ಇನ್ನೆರಡು ಪರ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಿಎಂ: ಚಿಂಚನಸೂರು ಭವಿಷ್ಯ

KannadaprabhaNewsNetwork | Published : Jul 10, 2024 12:32 AM

ಸಾರಾಂಶ

ಮುಂದಿನ 2 ವರ್ಷಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಮಂತ್ರಿ ಆಗುವ ಯೋಗ ಇದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಭವಿಷ್ಯ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಮುಂದಿನ 2 ವರ್ಷಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಮಂತ್ರಿ ಆಗುವ ಯೋಗ ಇದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಭವಿಷ್ಯ ನುಡಿದಿದ್ದಾರೆ.

ಪಟ್ಟಣದಲ್ಲಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಕುಳಿತಿರುವ ಖುರ್ಚಿಯಲ್ಲಿ ಖರ್ಗೆ ಕುಳಿತಿದ್ದಾರೆ. ಅವರು ಪ್ರಧಾನ ಮಂತ್ರಿ ಆಗುವುದರಿಂದ ಕಲ್ಯಾಣ ಕರ್ನಾಟಕ ಭಾಗ ಸಂಪೂರ್ಣ ಅಭಿವೃದ್ಧಿ ಆಗಲಿದೆ ಎಂದರು.

ಕೇಂದ್ರದ ಎನ್‌ಡಿಎ ಸರ್ಕಾರ ಎರಡು ವರ್ಷದ ಸರ್ಕಾರ. ಅಲ್ಪಬಲ ಮತ್ತು ಅಲ್ಪಾಯು ಹೊಂದಿದೆ. ಎನ್.ಡಿ.ಎ ಸರ್ಕಾರ ಕೇವಲ ಎರಡು ವರ್ಷ ಮಾತ್ರ ಇರುತ್ತದೆ ಎಂದು ಅವರು ಹೇಳಿದರು.

ಅಭಿನಂದನಾ ಸಮಾರಂಭ: ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜು.10ರಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಈ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯ ನಂತರ ಚಿಂಚನಸೂರು ತಿಳಿಸಿದರು.

ಕಲಬುರಗಿ ಲೋಕಸಭೆಗೆ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಗೆಲುವು ಸಾಧ್ಯವೆಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮುಂತಾದವರ ಹತ್ತಿರ ಒತ್ತಾಯ ಮಾಡಿದ್ದೆ. ಆರ್.ಕೆ. ಅವರಿಗಾಗಿ ಬಿಜೆಪಿ ಪಕ್ಷ ಜತೆಗೆ ಎಂ.ಎಲ್.ಸಿ ಮತ್ತು ಸಂಪುಟ ದರ್ಜೆ ಚೇರ್ಮನ್ ಮತ್ತು ನನ್ನ ಮಡದಿ ದೆಹಲಿಯ ಆಹಾರ ನಿಗಮದ ನಿರ್ದೇಶಕರಾಗುವುದು ಮುಂತಾದ ಹುದ್ದೆಗಳನ್ನು ಬಿಟ್ಟು ಅವರಿಗಾಗಿ 6 ತಿಂಗಳು ದುಡಿದೆ ಎಂದು ಅವರು ತಿಳಿಸಿದರು.

ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯರಾಗಿದ್ದು, ಕ್ಷೇತ್ರ ಅಭಿವೃದ್ಧಿ ಪರ್ವ ಕಾಣಲಿದೆ. ಅವರನ್ನು ಗೆಲ್ಲಿಸಿದ ನೀವೆಲ್ಲರೂ ಧನ್ಯರು ಎಂದರು.

ಗುರುಮಠಕಲ್ ಹಾಗೂ ಸೈದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಜಿ.ಎಚ್. ಕಲ್ಯಾಣ ಮಂಟಪದಲ್ಲಿ ಜು.10 ರಂದು ಬೆ.11 ಗಂಟೆಗೆ ಸಂಸದ ಆರ್.ಕೆ., ನೂತನ ಎಂ.ಎಲ್.ಸಿ ಗಳಾದ ಚಂದ್ರಶೇಖರ ಪಾಟೀಲ್, ಜಗದೇವ ಗುತ್ತೇದಾರ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಮತಕ್ಷೇತ್ರದ ಹೆಚ್ಚಿನ ಜನರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನರೆಡ್ಡಿ, ಕಬ್ಬಲಿಗ ಸಮಾಜದ ಪ್ರಭಾವಿ ಮುಖಂಡ ಹಾಗೂ ಕೋಲಿ, ಕಬ್ಬಲಿಗ ಸಮಾಜದ ಅಧ್ಯಕ್ಷ ದತ್ತು ಬಸವಕಲ್ಯಾಣ, ಮುಖಂಡರಾದ ಶ್ರೇಣಿಕುಮಾರ್ ಧೋಕಾ, ರವೀಂದ್ರ ರೆಡ್ಡಿ ಪಾಟೀಲ್, ರಘುನಾಥರೆಡ್ಡಿ ನಜರಾಪುರ, ಬಾಲಪ್ಪ ನೀರೆಟಿ, ಕಿಷ್ಟಪ್ಪ ಪುರುಷೋತ್ತಮ್, ಶ್ರೀನಿವಾಸ್ ಗುಮಡಾಲ್ ಇತರರಿದ್ದರು.

Share this article