ಅಪೌಷ್ಟಿಕತೆ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎಚ್ಚರವಹಿಸಿ: ರೇವತಿ ಹೊಸಮಠ

KannadaprabhaNewsNetwork |  
Published : Jul 25, 2026, 02:15 AM IST
ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣಾ ಸಮಾರಂಭವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೇವತಿ ಹೊಸಮಠ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಪೌಷ್ಟಿಕತೆ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ತಾಯಂದಿರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಶು ಬಾಲ್ಯದಲ್ಲಿಯೇ ಹೆಚ್ಚು ಕಾಳಜಿ ಮೂಲಕ ಮಕ್ಕಳ ಸೌಖ್ಯ ಕಾಯ್ದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೇವತಿ ಹೊಸಮಠ ತಿಳಿಸಿದರು.

ಹಾನಗಲ್ಲ: ಅಪೌಷ್ಟಿಕತೆ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ತಾಯಂದಿರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಶು ಬಾಲ್ಯದಲ್ಲಿಯೇ ಹೆಚ್ಚು ಕಾಳಜಿ ಮೂಲಕ ಮಕ್ಕಳ ಸೌಖ್ಯ ಕಾಯ್ದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೇವತಿ ಹೊಸಮಠ ತಿಳಿಸಿದರು.

ಬುಧವಾರ ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಲೋಯಲಾ ವಿಕಾಸ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯವೇ ಭಾಗ್ಯ ಎಂಬ ಸಂಗತಿ ತಾಯಂದಿರಿಗೆ ತಿಳಿದಿರಬೇಕು. ನಮ್ಮ ಕುಟುಂಬದ ಜೀವನ ಶೈಲಿ ಕೂಡ ಆರೋಗ್ಯಪೂರ್ಣವಾಗಿರಬೇಕು. ಶಾರೀರಿಕ ದೌರ್ಬಲ್ಯ ಅನಾರೋಗ್ಯಕ್ಕೆ ದಾರಿ. ತಾಯಂದಿರು ಶಿಶುಗಳಿಗೆ ೬ ತಿಂಗಳವರೆಗೆ ಎದೆ ಹಾಲು ಕೊಡುವಲ್ಲಿ ನಿರ್ಲಕ್ಷ್ಯ ಸಲ್ಲದು. ಜಂಕ್ ಫುಡ್‌ನಿಂದ ಮಕ್ಕಳನ್ನು ಹೊರ ತಂದು ಸ್ವಚ್ಛ ಶುದ್ಧ ಆಹಾರ ಒದಗಿಸುವಲ್ಲಿ ತೀರ ಕಾಳಜಿ ತೋರಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸೆಂಟ್ ಜೇಸನ್, ಮಕ್ಕಳ ಆರೋಗ್ಯ ಸಂಪತ್ತು ದೇಶದ ಸಂಪತ್ತು ಎಂಬ ಸತ್ಯದ ಅರಿವು ತಾಯಂದಿರಿಗಿರಲಿ. ಬಡ ಮಕ್ಕಳ ಸಹಾಯಕ್ಕಾಗಿ ನಮ್ಮ ಲೋಯಲಾ ವಿಕಾಸ ಕೇಂದ್ರದಿಂದ ಉಚಿತವಾಗಿ ಪೌಷ್ಟಿಕ ಆಹಾರದ ಕಿಟ್ ನೀಡಲಾಗುತ್ತಿದೆ. ಇದು ಆರೋಗ್ಯ ಜಾಗೃತಿಗಾಗಿ ಮಾಡುತ್ತಿರುವ ಕಾರ್ಯ. ಸಮಾಜ ಸೇವಾ ಸಂಸ್ಥೆಗಳು ಯಾವಾಗಲೂ ಇಂತಹ ಕಾರ್ಯಗಳಿಗೆ ಬೆಂಬಲಿಸುತ್ತವೆ. ಇದರ ಸದುಪಯೋಗಕ್ಕೆ ಸಮಾಜ ಮುಂದಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ ಪಾಟೀಲ, ಸರ್ಕಾರ ನೀಡುವ ತಾಯಿ ಕಾರ್ಡನಲ್ಲಿ ತಾಯಂದಿರಿಗೆ ಮಕ್ಕಳ ಲಾಲನೆ ಪಾಲನೆಗಾಗಿ ಉತ್ತಮ ಮಾರ್ಗದರ್ಶನಗಳಿವೆ. ಮಕ್ಕಳ ಅನಾರೋಗ್ಯಕ್ಕೆ ಸಕಾಲಿಕವಾದ ಚಿಕಿತ್ಸೆ ನೀಡಬೇಕು. ಕಾಲ ಕಾಲಕ್ಕೆ ಮಕ್ಕಳಿಗೆ ಅಗತ್ಯ ಚುಚ್ಚುಮದ್ದುಗಳನ್ನು ನೀಡಬೇಕು. ಮಕ್ಕಳಿರುವಾಗ ಆರೋಗ್ಯ ಕಾಳಜಿ ಮಾಡಿದರೆ ಅದು ಬದುಕಿನುದ್ದಕ್ಕೂ ಸಹಕಾರಿಯಾಗಬಲ್ಲದು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಶಿಶು ಅಭಿವೃದ್ಧಿ ಅಧಿಕಾರಿ ರಾಮು ಬಯಲಸೀಮೆ, ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ವೈದ್ಯೆ ಡಾ. ಪವಿತ್ರಾ ಅರುಣಾಚಲಮಠ, ವೈದ್ಯ ಡಾ. ಎಸ್.ಆರ್. ಕಿತ್ತೂರಮಠ, ಜೇಸನ್ ಪಾಯ್ಸ ಅತಿಥಿಗಳಾಗಿದ್ದರು.

ಗಿರಿಜಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಲೋಹಿತ್ ಸಂವಿಧಾನ ಪೀಠಿಕೆ ಓದಿದರು. ಎಸ್.ಬಿ. ಜಯಮ್ಮ ಸ್ವಾಗತಿಸಿದರು. ರಾಜೇಶ್ವರಿ ತಿರುಮಲೆ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಕಾರಿ ಆಸ್ಪತ್ರೆ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವರಿಗೆ ಮನವಿ
ಬಿಸಿಯೂಟ ಅನುದಾನ ಹೆಚ್ಚಳಕ್ಕೆ ಮನವಿ