ಬೆರಗುಗೊಳಿಸಿದ ಅಂಧ ಮಕ್ಕಳ ಮಲ್ಲಕಂಬ ಯೋಗ ಪ್ರದರ್ಶನ

KannadaprabhaNewsNetwork |  
Published : Apr 09, 2026, 02:45 AM IST
ಯೋಗಾಸನ ಪ್ರದರ್ಶನದ ಭಂಗಿಗಳು,, | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದ ವಿಶೇಷ ಪ್ರದರ್ಶನವಾಗಿ ಈ ಬಾರಿ ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ಮಕ್ಕಳ ವಸತಿ ಶಾಲೆಯ ೩೦ ಅಂಧ ಮಕ್ಕಳು ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ನೀಡಿದರು.

ಹಾನಗಲ್ಲ: ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದ ವಿಶೇಷ ಪ್ರದರ್ಶನವಾಗಿ ಈ ಬಾರಿ ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ಮಕ್ಕಳ ವಸತಿ ಶಾಲೆಯ ೩೦ ಅಂಧ ಮಕ್ಕಳು ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ನೀಡಿದರು.ವೇದಿಕೆ ಮೇಲೆ ಕೈ ಕೈ ಹಿಡಿದು ಸಾಲು ಸಾಲಾಗಿ ಬಂದ ಮಕ್ಕಳು ಒಬ್ಬರಿಗೊಬ್ಬರು ಆಸರೆಯಾಗಿ ಸರಿಸುಮಾರು ೨ ಗಂಟೆಯ ಕಾಲ ನೀಡಿದ ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ಸಭಾಸದರನ್ನು ಅಚ್ಚರಿಗೊಳಿಸಿತು. ಕಣ್ಣಿದ್ದವರೂ ಬೆಕ್ಕಸ ಬೆರಗಾಗಿ ನೋಡುವಂತಹ ಪ್ರದರ್ಶನ ಇದಾಗಿತ್ತು.

ಸ್ಪರ್ಶಜ್ಞಾನದ ಮೂಲಕವೇ ಯೋಗ, ಮಲ್ಲಕಂಬ ವಿದ್ಯೆ ಕರಗತ ಮಾಡಿಕೊಂಡ ೧೮ ಮಕ್ಕಳು, ಇದರಲ್ಲಿ ೫ ಹೆಣ್ಣು ಮಕ್ಕಳು ಸೇರಿ ಗಂಡಭೇರುಂಡಾಸನ, ತ್ರ್ಯಾಂಗ ಮುಕುಟಾಸನ, ದೀಪಾಸನ, ವಾಲಿಖಿಲ್ಯಾಸನ, ಶಲಭಾಸನ, ವೃಶ್ಚಿಕಾಸನ, ಸವಿತ್ರಾಸನ, ಮುಕ್ತಹಸ್ತ ವೃಶ್ಚಿಕಾಸನ ಸೇರಿದಂತೆ ವಿವಿಧ ಯೋಗಾಸನಗಳ ಮೂಲಕ ನೋಡುವವರಿಗೆ ಅಚ್ಚರಿಯನ್ನೇ ಮೂಡಿಸಿದರು. ಇದರಲ್ಲಿ ವೈಯಕ್ತಿಕ, ಸಾಂಘಿಕ ಪ್ರದರ್ಶನಗಳೂ ಇದ್ದವು. ಸಂಘಟಕರು ಮಲ್ಲಕಂಬ ತಂದು ವೇದಿಕೆ ಮೇಲೆ ನಿಲ್ಲಿಸಿದಾಕ್ಷಣ ಸಾಲು ಸಾಲಾಗಿ ಕೈಹಿಡಿದು ಸ್ಪರ್ಶ ಜ್ಞಾನದ ಮೂಲಕವೇ ಪ್ರದರ್ಶನಕ್ಕೆ ಮುಂದಾದ ಅಂಧ ಮಕ್ಕಳು ನಿರಾಯಾಸವಾಗಿ, ಕಿಂಚಿತ್ತೂ ವ್ಯತ್ಯಾಸವಿಲ್ಲದೆ ಮಲ್ಲಕಂಬದಲ್ಲಿಯೇ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ನಟರಾಜಾಸನ, ಕೃಸ್ಥಾಸನ, ತೆಡಲ್, ಪಶ್ಚಿಮೋತ್ಥಾಸನ, ರಾಜಾಸನ, ಮಯೂರಾಸನ, ಹುಮಾನಾಸನ ಸೇರಿದಂತೆ ಹಲವು ಆಸನಗಳನ್ನು ಮಲ್ಲಕಂಬದಲ್ಲಿಯೇ ಪ್ರದರ್ಶಿಸಿದರು.

ಯೋಗ ಹಾಗೂ ನೃತ್ಯದಲ್ಲಿ ಕರ್ನಾಟಕ ಸರ್ಕಾರದ ಕಲಾಶ್ರೀ ಪ್ರಶಸ್ತಿ ವಿಜೇತ ವಿದ್ಯಾರ್ಥಿ ಮೈಲಾರಿ ವಗ್ಗರ ತನ್ನ ವಿಶೇಷ ಯೋಗ ಪ್ರದರ್ಶನದ ಮೂಲಕ ಗಮನ ಸೆಳೆದನು.ಈ ಮಕ್ಕಳ ಯೋಗ ಮಲ್ಲಕಂಬ ಪ್ರದರ್ಶನದ ಬಗ್ಗೆ ಕೇಳಿದ್ದೆವು. ಹೀಗಾಗಿ ಕರೆಸಿದೆವು. ಎಲ್ಲ ಬಗೆಯ ನಾಟಕಗಳನ್ನು ವಿಮರ್ಶಿಸುವ ನಮ್ಮ ಊರಿನ ಕೃಷಿ ಸಮುದಾಯ, ಪರ ಊರುಗಳಿಂದ ಬಂದ ರಂಗಪ್ರೇಮಿಗಳು ಈ ಪ್ರದರ್ಶನ ನೋಡಿ ಬೆಕ್ಕಸ ಬೆರಗಾದರು ಎಂದು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ರಚನಾತ್ಮಕ ಸಮಾಜ ಕಟ್ಟಲು ಜನಪದ ಪಾತ್ರ ಹಿರಿದು: ಡಾ. ಸಿದ್ದರಾಮ ಸ್ವಾಮೀಜಿ