ಕಾಡಾನೆಗಳ ಅಲೆದಾಟದಿಂದ ಅರೆ ಮಲೆನಾಡಿಗರಿಗೆ ಸಂಕಟ

KannadaprabhaNewsNetwork | Published : Sep 13, 2024 1:30 AM

ಸಾರಾಂಶ

ಕಾಡಾನೆ ಹಿಂಡು ಜಮೀನಲ್ಲಿ ಅಡ್ಡಾದಿಡ್ಡಿ ಓಡಾಡುವುದರ ಮೂಲಕ ಬೆಳೆನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಅರೆಮಲೆನಾಡಿನ ಬಿಕ್ಕೋಡು ಗ್ರಾಮದ ತಾವರೆಕೆರೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆ ಹಿಂಡು, 3 ಮರಿಗಳ ಸಮೇತ ಕೆರೆಯಲ್ಲಿ ಚಿನ್ನಾಟವಾಡಿ ಮೋಜು ಅನುಭವಿಸಿದೆ. ಬಿಕ್ಕೋಡು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡು ಈ ಭಾಗದಲ್ಲಿ ಸಂಚರಿಸುತಿದ್ದು ಜೋಳ, ಬಾಳೆ, ಭತ್ತ, ಶುಂಠಿ, ಕಾಫಿ, ಅಡಿಕೆ ಬೆಳೆಗಳನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ನಿಡುಮನಹಳ್ಳಿ, ಜಗಬೋರನಹಳ್ಳಿ ಸುತ್ತಮುತ್ತಲಿನ ಗ್ರಾಮದ ರೈತರ ಬೆಳೆಗಳನ್ನು ತಿಂದು ನಾಶಪಡಿಸಿ ನಂತರ ಪಕ್ಕದಲ್ಲಿರುವ ತಾವರೆಕೆರೆಯಲ್ಲಿ ವಿಹಾರ ಮಾಡುತ್ತವೆ.

ಕನ್ನಡಪ್ರಭ ವಾರ್ತೆ ಬೇಲೂರು

ಅರೆಮಲೆನಾಡು ಭಾಗಕ್ಕೆ ಸೇರಿದ ಬಿಕ್ಕೋಡು ಹೋಬಳಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಭಾಗದ ರೈತರ ಪ್ರಮುಖ ಬೆಳೆಗಳಾದ ಜೋಳ, ರಾಗಿ, ಭತ್ತ ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸುತ್ತಿದ್ದು ಅರಣ್ಯ ಇಲಾಖೆ ವಿರುದ್ಧ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಕಾಡಾನೆ ಹಿಂಡು ಜಮೀನಲ್ಲಿ ಅಡ್ಡಾದಿಡ್ಡಿ ಓಡಾಡುವುದರ ಮೂಲಕ ಬೆಳೆನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಅರೆಮಲೆನಾಡಿನ ಬಿಕ್ಕೋಡು ಗ್ರಾಮದ ತಾವರೆಕೆರೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆ ಹಿಂಡು, 3 ಮರಿಗಳ ಸಮೇತ ಕೆರೆಯಲ್ಲಿ ಚಿನ್ನಾಟವಾಡಿ ಮೋಜು ಅನುಭವಿಸಿದೆ. ಕೆರೆ ಸ್ನಾನದ ನಂತರ ನಿಡುಮನಹಳ್ಳಿ, ಜಗಬೋರನಹಳ್ಳಿ ಹಾಗೂ ಬಳಗನಹಳ್ಳಿ ಗ್ರಾಮಗಳನ್ನು ದಾಟಿ ಕಾಫಿ ತೋಟವನ್ನು ಸೇರುವ ದೃಶ್ಯಗಳನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದು ಈಗಾಗಲೇ ಜಾಲತಾಣದಲ್ಲಿ ಬಿತ್ತರಗೊಳ್ಳುತ್ತಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಬಿಕ್ಕೋಡು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡು ಈ ಭಾಗದಲ್ಲಿ ಸಂಚರಿಸುತಿದ್ದು ಜೋಳ, ಬಾಳೆ, ಭತ್ತ, ಶುಂಠಿ, ಕಾಫಿ, ಅಡಿಕೆ ಬೆಳೆಗಳನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ನಿಡುಮನಹಳ್ಳಿ, ಜಗಬೋರನಹಳ್ಳಿ ಸುತ್ತಮುತ್ತಲಿನ ಗ್ರಾಮದ ರೈತರ ಬೆಳೆಗಳನ್ನು ತಿಂದು ನಾಶಪಡಿಸಿ ನಂತರ ಪಕ್ಕದಲ್ಲಿರುವ ತಾವರೆಕೆರೆಯಲ್ಲಿ ವಿಹಾರ ಮಾಡುತ್ತವೆ. ಬಳಿಕ ಅದೇ ನಿಡುಮನಹಳ್ಳಿ ಗ್ರಾಮದ ಮೂಲಕ ಬಿಕ್ಕೊಡು ಎಸ್ಟೇಟ್ ಸೇರಿ ವಿಶ್ರಾಂತಿ ಪಡೆಯುತ್ತಿವೆ. ಈ ಕಾಡಾನೆಗಳು ನಿರಂತರವಾಗಿ ಒಂದು ವಾರದಿಂದ ಇದೇ ಮಾರ್ಗದಲ್ಲಿ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿವೆ.

ಬಿಕ್ಕೋಡು ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡುತ್ತಿದ್ದಾರೆ. ಕಾಡಾನೆಗಳ ಭಯದಿಂದ ಕಾಫಿ ತೋಟಕ್ಕೆ ತೆರಳಲು ಕಾರ್ಮಿಕರು ಹಾಗೂ ಮಾಲೀಕರು ಹಿಂದೇಟು ಹಾಕುತ್ತಿದ್ದು, ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲೇ ಅರಣ್ಯ ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ಗಜಪಡೆಯ ಚಲನವಲನದ ಸ್ಥಳೀಯರಿಗೆ ಮಾಹಿತಿ ರವಾನೆ ಮಾಡುತ್ತಿದ್ದಾರೆ. ಆದರೆ ಇವೆಲ್ಲ ಮೇಲ್ನೋಟಕ್ಕೆ ಮಾತ್ರ ಇಲಾಖೆಯು ಕಣ್ಣೊರೆಸುವ ತಂತ್ರ ಮಾಡುತ್ತಿದ್ದು, ಸರ್ಕಾರ ಯಾವುದೇ ಶಾಶ್ವತ ಪರಿಹಾರ ನೀಡುವಲ್ಲಿ ಮುಂದಾಗುತ್ತಿಲ್ಲ. ಈಗಾಗಲೇ 60ಕ್ಕೂ ಹೆಚ್ಚು ರೈತರು ಹಾಗೂ ಕೂಲಿಕಾರ್ಮಿಕರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇನ್ನು ಎಷ್ಟು ಪಾಪದ ಜನರು ಸಾವನ್ನಬೇಕು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಈ ಭಾಗದಲ್ಲಿ ಕಾಡನೆ ಓಡಾಟದಿಂದ ಮೆಕ್ಕೆಜೋಳ, ರಾಗಿ, ಭತ್ತ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಲೆನಾಡು ಭಾಗದಲ್ಲಿ ಆನೆ ದಾಳಿಗೆ ಕಾಫಿ ಬೆಳೆ ನಾಶಗೊಂಡ ಶ್ರೀಮಂತ ಕಾಫಿ ಬೆಳಗಾರರಿಗೆ ಹೆಚ್ಚಿನ ಪರಿಹಾರ ನೀಡಲಾಗುತ್ತಿದೆ. ಆದರೆ ಅರೆ ಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಆನೆ ದಾಳಿಯಿಂದ ಬೆಳೆ ಹಾನಿಗೊಂಡ ರೈತರಿಗೆ ಪರಿಹಾರ ವಿತರಿಸುವಲ್ಲಿ ಮೀನಮೇಶ ಎಣಿಸಲಾಗುತ್ತಿದೆ.

*ಹೇಳೀಕೆ1

ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರ ಜೊತೆಗೆ ರೈತರಿಗೂ ಸಮಾನವಾಗಿ ಬೆಳೆ ಪರಿಹಾರ ನೀಡಬೇಕು. ಈಗ ಆಗಿರುವ ಬೆಳೆ ನಷ್ಟಕ್ಕೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಜೊತೆಗೆ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಹುಡುಕಬೇಕು.

- ಕೆಡಿಪಿ ಸದಸ್ಯ ಬಿಕ್ಕೋಡು ಚೇತನ್

Share this article