ಕನ್ನಡಪ್ರಭ ವಾರ್ತೆ ಮಣಿಪಾಲಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗ ಮತ್ತು ದಂತ ವೈದ್ಯಕೀಯ ವಿಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಉಡುಪಿ ಜಿಲ್ಲಾಸ್ಪತ್ರೆಯ ಎನ್.ಸಿ.ಡಿ. ವಿಭಾಗ, ಜಿಲ್ಲಾ ಸರ್ವೇಕ್ಷಣಾ ಘಟಕ, ಉಡುಪಿಯ ಪ್ರಸಾದ್ ನೇತ್ರಾಲಯ, ಭಾರತೀಯ ವೈದ್ಯಕೀಯ ಸಂಘ ಕರಾವಳಿ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರವು ಮಲ್ಪೆಯ ಶ್ರೀ ಪಂಡರಿನಾಥ ವಿಠೋಭಾ ಭಜನಾ ಮಂದಿರದಲ್ಲಿ ನಡೆಯಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ. ಪಿ. ಗಡಾದ ಅವರು ಶಿಬಿರವನ್ನು ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಮ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಎಚ್. ಅಶೋಕ್, ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ. ಕೃಷ್ಣಪ್ರಸಾದ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನಾ, ಕೆ. ಎಂ. ಸಿ. ದಂತ ವಿಭಾಗದ ಮುಖ್ಯಸ್ಥ ಡಾ ರಾಮ್ ಪ್ರಾಸಾದ್, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್, ಐಎಂಎ ಕರಾವಳಿ ಶಾಖೆ ಅಧ್ಯಕ್ಷೆ ಡಾ. ರಾಜಲಕ್ಷ್ಮಿ, ತಜ್ಞವೈದ್ಯರಾದ ಡಾ. ಅಮ್ನ ಹೆಗ್ಡೆ, ಭಜನಾ ಮಂದಿರದ ಪ್ರಮುಖರಾದ ಶೇಖರ್ ತಿಂಗಳಾಯ, ಗೋಪಾಲ್ ಕರ್ಕೇರ, ರಮೇಶ್ ಕೆ., ಗೀತಾ ಗಣೇಶ್ ಭಾಗವಹಿಸಿದರು.ಶಿಬಿರದಲ್ಲಿ ಕಣ್ಣು, ಕಿವಿ, ದಂತ ತಪಾಸಣೆ, ಮಧುಮೇಹ, ರಕ್ತದೊತ್ತಡ , ಹೃದಯ ತಪಾಸಣೆ, ಮಹಿಳೆಯರಿಗೆ ಗರ್ಭಕೋಶ, ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು. ನುರಿತ ವೈದ್ಯರಿಂದ ಮತ್ತು ಆಹಾರ ತಜ್ಞರಿಂದ ವಿಶೇಷವಾಗಿ ಮಧುಮೇಹಿಗಳಿಗೆ ಆಹಾರಸೇವನೆ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಈ ಶಿಬಿರದಲ್ಲಿ 132 ಮಂದಿ ಪ್ರಯೋಜನ ಪಡೆದರು.