ಕಡೂರಿನಲ್ಲಿ ಮಲ್ಲಿಕಾರ್ಜುನನ ಅದ್ಧೂರಿ ಬಂಡಿ ಜಂಪ ಉತ್ಸವ

KannadaprabhaNewsNetwork | Published : Mar 13, 2025 12:46 AM

ಸಾರಾಂಶ

ಒಂಬತ್ತು ವರ್ಷಕ್ಕೊಮ್ಮೆ ನಡೆಯುವ ತಾಲೂಕಿನ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬಾಯಿಬೀಗ ಬಂಡಿ ಜಂಪ ಮಹೋತ್ಸವವು ಸಿಗೇಹಡ್ಲು ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಮೂರನೇ ಬಂಡಿಯ ಭಕ್ತರು ಅದ್ಧೂರಿಯ ಮೆರವಣಿಗೆ ಮತ್ತು ಸಂಭ್ರಮದೊಂದಿಗೆ ಜಾತ್ರಾ ಮಹೋತ್ಸವಕ್ಕೆ ದಾಂಗುಡಿ ಇಟ್ಟರು.

ಒಂಬತ್ತು ವರ್ಷಕ್ಕೆ ನಡೆಯುವ ಜಾತ್ರೆ । ಸೀಗೇಹಡ್ಲುವಿನಲ್ಲಿ ಸಾಂಪ್ರದಾಯಿಕ 3ನೇ ಮಹೋತ್ಸವ । ಭಕ್ತರ ದಂಡು

ಕನ್ನಡಪ್ರಭ ವಾರ್ತೆ ಕಡೂರು

ಒಂಬತ್ತು ವರ್ಷಕ್ಕೊಮ್ಮೆ ನಡೆಯುವ ತಾಲೂಕಿನ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬಾಯಿಬೀಗ ಬಂಡಿ ಜಂಪ ಮಹೋತ್ಸವವು ಸಿಗೇಹಡ್ಲು ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಮೂರನೇ ಬಂಡಿಯ ಭಕ್ತರು ಅದ್ಧೂರಿಯ ಮೆರವಣಿಗೆ ಮತ್ತು ಸಂಭ್ರಮದೊಂದಿಗೆ ಜಾತ್ರಾ ಮಹೋತ್ಸವಕ್ಕೆ ದಾಂಗುಡಿ ಇಟ್ಟರು.

ಸೀಗೇಹಡ್ಲು ಗ್ರಾಮದಲ್ಲಿ ಗ್ರಾಮ ದೇವತೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯ ಗಳನ್ನು ಸಲ್ಲಿಸಿ ಅಲಂಕೃತ ಬಂಡಿಗೆ ಧಾರ್ಮಿಕವಾಗಿ ಪೂಜೆ ಸಲ್ಲಿಸಲಾಯಿತು. ಶಿವಲಿಂಗದ ಜೊತೆ ನಂದಿಯ ಆಕೃತಿಯೊಂದಿಗೆ ಸಿಂಗರಿಸಿದ್ದ ಮೀಸಲು ಜೊತೆ ಗೊಬ್ಬರ ತುಂಬಿದ್ದ ಎತ್ತಿನಗಾಡಿಯು ಎಲ್ಲರ ಗಮನ ಸೆಳೆಯಿತು. ನಂತರ ಸಾಂಪ್ರದಾಯಿಕವಾಗಿ ಗ್ರಾಮದ ಹೆಬ್ಬಾಗಿಲು ಮೂಲಕ ಭಕ್ತರು ಜಯಘೋಷಗಳೊಂದಿಗೆ ಪುರದವರೆಗೆ ಮೆರವಣಿಗೆ ಸಾಗಿದರು. ಮೈಲಿ ಉದ್ದದ ಸಾಲಿನ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಹಾಗೂ ಡಿಜೆ ಸಂಗೀತದೊಂದಿಗೆ ಆಕರ್ಷಕ ಪಟಾಕಿಗಳ ಸಿಡಿ ಮದ್ದುಗಳನ್ನು ಸಿಡಿಸಿ ಯುವಕರು ಕುಣಿದು ಕುಪ್ಪಳಿಸಿದರು.

ಎತ್ತಿನ ಬಂಡಿಯ ಜೊತೆ ಇತರೆ ಗ್ರಾಮಗಳ ನೂರಾರು ಬಂಡಿಗಳು ಸಿಗೇಹಡ್ಲು ಗ್ರಾಮದಿಂದ ಕಾಮನಕೆರೆ, ದಾಸರಹಳ್ಳಿ, ಬಿಸಲೆರೆ, ಅರೇಹಳ್ಳಿ, ಮಾವಿನಹಳ್ಳಿ ಮಾರ್ಗವಾಗಿ ಪಿ.ಕೋಡಿಹಳ್ಳಿಯವರೆಗೆ ತಲುಪಿ ಒಂದು ಮತ್ತು ಎರಡನೇ ಬಂಡಿಯ ಮೂಲ್ವಿಕರೊಂದಿಗೆ ಜೊತೆಗೂಡಿ ತೆರಳಿದರು. ಸಂಜೆ ಪಿ.ಕೋಡಿಹಳ್ಳಿಯ ಗ್ರಾಮದಲ್ಲಿರುವ ಮೂಲ್ವಿಕ ಭಕ್ತರಿಂದ ಸಂಪ್ರಾದಾಯಿಕವಾಗಿ ಉಪವಾಸ ವೃತದಲ್ಲಿದ್ದ ಹೆಣ್ಣುಮಕ್ಕಳಿಗೆ ಬಾಯಿಬೀಗ ಸೇವೆಯೊಂದಿಗೆ ಗ್ರಾಮದಿಂದ ಪುರದವರೆಗೆ ಗ್ರಾಮದೇವತೆಗಳ ಉತ್ಸವದೊಂದಿಗೆ ವಿಜೃಂಭಣೆಯ ಮೆರವಣೆಗೆ ನಡೆಯಿತು. ಮೆರವಣಿಗೆಯಲ್ಲಿ ಸಾಗುವ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಣೆ ಮತ್ತು ಪಿ.ಕೋಡಿಹಳ್ಳಿ ಗ್ರಾಮದಲ್ಲಿ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಡೂರು ಪಟ್ಟಣದಲ್ಲಿನ ಭಕ್ತರು ಕೂಡ ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಿಂದ ಕೆಎಲ್‍ವಿ ವೃತ್ತ ಹಾಗೂ ದೊಡ್ಡಪೇಟೆ ಭಾಗದ ಪ್ರಮುಖ ಬೀದಿಗಳಲ್ಲಿ ಶ್ರೀ ರಾಯದುರ್ಗದ ರೇಣುಕಾಂಬ ದೇವಿಯ ಪಲ್ಲಕ್ಕಿಯೊಂದಿಗೆ ಮೀಸಲು ಗೂಡೆಯೊಂದಿಗೆ ನೂರಾರು ಮಹಿಳೆಯರು ಮೆರವಣಿಗೆ ನಡೆಸಿ ಜಂಪ ಮಹೋತ್ಸವಕ್ಕೆ ಚಾಲನೆಯೊಂದಿಗೆ ಸಂಜೆ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಿಂದ ಪುರದವರೆಗೆ ಮೆರವಣಿಗೆಯಲ್ಲಿ ಸಾಗಿದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಬೆಳ್ಳಿಪ್ರಕಾಶ್, ಪುರಸಭಾಧ್ಯಕ್ಷ ಭಂಡಾರಿಶ್ರೀನಿವಾಸ್, ಸದಸ್ಯರಾದ ತೋಟದಮನೆ ಮೋಹನ್‍, ಈರಳ್ಳಿ ರಮೇಶ್, ಮರುಗುದ್ದಿ ಮನು, ಗ್ರಾಮದ ಮುಖಂಡರಾದ ಸಿಗೇಹಡ್ಲು ಹರೀಶ್, ಈಶ್ವರಪ್ಪ, ಮಲ್ಲಿಕಾರ್ಜುನ್, ಯೋಗೀಶ್, ಆನಂದಪ್ಪ, ಮಲಿಯಪ್ಪ, ಲೋಕೇಶ್, ಅಶ್ವಿನಿ ರವಿ,ಅಶ್ವಿನಿ ಬಾಬು, ಚೇತನ್‍ಕೆಂಪರಾಜ್ ಸೇರಿ ಮತ್ತಿತರು ಇದ್ದರು.

Share this article