ಉಡುಪಿ : ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಹಲ್ಲೆಗೊಳಗಾದ ಬಂಜಾರ ಸಮುದಾಯದ ಕಾರ್ಮಿಕ ಮಹಿಳೆ ಸೋಮವಾರ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, ತನ್ನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲಿನ ಕೇಸನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ ಅಪರೂಪದ ಘಟನೆ ನಡೆಯಿತು.
ಲಕ್ಷ್ಮೀ ಬಾಯಿ ಮೀನು ಕದ್ದರೆಂಬ ಆರೋಪದ ಮೇಲೆ ಅವರನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆಯುವ ವಿಡಿಯೋ ವೈರಲ್ ಆಗಿದೆ. ರಾಜ್ಯ ಮಟ್ಟದಲ್ಲಿ ಗಮನ ಸಳೆದ ಈ ಪ್ರಕರಣದ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆರೋಪಿಗಳ ಮೇಲೆ ಕ್ರಮಕ್ಕೆ ಆದೇಶಿಸಿದ್ದರು. ಮಲ್ಪೆ ಪೊಲೀಸರು ಹಲ್ಲೆ ನಡೆಸಿದ ಆರೋಪದಲ್ಲಿ 5 ಮಂದಿಯನ್ನು ಬಂಧಿಸಿ, ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.
ಆದರೆ ಸಂತ್ರಸ್ತೆ ಲಕ್ಷ್ಮೀ ಬಾಯಿ ಮಲ್ಪೆ ಬಂದರಿನಲ್ಲಿ ತಮ್ಮಂತೆ ಕಮಿಷನ್ ಕೆಲಸ ಮಾಡುವ ತಮ್ಮ ಬಂಜಾರ ಸಮುದಾಯದ ಸಹಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮೀನುಗಾರ ಮಹಿಳೆಯರ ಮೇಲೆ ಹಾಕಿರುವ ಜಾತಿ ನಿಂದನೆ ಕೇಸ್ ರದ್ದು ಮಾಡುವಂತೆ ಮನವಿ ಮಾಡಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬಂಜಾರ ಸಮುದಾಯದ ರಾಷ್ಟ್ರೀಯ ಸಂಘಟನೆ ಗೋರ್ ಮಳಾವ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೇಸು ಹಾಕಿದ್ದೆ ಗೊತ್ತಿಲ್ಲ-ಲಕ್ಷ್ಮೀ ಬಾಯಿ:
ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಬಾಯಿ, ತಾನು ಮೀನು ಕದ್ದಿರುವುದು ಹೌದು, ನಂತರ ಅದೇ ರಾತ್ರಿ ಪ್ರಕರಣ ರಾಜಿಯಲ್ಲಿ ಮುಗಿಸಲಾಗಿತ್ತು. ತನಗೆ ಹೊಡೆದಿರುವ ಮೀನುಗಾರ ಮಹಿಳೆಯರ ಮೇಲೆ ಪೊಲೀಸರು ಕೇಸ್ ಹಾಕಿದ್ದು ನನಗೆ ಗೊತ್ತಿರಲಿಲ್ಲ. ಮರುದಿನ ಪೊಲೀಸರು ಬಂದು ಆಟೋದಲ್ಲಿ ಠಾಣೆಗೆ ಕರೆದುಕೊಂಡು ಹೋದರು. ನನಗೆ ಓದುಬರಹ ಇಲ್ಲ, ನಿನ್ನೆ ನೀನು ರಾಜಿ ಆಗಿದ್ದೀಯಾ, ಅದಕ್ಕೆ ಇವತ್ತು ಹೆಬ್ಬೆಟ್ಟು ಹಾಕು ಅಂದರು. ಅದರಂತೆ ನಾನು ಹೆಬ್ಬೆಟ್ಟು ಹಾಕಿದ್ದೇನೆ. ಈಗ ಮೀನುಗಾರ ಮಹಿಳೆಯರ ಮೇಲೆ ಜಾತಿ ನಿಂದನೆ ಕೇಸು ಹಾಕಿದ್ದಾರೆ. ಹಾಗೆ ಮಾಡದಂತೆ ತಾನು ಡಿಸಿ ಅವರಿಗೆ ಮನವಿ ಮಾಡುವುದಕ್ಕೆ ಬಂದಿದ್ದೇನೆ ಎಂದರು.
ಸೌಹಾರ್ದತೆ ಬೇಕು - ಜಯಸಿಂಹ:
ಗೋರ್ ಮಳಾವ್‌ನ ಕಾರ್ಯದರ್ಶಿ ಜಯಸಿಂಹ ಮಾತನಾಡಿ, ಆಕಸ್ಮಿಕವಾಗಿ ನಡೆದ ಘಟನೆ, ಅದನ್ನು ರಾಜಿ ಮಾಡಿ ಮುಗಿಸಿದ್ದೇವೆ, ನಾವು ವಿಜಾಪುರ, ಗದಗ್ ಮತ್ತಿತರ ಜಿಲ್ಲೆಗಳಿಂದ ಉಡುಪಿ, ಕೇರಳ ಬಂದರುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಹೊಟ್ಟೆಪಾಡಿಗೆ ಬಂದಿದ್ದೇವೆ. ನಮ್ಮ ಹಟ್ಟಿಗಳಲ್ಲಿದ್ದಕಿಂತಲೂ ಚೆನ್ನಾಗಿ ಇಲ್ಲಿ ಬದಕುತಿದ್ದೇವೆ, ಇಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ ಸಿಕ್ಕಿದೆ, ನಮಗೆ ಇಲ್ಲಿ ಉದ್ಯೋಗ ನಡೆಸಲು ಸೌಹಾರ್ದತೆ ಬೇಕು. ಇದರಲ್ಲಿ ರಾಜಕೀಯ ಬೇಡ, ಆದ್ದರಿಂದ ಪ್ರಕರಣ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದ್ದೇವೆ ಎಂದರು.