ಮಲ್ಲಿಕಾರ್ಜುನ ಖರ್ಗೆ ಭಾಷಣ ತಿರುಚಲಾಗಿದೆ: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

KannadaprabhaNewsNetwork |  
Published : May 23, 2025, 12:22 AM IST
35 | Kannada Prabha

ಸಾರಾಂಶ

ಇವನಿಗೆ ದಲಿತ ಸಮುದಾಯದ ಜನರು ತಕ್ಕ ಬುದ್ದಿ ಕಲಿಸಬೇಕು. ಪೆಹಲ್ಗಾಮ್ ದಾಳಿ ಎಂದು ಜನರನ್ನು ಮೂರ್ಖರನ್ನಾಗಿ ಮಾಡಿದ್ದೀರಿ. ಅಂತಹ ವಿಚಾರಗಳನ್ನು ನಾವು ಪ್ರಶ್ನೆ ಮಾಡುವುದು ತಪ್ಪೇ? ಮಾಹಿತಿ ಕೇಳೋದೆ ತಪ್ಪಾ? ಸೀಜ್‌ ಫೈರ್ ಯಾವಾಗ ಯಾಕೆ ಘೋಷಣೆ ಮಾಡಿದಿರಿ ಅಂತ ಕೇಳೋದೆ ತಪ್ಪಾ? ಪ್ರಶ್ನೆ ಮಾಡಿದರೆ ನಾವು ದೇಶ ದ್ರೋಹಿಗಳಾ? ಕೊಂದೋರು ಯಾರು ಅಂತ ಇನ್ನೂ ಕಂಡುಹಿಡಿದಿಲ್ಲ. ಬೀದಿಯಲ್ಲಿ ನಿಂತು ಪ್ರೆಸ್ ಮೀಟ್ ಮಾಡಿ ಹೋಗ್ತೀಯಲ್ಲಪ್ಪ ಪ್ರತಾಪ್ ಸಿಂಹ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣವನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸಮರ್ಥಿಸಿಕೊಂಡರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಸಕ್ರಿಯ ರಾಜಕಾರಣದಲ್ಲಿರುವ ಮುತ್ಸದ್ಧಿ ರಾಜಕಾರಣಿಯನ್ನು ಇಲ್ಲಿನ ಮಾಜಿ ಸಂಸದ ಪ್ರತಾಪ್ ಸಿಂಹ ಬಾಯಿಗೆ ಬಂದಹಾಗೆ ಮಾತನಾಡಿದ್ದಾನೆ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

ಇವನಿಗೆ ದಲಿತ ಸಮುದಾಯದ ಜನರು ತಕ್ಕ ಬುದ್ದಿ ಕಲಿಸಬೇಕು. ಪೆಹಲ್ಗಾಮ್ ದಾಳಿ ಎಂದು ಜನರನ್ನು ಮೂರ್ಖರನ್ನಾಗಿ ಮಾಡಿದ್ದೀರಿ. ಅಂತಹ ವಿಚಾರಗಳನ್ನು ನಾವು ಪ್ರಶ್ನೆ ಮಾಡುವುದು ತಪ್ಪೇ? ಮಾಹಿತಿ ಕೇಳೋದೆ ತಪ್ಪಾ? ಸೀಜ್‌ ಫೈರ್ ಯಾವಾಗ ಯಾಕೆ ಘೋಷಣೆ ಮಾಡಿದಿರಿ ಅಂತ ಕೇಳೋದೆ ತಪ್ಪಾ? ಪ್ರಶ್ನೆ ಮಾಡಿದರೆ ನಾವು ದೇಶ ದ್ರೋಹಿಗಳಾ? ಕೊಂದೋರು ಯಾರು ಅಂತ ಇನ್ನೂ ಕಂಡುಹಿಡಿದಿಲ್ಲ. ಬೀದಿಯಲ್ಲಿ ನಿಂತು ಪ್ರೆಸ್ ಮೀಟ್ ಮಾಡಿ ಹೋಗ್ತೀಯಲ್ಲಪ್ಪ ಪ್ರತಾಪ್ ಸಿಂಹ ಎಂದು ಟೀಕಿಸಿದರು.

ನಿನಗೆ ನಯಾ ಪೈಸೆ ಬೆಲೆ ಇಲ್ಲ, ನಿನ್ನನ್ನು ಬಿಜೆಪಿ ಕಚೇರಿಗೂ ಸೇರಿಸಲ್ಲ. ನಾನು ಐದು ಬಾರಿ ಸೋತರೂ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಪ್ರೆಸ್ ಮೀಟ್ ಮಾಡುತ್ತೇನೆ. ನನಗೆ ನಮ್ಮ ಪಕ್ಷದ ಮುಖಂಡರು ಬೆಲೆ‌ ಕೊಡುತ್ತಾರೆ. ಬಿಜೆಪಿ ಕಚೇರಿಯಲ್ಲಿ ಕೂರಲೂ ನಿನಗೆ ಜಾಗ ಕೊಡಲ್ಲ. ನಿನಗೆ ಮೂರು ಕಾಸಿನ ಬೆಲೆ ಕೊಡಲ್ಲ. ನೀನು ಅಚಾನಕ್ಕಾಗಿ ಎರಡು ಬಾರಿ ಗೆದ್ದು ಬಂದಿದ್ದೀಯಾ. ನೀನು ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತೀಯಾ? ಅವರ ರಾಜಕೀಯ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲ. ನೀನು ಅವರ ಬಗ್ಗೆ ಮಾತನಾಡುತ್ತೀಯಾ ಎಂದು ಪ್ರಶ್ನಿಸಿದರು.

ಪರಮೇಶ್ವರ ಪರ ನಾವಿದ್ದೇವೆ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದೆ. ಕೇಂದ್ರ ಸರ್ಕಾರ ಇಂತಹ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನ ಪ್ರಭಾವಿ ನಾಯಕರ ಮೇಲೆ ಇಡಿ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಡಾ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದರೆ ಸಂಬಂಧಿಸಿದ ಶಿಕ್ಷಣ ಇಲಾಖೆ ಮೂಲಕ ತನಿಖೆ ನಡೆಸಬೇಕು. ಆದರೆ ಇಡಿಗೆ ಈ ರೀತಿಯ ದಾಳಿ ಮಾಡಲು ಅಧಿಕಾರ ಇಲ್ಲ. ಬಿಜೆಪಿಗೆ ದಲಿತರನ್ನು ಕಂಡರೆ ಆಗುವುದಿಲ್ಲ. ಆದ್ದರಿಂದ ದಲಿತ ನಾಯಕರನ್ನು ಗುರಿಯಾಗಿಸಿಕೊಂಡಿದೆ. ಡಾ. ಪರಮೇಶ್ವರ್ ಅವರು ತಮ್ಮ ತಂದೆ ಕಾಲದಿಂದಲೂ ಶಿಕ್ಷಣ ಸಂಸ್ಥೆ ನಡೆಸುತ್ತಾ ಬಂದಿದ್ದಾರೆ. ಇಡಿ ದಾಳಿ ಮಾಡಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದುವರೆಗೆ ಕೇಂದ್ರ ಸರ್ಕಾರ 28,878 ಇಡಿ ದಾಳಿ ಮಾಡಿದೆ. ಅದರಲ್ಲಿ ಕೇವಲ 992 ಪ್ರಕರಣಗಳಿಗೆ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಶಿಕ್ಷೆ ಆಗಿರುವುದು ಕೇವಲ 23 ಪ್ರಕರಣಗಳಲ್ಲಿ ಮಾತ್ರ ಎಂದರು.

ಶೇ. 98 ಪರ್ಸೆಂಟ್ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಏಳೆಂಟು ದಲಿತ ಮುಖಂಡರನ್ನು ಪಟ್ಟಿ ಮಾಡಿದ್ದು, ಇವರನ್ನು ಗುರಿಯಾಗಿಸಿಕೊಂಡು ದಾಳಿ‌ಮಾಡುವ ಸಾಧ್ಯತೆ ‌ಇದೆ. ಜಾತಿ ಗಣತಿ ವರದಿ ಬಂದರೆ ದಲಿತರು ತಮ್ಮ ಪರವಾಗಿ ಇರಲ್ಲ ಅಂತ ಹೀಗೆಲ್ಲಾ ಮಾಡುತ್ತಿದ್ದಾರೆ. ರನ್ಯಾ ರಾವ್ ವಿಚಾರದಲ್ಲಿ ಬಿಜೆಪಿ ಐಟಿ ಸೆಲ್‌ಅಥವಾ ಇಡಿ ಅವರು ದಾಳಿ ಮಾಡಿದ್ದಾರಾ ಎಂದು ಅವರು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಹೇಶ್‌, ಹೆಡತಲೆ ಮಂಜುನಾಥ್‌ ಇದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ