ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷಗೆ ದುರುದ್ದೇಶದಿಂದ ಕಿರುಕುಳ: ಶಾರದಾ ಅಪ್ಪಾಜಿ

KannadaprabhaNewsNetwork | Published : May 19, 2024 1:45 AM

ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಆನಂದ್‌ ಯಾವುದೇ ರೀತಿಯ ಭ್ರಷ್ಟಾಚಾರ, ಕರ್ತವ್ಯಲೋಪ ಎಸಗದಿದ್ದರೂ ರಾಜಕೀಯ ಪ್ರಭಾವಕ್ಕೆ ಮಣಿದು ದುರುದ್ದೇಶದಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಐದು ಬಾರಿ ವರ್ಗಾವಣೆ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿ ಹೊರ ಜಿಲ್ಲೆಗಳಿಗೂ ವರ್ಗಾಯಿಸಲಾಗಿದೆ.

ಕನ್ನಡಪ್ರಭ ವಾರ್ತೆ ಭದ್ರಾವತಿ

ಕೆಪಿಟಿಸಿಎಲ್ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರ ರಾಜಕೀಯ ಒತ್ತಡಕ್ಕೆ ಮಣಿದು ವಿನಾಕಾರಣ ನಿರಂತರ ವರ್ಗಾಯಿಸುವ ಜೊತೆಗೆ ಕರ್ತವ್ಯದಿಂದ ಅಮಾನತುಗೊಳಿಸಿ ಮಾನಸಿಕ ಹಿಂಸೆ ನೀಡುತ್ತಿರುವುದು ಅತ್ಯಂತ ನೋವಿನ ಸಂಗತಿ, ಇದನ್ನು ಜಾತ್ಯತೀತ ಜನತಾದಳ (ಜೆಡಿಎಸ್‌) ಖಂಡಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಎಚ್ಚರಿಸಿದರು.

ಜೆಪಿಎಸ್ ಕಾಲನಿ ಮೆಸ್ಕಾಂ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂಭಾಗ ಶನಿವಾರ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿ ಸತ್ಯಾಗ್ರಹದ ನೇತೃತ್ವವಹಿಸಿ ಮಾತನಾಡಿ ೧೯೯೭ರಿಂದ ಗುತ್ತಿಗೆ ನೌಕರನಾಗಿ ಹಾಗೂ ೨೦೦೮ರಿಂದ ಕಾಯಂ ನೌಕರನಾಗಿ ನೇಮಕಗೊಂಡು ಮಾರ್ಗದಾಳು (ಲೈನ್‌ಮೆನ್) ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸ್ತುತ ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಆನಂದ್‌ ಯಾವುದೇ ರೀತಿಯ ಭ್ರಷ್ಟಾಚಾರ, ಕರ್ತವ್ಯಲೋಪ ಎಸಗದಿದ್ದರೂ ರಾಜಕೀಯ ಪ್ರಭಾವಕ್ಕೆ ಮಣಿದು ದುರುದ್ದೇಶದಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಐದು ಬಾರಿ ವರ್ಗಾವಣೆ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿ ಹೊರ ಜಿಲ್ಲೆಗಳಿಗೂ ವರ್ಗಾಯಿಸಲಾಗಿದೆ. ಸಾಲದೆಂಬಂತೆ ಸುಳ್ಳು ಮೊಕದ್ದಮೆ ದಾಖಲಿಸಿ ಭಯದ ವಾತಾವರಣ ನಿರ್ಮಿಸಿ ನೌಕರ ವರ್ಗದ ನೈತಿಕ ಧೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತಕ್ಷಣ ಅಮಾನತು ಆದೇಶ ಹಿಂಪಡೆದು ನಗರ ಉಪವಿಭಾಗದ ವ್ಯಾಪ್ತಿಯಲ್ಲಿಯೇ ನೌಕರ ಆನಂದ್‌ರನ್ನು ಮುಂದುವರಿಸಲು ಒತ್ತಾಯಿಸಿದರು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂಬಂಧ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು. ಪಕ್ಷದ ನಗರ ಅಧ್ಯಕ್ಷ ಆರ್.ಕರುಣಾಮೂರ್ತಿ, ಪ್ರಮುಖರಾದ ಗೊಂದಿ ಜಯರಾಂ, ತಿಮ್ಮೇಗೌಡ, ರಾಮಕೃಷ್ಣ, ಎಂ.ಎ.ಅಜಿತ್, ಉದಯಕುಮಾರ್, ಉಮೇಶ್, ಮಧುಸೂಧನ್, ಭಾಗ್ಯಮ್ಮ ಸೇರಿ ಇನ್ನಿತರರಿದ್ದರು.