7 ವರ್ಷವಾದರೂ ಪೂರ್ಣಗೊಳ್ಳದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ

KannadaprabhaNewsNetwork |  
Published : May 16, 2026, 12:15 AM IST
ಹೇಮಾವತಿ ಹಿನ್ನೀರಿನಲ್ಲಿ ನಡೆಯುತ್ತಿರುವ ನೂತನ ಮಲ್ಲಿಪಟ್ಟಣ ಏತನೀರಾವರಿ ಯೋಜನೆ ಜಾಕ್ ವೆಲ್ ಕಾಮಗಾರಿ ವೀಕ್ಷಣೆ ನಡೆಸಿದ ಶಾಸಕ ಎ.ಮಂಜು   | Kannada Prabha

ಸಾರಾಂಶ

ಒಟ್ಟು 11.50 ಎಕರೆ ಭೂಸ್ವಾಧೀನ ಪಡೆದ ರೈತರಿಗೆ ಪರಿಹಾರ ನೀಡಲು ಅಗತ್ಯವಾದ ₹9 ಕೋಟಿ ಹಣವನ್ನು ಮೀಸಲಿರಿಸಲಾಗಿದೆ. ಬಹುತೇಕ ಮಂದಿ ಹಣ ಕೂಡ ಪಡೆದುಕೊಂಡಿದ್ದಾರೆ, ಕೆಲ ರೈತರು ಇಲ್ಲಸಲ್ಲದ ನೆಪವೊಡ್ಡಿ ಕೆಲಸಕ್ಕೆ ಅಡ್ಡಿಪಡಿಸುತ್ತಿರುವುದು ಗೊತ್ತಿದೆ. ನೇರ ಖರೀದಿ ಮೂಲಕ ಹಣ ಪಡೆದುಕೊಂಡರೆ ಅವರಿಗೆ ಒಳಿತು, ಇಲ್ಲವಾದರೆ ಅವರ ಖಾತೆಗೆ ಹಣ ಜಮಾಮಾಡಿ ಭೂಮಿಸ್ವಾಧೀನಕ್ಕೆ ಪಡೆದು ಕೆಲಸ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ಕೊಟ್ಟರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಬಹುನಿರೀಕ್ಷಿತ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಆರಂಭಗೊಂಡು 7 ವರ್ಷ ಮುಗಿದ್ದರೂ ಕೂಡ ಕಾಮಗಾರಿ ಪೂರ್ಣಗೊಂಡು ಕೆರೆ- ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಆಗಿಲ್ಲ. ಇದಕ್ಕೆ ಗುತ್ತಿಗೆದಾರ ಮತ್ತು ಎಂಜಿನಿಯರ್‌ಗಳ ನಿರ್ಲಕ್ಷ್ಯ ಧೋರಣೆ ಕಾರಣ ಎಂದು ಶಾಸಕ ಎ.ಮಂಜು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಗಡಿಭಾಗ ಕೊಡಗು ಜಿಲ್ಲೆಯ ಕಟ್ಟೇಪುರ ಹೇಮಾವತಿ ಹಿನ್ನೀರಿನಲ್ಲಿ ನಡೆಯುತ್ತಿರುವ ನೂತನ ಮಲ್ಲಿಪಟ್ಟಣ ಏತನೀರಾವರಿ ಯೋಜನೆ ಜಾಕ್ ವೆಲ್ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಮಾತನಾಡಿದ ಅವರು, ಕಳೆದ 2025 ಜನವರಿ 20ರಂದು ಕಾಮಗಾರಿ ವೀಕ್ಷಣೆ ಮಾಡುವ ವೇಳೆ ಆಗಸ್ಟ್‌ ತಿಂಗಳಿಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದರು. ಆದರೆ ಇನ್ನೂವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಪುನಃ ಏಪ್ರಿಲ್ 18ರಂದು ಕಾಮಗಾರಿ ಸ್ಥಳ ಪರಿಶೀಲನೆ ಕೈಗೊಂಡಾಗಲೂ ಕೂಡ ಅಕ್ಟೋಬರ್ ಗೆ ನೀರು ಹರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು, ಆದರೆ 2026ರ ಮೇ ತಿಂಗಳು ಬಂದರೂ ಸಹ ಕೆಲಸ ಪೂರ್ಣಗೊಳಿಸಿಲ್ಲ. ಈ ನಿರ್ಲಕ್ಷ್ಯತೆಯನ್ನು ಮುಂದೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಈ ಯೋಜನೆಯು ₹190 ಕೋಟಿ ವೆಚ್ಚದಲ್ಲಿ 200 ಕೆರೆಗಳಿಗೆ ನೀರು ತುಂಬಿಸುವುದಾಗಿದೆ, ಸುಮಾರು 78.10ಕಿಮೀ ದೂರ ರೇಸಿಂಗ್ ಮೇನ್ ಪೈಪ್ ಲೈನ್ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ, 1.2ಕಿಮೀ ಕೆಲಸ ಬಾಕಿ ಇದೆ. ವಿದ್ಯುತ್ ಸಂಪರ್ಕ, ತೊಟ್ಟಿ ಕೆಲಸವನ್ನು ಕೂಡಲೇ ಪೂರ್ಣಗೊಳಿಸಿ, ಈ ಯೋಜನೆ ವ್ಯಾಪ್ತಿಗೆ ಒಳಪಡುವ 78 ಹಳ್ಳಿಗಳ ಕೆರೆ- ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸವನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ಯೋಜನೆಯಲ್ಲಿ ಸೋಮವಾರ ಪೇಟೆ ತಾಲೂಕಿನ 20 ಕೆರೆ- ಕಟ್ಟೆಗಳು ಸಹ ಸೇರಿವೆ, ಅಂದು ಆರಂಭಿಕವಾಗಿ ರಾಜ್ಯ ಸರ್ಕಾರ ₹120 ಕೋಟಿ ಹಣ ಬಿಡುಗಡೆ ಮಾಡಿ ಕಾಮಗಾರಿಯನ್ನು 18 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರೊಂದಿಗೆ ಕರಾರು ಮಾಡಿಕೊಂಡಿತ್ತು, ಆದರೆ ಕೆಲಸ ಮಾತ್ರ ಕೇವಲ ಪೈಪ್ ಲೈನ್ ಅಳವಡಿಕೆಯಲ್ಲಿಯೇ ಸಾಗಿತ್ತು. ಹಿನ್ನೀರಿನಲ್ಲಿ ಜಾಕ್‌ವೆಲ್ ನಿರ್ಮಾಣ ಕೆಲಸ ಮುಗಿದಿದ್ದು, ಮೋಟಾರ್ ಅಳವಡಿಕೆ ಕೆಲಸ ಪ್ರಗತಿಯಲ್ಲಿದೆ. ಬಾಕಿ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ಕಟ್ಟೇಪುರ ಪೈಪ್ ಲೈನ್ ಅಳವಡಿಕೆಯ ಕೆಲವು ಭಾಗಗಳಲ್ಲಿ ರೈತರು ಅಡ್ಡಿಪಡಿಸುತ್ತಿದ್ದಾರೆ. ಎಷ್ಟೇ ಮನವೊಲಿಸಿದರೂ ಕೆಲಸಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಇಇ ಪುಟ್ಟಸ್ವಾಮಿ ಶಾಸಕರಲ್ಲಿ ಹೇಳಿಕೊಂಡರು. ಈ ವೇಳೆ ಶಾಸಕರು, ಸರ್ಕಾರ ನಿಗದಿ ಮಾಡಿರುವಂತೆ ರೈತರ ಭೂಮಿಗೆ ಹಣ ಮತ್ತು ಮರಗಿಡಗಳಿಗೆ ಪರಿಹಾರವನ್ನು ಕಲ್ಪಿಸಲಾಗುತ್ತಿದೆ, ಇದಕ್ಕೆ ಒಪ್ಪದೇ ಇದ್ದಲ್ಲಿ ಕಾನೂನುಪ್ರಕಾರ ಕ್ರಮವಹಿಸಿ ಪೈಪ್ ಲೈನ್ ಅಳವಡಿಕೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಒಟ್ಟು 11.50 ಎಕರೆ ಭೂಸ್ವಾಧೀನ ಪಡೆದ ರೈತರಿಗೆ ಪರಿಹಾರ ನೀಡಲು ಅಗತ್ಯವಾದ ₹9 ಕೋಟಿ ಹಣವನ್ನು ಮೀಸಲಿರಿಸಲಾಗಿದೆ. ಬಹುತೇಕ ಮಂದಿ ಹಣ ಕೂಡ ಪಡೆದುಕೊಂಡಿದ್ದಾರೆ, ಕೆಲ ರೈತರು ಇಲ್ಲಸಲ್ಲದ ನೆಪವೊಡ್ಡಿ ಕೆಲಸಕ್ಕೆ ಅಡ್ಡಿಪಡಿಸುತ್ತಿರುವುದು ಗೊತ್ತಿದೆ. ನೇರ ಖರೀದಿ ಮೂಲಕ ಹಣ ಪಡೆದುಕೊಂಡರೆ ಅವರಿಗೆ ಒಳಿತು, ಇಲ್ಲವಾದರೆ ಅವರ ಖಾತೆಗೆ ಹಣ ಜಮಾಮಾಡಿ ಭೂಮಿಸ್ವಾಧೀನಕ್ಕೆ ಪಡೆದು ಕೆಲಸ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ಕೊಟ್ಟರು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಎಇ ದೀಪಕ್ , ಗುತ್ತಿಗೆದಾರ, ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ಪುರಸಭೆ ನೂತನ ಅಧ್ಯಕ್ಷ ಅಕ್ರಂ ಶರೀಫ್ ರಿಗೆ ಗಾಣಿಗರ ಸಂಘದಿಂದ ಸನ್ಮಾನ
ಕಿಸಾನ್‌ ಸಮ್ಮಾನ್‌ 4 ಸಾವಿರ ರು ನಿಲ್ಲಿಸಿದ್ದು ಸರಿಯಲ್ಲ