ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಹೊರವಲಯದ ಗದ್ದೆರಂಗನಾಥ ದೇವಾಲಯದ ಬಳಿಯ ಕಾವೇರಿ ನದಿ ಸಮೀಪ ಸ್ಥಳೀಯ ನಿವಾಸಿ ಜಯಂತ್ ಅವರು ತಮ್ಮ ಹಸು ಹಾಗೂ 20 ಮೇಕೆಗಳನ್ನು ಮೇಯಿಸಲು ಕಾವೇರಿ ನದಿ ದಂಡೆಗೆ ತೆರಳಿದ್ದರು. ಈ ವೇಳೆ ಕೆಆರ್ ಎಸ್ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟ ಹಿನ್ನೆಲೆ ನದಿಯಲ್ಲಿ ಏಕಾಏಕಿ ನೀರಿನ ಹರಿವು ಏರಿಕೆಯಾಗಿದೆ.
ನದಿ ಮಧ್ಯದಲ್ಲಿದ್ದ ನಡುಗಡ್ಡೆಯಲ್ಲಿ ಮೇಕೆಗಳ ಸಹಿತ ಸಿಲುಕಿಕೊಂಡಿದ್ದಾರೆ. ನಡುಗಡ್ಡೆ ಸುತ್ತಲೂ ನೀರು ಆವರಿಸಿದ್ದರಿಂದ ಹೊರ ಬರಲಾಗದೆ ಆತಂಕಗೊಂಡ ಜಯಂತ್ ಅವರು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ನೆರವು ಕೋರಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಪಡೆಗೆ ಸುತ್ತಲೂ ಆವರಿಸಿದ್ದ ಕಗ್ಗತ್ತಲು, ರಭಸದಿಂದ ಹರಿಯುತ್ತಿದ್ದ ನೀರು ಮತ್ತು ನದಿಯಲ್ಲಿದ್ದ ದೊಡ್ಡ ಕಲ್ಲು ಬಂಡೆಗಳು ಕಾರ್ಯಾಚರಣೆಗೆ ಅಡ್ಡಲಾದರೂ ಸಹ ತಂಡ ರಬ್ಬರ್ ಬೋಟ್, ಹಗ್ಗಗಳು, ಟಾರ್ಚ್‌ಗಳು, ಲೈಫ್ ಬಾಯ್ ಹಾಗೂ ಹೆಚ್ಚುವರಿ ಲೈಫ್ ಜಾಕೆಟ್‌ಗಳೊಂದಿಗೆ ಸಕಲ ಸುರಕ್ಷತಾ ಕ್ರಮ ವಹಿಸಿ ನಡುಗಡ್ಡೆ ತಲುಪಿತು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಅಂಬರೀಶ್ ಎನ್. ಉಪ್ಪಾರ್, ಪ್ರಮುಖ ಅಗ್ನಿಶಾಮಕರಾದ ತೇಜೋಮೂರ್ತಿ ಹಾಗೂ ವೆಂಕಟೇಶ್, ಚಾಲಕರಾದ ಬಸವರಾಜ್ ಅಂಗಡಿ ಮತ್ತು ಶ್ರೀಶೈಲ್ ಕುರಿ ಹಾಗೂ ಸಿಬ್ಬಂದಿ ನೂರ್ ಸಾಬ್ ಮತ್ತು ಶಿವಾನಂದ್ ಅವಾಜಿ ಕಾರ್ಯಾಚರಣೆಯಲ್ಲಿದ್ದರು.