ಮಲ್ಲಿಕಾರ್ಜುನ ಖರ್ಗೆ ಯಾವುದೇ ಧರ್ಮದ ಅಪನಿಂದನೆ ಮಾಡಿಲ್ಲ: ಶಾಸಕ ಪ್ರಸಾದ ಅಬ್ಬಯ್ಯ

KannadaprabhaNewsNetwork | Published : Jan 30, 2025 12:33 AM

ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಧರ್ಮದ ಅಪನಿಂದನೆ ಮಾಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾರ್ಯವೈಖರಿ ವಿರುದ್ಧ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದರೂ ಪಾಪ ತೊಳೆಯುವುದಿಲ್ಲ ಎಂದು ಹೇಳಿದ್ದಾರೆ.

ಹುಬ್ಬಳ್ಳಿ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಧರ್ಮದ ಅಪನಿಂದನೆ ಮಾಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾರ್ಯವೈಖರಿ ವಿರುದ್ಧ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದರೂ ಪಾಪ ತೊಳೆಯುವುದಿಲ್ಲ ಎಂದು ಹೇಳಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದ್ದಾರೆ. ಜತೆಗೆ ಮನುಸ್ಮೃತಿ ಆಧಾರಿತ ಸಂವಿಧಾನ ರಚನೆ ಮಾಡಿರುವುದಾಗಿ ಸ್ವಾಮೀಜಿಯೊಬ್ಬರು ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯೆ ಕೊಡುವ ಬಿಜೆಪಿ ಮುಖಂಡರು ಪ್ರಯಾಗರಾಜ್‌ನಲ್ಲಿ ಸ್ವಾಮಿಗಳೊಬ್ಬರು ಪ್ರತ್ಯೇಕ ಸಂವಿಧಾನ ರಚನೆ ಮಾಡಲಾಗಿದ್ದು ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆ ಬಗ್ಗೆ ಬಿಜೆಪಿ ಮುಖಂಡರು ಚಕಾರ ಎತ್ತುತ್ತಿಲ್ಲ. ನಿಮಗೆ ನಾಚಿಕೆ ಆಗಬೇಕು ಎಂದು ಟೀಕಿಸಿದ್ದಾರೆ.

ಖರ್ಗೆ ಅವರು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆ ಅಥವಾ ಒಂದು ಧರ್ಮದ ಬಗ್ಗೆ ಅಪನಿಂದನೆ ಮಾಡಿಲ್ಲ. ಬದಲಾಗಿ ದೇಶ ನಡೆಸುವ ಅತ್ಯುನ್ನತ ಹುದ್ದೆಯಲ್ಲಿರುವ ಗೃಹಮಂತ್ರಿ ಅಮಿತ್ ಶಾ‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಕಾರ್ಯವೈಖರಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ ಎಂದಿದ್ದಾರೆ.

ಬಡವರ, ನಿರ್ಗತಿಕರ ಬಗ್ಗೆ ಕಾಳಜಿ ಇರದ ಇವರು ಯಾವುದೇ ಪುಣ್ಯಸ್ನಾನ ಮಾಡಿದರೂ ಪಾಪ ತೊಳೆಯುವುದಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಮಾತ‌ನಾಡುವ ಮೊದಲು ಯಾವುದೇ‌ ಧರ್ಮದ ವಿರುದ್ಧ ಮಾತನಾಡುತ್ತಿಲ್ಲ. ಒಂದು ವೇಳೆ ನನ್ನ ಮಾತುಗಳಿಂದ ನೋವಾಗಿದ್ದರೆ‌ ಕ್ಷಮೆ ಇರಲಿ ಎಂದು ಹೇಳಿಯೇ ಭಾಷಣ ಮಾಡಿದ್ದಾರೆ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರಯಾಗರಾಜ್‌ನಲ್ಲಿ ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್ ಸ್ವರೂಪ ಮಹಾರಾಜ್ ಅವರು ರಾಮರಾಜ್ಯ, ಮನುಸ್ಮೃತಿ ಧರ್ಮಶಾಸ್ತ್ರ ಹಾಗೂ ಚಾಣಕ್ಯನ ಪುಸ್ತಕ ಆಧರಿಸಿದ 501 ಪುಟಗಳ ಸಂವಿಧಾನವನ್ನು ಫೆ. 3ರಂದು ಮಹಾಕುಂಭ ಮೇಳದಲ್ಲಿ ಅನಾವರಣ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ಮತಿಭ್ರಮೆ ಆಗಿರಬಹುದು. ಹೀಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಅಬ್ಬಯ್ಯ ಕಿಡಿಕಾರಿದರು.

ಸ್ವಾಭಿಮಾನ ಗೌರವ ಹಾಗೂ ಘನತೆಯ ಬದುಕಿನ ಹಕ್ಕು ನೀಡಿರುವ ಸಂವಿಧಾನ ಅಸ್ತಿತ್ವದಲ್ಲಿರುವಾಗ ಅದರ ಮಹತ್ವ ಅರಿಯದೆ ಸ್ವಾಮೀಜಿಗಳ ಮಾತು ದೇಶದ್ರೋಹದ ಮಾತುಗಳಾಗಿವೆ. ಇವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಾಗಬೇಕು ಎಂದರು.

ಹೆಣ್ಣು ಮಕ್ಕಳ ಸಮಾನ ಹಕ್ಕು ತಿರಸ್ಕರಿಸುವ ಮತ್ತು ಶೋಷಿತರನ್ನು ಕಂಡರೆ ಅಸಹ್ಯ ಪಡುವ ಮನಸ್ಮೃತಿಯಿಂದ ಮತ್ತು ಮೌಢ್ಯವನ್ನೇ ಉಸಿರಾಡುವ ಧಾರ್ಮಿಕ ಗ್ರಂಥಗಳನ್ನು ಆಧರಿಸಿ ರಚಿಸಲಾಗಿದೆ ಎಂದು ಹೇಳಲಾಗಿದೆ. ಸ್ವಾಮಿಗಳು ಅನಾವರಣಗೊಳಿಸುವ ಸಂವಿಧಾನವನ್ನು ಜನ ಒಪ್ಪುವುದಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗ ಇಟ್ಟುಕೊಂಡು ಮನುವಾದಿಗಳ ವಿರುದ್ಧ ದೇಶಾದ್ಯಂತ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Share this article