎಂದು ಸಚಿವರು ದೂರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿ.ಎಫ್: ಕಾರ್ಮಿಕರ ವೇತನ‌ಮಿತಿ ₹ 25,000ಕ್ಕೆ ಹೆಚ್ಚಳ: ಪಿಎಫ್ ಆಯುಕ್ತ ಎಂ. ಸುಬ್ರಹ್ಮಣ್ಯಂ
ವಿದ್ಯಾರ್ಥಿಗಳು ಶಿಸ್ತು ಅಳವಡಿಸಿ: ಡಾ. ಕಣ್ಣೂರ್