ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಜಿಲ್ಲೆ ಎಂದರೆ ಕೆರೆಗಳ ನಾಡು ಎಂಬ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಶತಮಾನಗಳ ಇತಿಹಾಸವಿರುವ ಮಾಲೂರು ತಾಲೂಕಿನ ದೊಡ್ಡಕೆರೆ ಸುಮಾರು ೧೩೨ ಎಕರೆ ವಿಸ್ತೀರ್ಣ ಹೊಂದಿದ್ದು, ಮಾಲೂರು ಪಟ್ಟಣ ಹಾಗೂ ಸುತ್ತಲ ಸುಮಾರು ೨೦ ಗ್ರಾಮಗಳ ರೈತರ ಪಾಲಿಗೆ ಸಂಜೀವಿನಿಯಾಗಿದೆ.
ಕುಡಿಯುವ ನೀರಿನ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಳಕ್ಕೂ ಇದೇ ಕೆರೆ ಮೂಲವಾಗಿದೆ. ಆದರೆ, ಕೆಲ ವರ್ಷದಿಂದ ತಾಲೂಕು ಹಾಗೂ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದ ಜತೆಗೆ ವರುಣನ ಅವಕೃಪೆಯಿಂದಲೂ ತನ್ನ ಒಡಲು ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಹೂಳು ತೆಗೆಯಲು ನಿರ್ಲಕ್ಷ್ಯ
ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದರೂ ಅದನ್ನು ತೆರವು ಮಾಡದೆ ಇರೋದಕ್ಕೆ ಈ ತಿಂಗಳ ಅಂತ್ಯಕ್ಕೆ ಇಡೀ ಕೆರೆಯೇ ಖಾಲಿಯಾಗುವ ಲಕ್ಷಣಗಳು ಕಂಡುಬಂದಿದ್ದು, ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ, ಕಾಲ ಕಾಲಕ್ಕೆ ಹೂಳು ಎತ್ತದ ಸಣ್ಣ ನೀರಾವರಿ ಇಲಾಖೆ ಹಾಗೂ ತಾಲೂಕು ಆಡಳಿತಗಳ ನಿರ್ಲಕ್ಷ್ಯದಿಂದ ಇದೀಗ ಕೆರೆ ಮುಚ್ಚಿ ಹೋಗುವ ಆತಂಕ ಹೆಚ್ಚಿಸುತ್ತಿದೆ.ಹಿಂದೆ ಈ ಭಾಗದ ಸುತ್ತಲಿರುವ ನೂರಾರು ಇಟ್ಟಿಗೆ ಕಾರ್ಖಾನೆಗಳಿಗೆ ಇಲ್ಲಿನ ಮಣ್ಣನ್ನೇ ಸಾಗಿಸಲಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷದಿಂದ ಮಣ್ಣು ತೆಗೆಯುತ್ತಿಲ್ಲ. ಹೂಳು ತೆಗೆಯುವ ಕಾರ್ಯವನ್ನೂ ಇಲಾಖೆಯೂ ಮಾಡುತ್ತಿಲ್ಲ. ಹೀಗಾಗಿ ಮಳೆಗಾಲದಲ್ಲಿ ನೀರು ಕೆರೆಯಲ್ಲಿ ಸಂಗ್ರಹವಾಗದೆ ಇದೀಗ ಬರಿದಾಗಿದೆ. ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಿಲ್ಲಮಾಲೂರು ದೊಡ್ಡಕರೆಯಲ್ಲಿ ನೀರು ಶೇಖರಣೆ ಇದ್ದರೆ, ಈ ಭಾಗದ ಸುಮಾರು ೧೦-೨೦ ಕಿಮೀ ವಿಸ್ತೀರ್ಣದಲ್ಲಿ ಕುಡಿಯುವ ನೀರಿಗೆ ತೊಂದರೆ ಇರುವುದಿಲ್ಲ. ಹೆಚ್ಚಾಗಿ ರೈತರು, ಪುರಸಭೆ, ಗ್ರಾಪಂಗಳು ಕೊಳವೆ ಬಾವಿಗಳನ್ನೇ ನಂಬಿಕೊಂಡಿವೆ. ಕಳೆದ ಡಿಸೆಂಬರ್‌ವರೆಗೆ ನೀರಿನ ಕೊರತೆ ಕಂಡುಬಂದಿರಲಿಲ್ಲ. ಜತೆಗೆ ಕೆಸಿ ವ್ಯಾಲಿ ನೀರು ಈ ಕೆರೆಗೂ ಬರುತ್ತದೆ ಎಂಬ ಆಶಾಭಾವನೆ ಇತ್ತು. ತಾಲೂಕಿನ ನರಸಾಪುರದಿಂದ ಈ ತಾಲೂಕಿಗೆ ಹರಿದ ಕೆಸಿ ವ್ಯಾಲಿ ನೀರು ದೊಡ್ಡಶಿವಾರ, ಭಾವನಹಳ್ಳಿ ಕೆರೆವರೆಗೆ ಬಂದಿತಾದರೂ ಕಳೆದ ನಾಲ್ಕು ವರ್ಷದಿಂದ ಮಾಲೂರು ಕೆರೆಗೆ ನೀರು ಹರಿಯುವುದನ್ನು ಕಾಣಲು ಜನತೆ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಮಾಲೂರು ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದರೆ ನಿಭಾಯಿಸುವ ಕುರಿತು ಇಲ್ಲಿನ ಪುರಸಭೆ ಕೂಡ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಕೂಡ ಮಾಡಿಲ್ಲ. ಈಗಾಗಲೇ ಪುರಸಭೆಯ ಶೇ.೪೦ ರಷ್ಟು ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗಿದೆ. ೨-೩ ದಿನಗಳಿಗೊಮ್ಮೆ ಸರಬರಾಗುತ್ತಿದ್ದ ನೀರು ೪-೫ ದಿನಗಳಿಗೊಮ್ಮೆ ಪೂರೈಸುವಂತಾಗಿದೆ. ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ
ಮಾಲೂರು ದೊಡ್ಡಕೆರೆ ಅಭಿವೃದ್ಧಿಗೆ ೯.೨೭ ಕೋಟಿ ರೂ.ಗಳಿಗೆ ೨ನೇ ಬಾರಿಗೆ ಫೆ.೧೯ರಂದು ಟೆಂಡರ್ ಕರೆಯಲಾಗಿದೆ. ಕೆರೆ ಸುತ್ತಲೂ ಕಾಂಪೌಂಡ್, ವಾಕಿಂಗ್‌ಪಾತ್, ಪಾರ್ಕ್ ನಿರ್ಮಾಣಗಳು ಸೇರಿವೆ. ಈ ಹಣವನ್ನು ಸಣ್ಣ ನೀರಾವರಿ ಇಲಾಖೆಗೆ ಪಾವತಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.