ಬಿರುಸಿನಲ್ಲಿ ನಡೆದ ಮಾಮ್ಕೋಸ್ ಮತದಾನ

KannadaprabhaNewsNetwork |  
Published : Feb 05, 2025, 12:33 AM IST
ಶಿವಮೊಗ್ಗದ ಎಪಿಎಂಸಿ ಯಾರ್ಡ್ ಆವರಣದಲ್ಲಿ ನಡೆದ ಮಾಮ್ಕೋಸ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಎರಡೂ ಒಕ್ಕೂಟದ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸುತ್ತಿರುವುದು ಕಂಡು ಬಂದಿತು. | Kannada Prabha

ಸಾರಾಂಶ

ಶಿವಮೊಗ್ಗ: ಪ್ರತಿಷ್ಠಿತ ಮಾಮ್ಕೋಸ್ (ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ) ದ ಆಡಳಿತ ಮಂಡಳಿಯ 19 ನಿರ್ದೇಶಕ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದಿದ್ದು, ಬಿರುಸಿನ ಪೈಪೋಟಿ ನಡೆದಿದೆ. ಸಂಜೆ 4 ಗಂಟೆಗೆ ಮತದಾನ ಮುಗಿದಿದ್ದು, ಸರಿ ಸುಮಾರು 60-70 ರಷ್ಟು ಮತದಾನ ನಡೆದಿದೆ.

ಶಿವಮೊಗ್ಗ: ಪ್ರತಿಷ್ಠಿತ ಮಾಮ್ಕೋಸ್ (ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ) ದ ಆಡಳಿತ ಮಂಡಳಿಯ 19 ನಿರ್ದೇಶಕ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದಿದ್ದು, ಬಿರುಸಿನ ಪೈಪೋಟಿ ನಡೆದಿದೆ. ಸಂಜೆ 4 ಗಂಟೆಗೆ ಮತದಾನ ಮುಗಿದಿದ್ದು, ಸರಿ ಸುಮಾರು 60-70 ರಷ್ಟು ಮತದಾನ ನಡೆದಿದೆ.ಚುನಾವಣೆ ಬಹುತೇಕ ಶಾಂತವಾಗಿ ನಡೆದಿದ್ದು, ಶಿವಮೊಗ್ಗದಲ್ಲಿ ಮಾತ್ರ ಕೆಲ ಕಾಲ ಗೊಂದಲ ಎದುರಾಗಿತ್ತು.ಸಹಕಾರ ಭಾರತಿ ಮತ್ತು ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ಹೆಸರಿನಲ್ಲಿ ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಂಡವನ್ನು ರಚಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದವು. ಸಂಸ್ಥೆಯಲ್ಲಿ ಒಟ್ಟು 31 ಸಾವಿರ ಮತದಾರರು ಇದ್ದರೂ, ಅರ್ಹತೆ ಪಡೆದಿದ್ದು ಕೇವಲ 11500 ಮಾತ್ರ. ಬಳಿಕ ಅನರ್ಹ ಮತದಾರರಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿ ಮತದಾನದ ಹಕ್ಕನ್ನು ಪಡೆದು ಬಂದಿದ್ದಾರೆ. ಇದು ಸರಿ ಸುಮಾರು 5 ಸಾವಿರವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ತೀರ್ಥಹಳ್ಳಿ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಭದ್ರಾವತಿ, ತರಿಕೆರೆಯಲ್ಲಿ ಮತದಾನ ಕೇಂದ್ರಗಳಿದ್ದು, ಬೆಳಗ್ಗೆಯಿಂದಲೇ ಅಡಕೆ ಬೆಳೆಗಾರರು ಉತ್ಸಾಹದಿಂದ ಮತ ಚಲಾಯಿಸಿದರು.ಸಹಕಾರ ಭಾರತಿ ಮತ್ತು ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ಮುಖಂಡರು ಎಲ್ಲ ಕೇಂದ್ರಗಳಲ್ಲಿ ಹಾಜರಿದ್ದು, ಮತದಾರರನ್ನು ಓಲೈಸುವಲ್ಲಿ ನಿರತರಾಗಿದ್ದರು. ಅನೇಕ ಕಡೆ ಮತದಾರರನ್ನು ವಾಹನಗಳಲ್ಲಿ ಕರೆ ತರುತ್ತಿದ್ದುದು ಕಂಡು ಬಂದಿತು.ಗೊಂದಲ:ಶಿವಮೊಗ್ಗದ ಎಪಿಎಂಸಿ ಯಾರ್ಡ್‌ನಲ್ಲಿ ನಡೆದ ಮತದಾನದ ವೇಳೆ ಕೆಲ ಕಾಲ ಗೊಂದಲ ಏರ್ಪಡಾಗಿತ್ತು.ಸಹಕಾರ ಭಾರತಿ ಮುಖಂಡರು, ಕಾರ್ಯಕರ್ತರು ಕೇಸರಿ ಶಾಲು ಹಾಕಿ ಮತದಾರರಿಗೆ ತಮ್ಮ ತಂಡದ ಹೆಸರು ಮತ್ತು ಸಂಖ್ಯೆಯುಳ್ಳ ಪಿಂಕ್ ಬಣ್ಣದ ಚೀಟಿ ನೀಡುತ್ತಿದ್ದರು. ಇನ್ನೊಂದೆಡೆ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ತಂಡದ ಸ್ಪರ್ಧಿಗಳ ಹೆಸರು ಮತ್ತು ಸಂಖ್ಯೆಯುಳ್ಳ ಬಿಳಿ ಬಣ್ಣದ ಚೀಟಿ ನೀಡುತ್ತಿದ್ದರು.

ಇದರ ನಡುವೆ ಕೆಲವು ಸಹಕಾರ ಪ್ರತಿಷ್ಠಾನದ ಕಾರ್ಯಕರ್ತರು ಸಹಕಾರ ಭಾರತಿ ಎಂದು ಮುದ್ರಿಸಿದ ಚೀಟಿಯ ಕೆಳ ಭಾಗದಲ್ಲಿ ಪ್ರತಿಷ್ಠಾನದ ವತಿಯಿಂದ ಸ್ಪರ್ಧಿಸಿದ ಸ್ಪರ್ಧಾಳುಗಳ ಹೆಸರು ಹೊಂದಿದ ಚೀಟಿಯನ್ನು ಮತದಾರರಿಗೆ ನೀಡಿ ವಂಚಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತು. ಸಹಕಾರ ಭಾರತಿ ಮುಖಂಡರು ಇಂತಹ ಚೀಟಿಯನ್ನು ಪತ್ತೆ ಹಚ್ಚಿ ದೂರು ನೀಡಿದರು. ಇದರಿಂದ ಕೆಲ ಕಾಲ ಸ್ಥಳದಲ್ಲಿ ಗೊಂದಲ, ಗದ್ದಲ ಏರ್ಪಟ್ಟಿತ್ತು. ಆ ಬಳಿಕ ಅಂತಹ ಚೀಟಿಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡು ಪರಿಸ್ಥಿತಿ ನಿಯಂತ್ರಿಸಿದರು.

PREV

Recommended Stories

ಕಾನೂನು ಮುಂದೆ ಎಲ್ಲರೂ ಒಂದೇ ಎಂದ ನಟಿ ರಮ್ಯಾ
ಬಂಧನಕ್ಕೂ ಮೊದಲು ಪತ್ನಿ,ಮಗನ ಭೇಟಿಯಾದ ದರ್ಶನ್‌