ಕನ್ನಡಪ್ರಭ ವಾರ್ತೆ ಬೆಂಗಳೂರು
ತಮಿಳುನಾಡು ಮೂಲದ ಶೇಖರ್ (33) ಬಂಧಿತ ಆರೋಪಿ. ಈತ ನಗರದಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸತ್ಯನಾರಾಯಣ ಎಂಬುವರಿಂದ ₹35 ಲಕ್ಷ ಮೌಲ್ಯದ 194 ಗ್ರಾಂ ಚಿನ್ನ, 1.3 ಕೆ.ಜಿ. ಬೆಳ್ಳಿಯ ವಸ್ತುಗಳು ಪಡೆದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಭವಿಷ್ಯ ಹೇಳುವ ನೆಪದಲ್ಲಿ ಇದೇ ರೀತಿ ಸಾಕಷ್ಟು ಜನರಿಗೆ ವಂಚಿಸಿದ್ದಾನೆ. ವಂಚನೆ ಮಾಡುತ್ತಿದ್ದ ಹಣ, ಚಿನ್ನವನ್ನು ಯಾರಿಗೆ ನೀಡಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ:ದೂರುದಾರರಾದ ಸತ್ಯನಾರಾಯಣ ಅವರು ಕಳೆದ ಡಿಸೆಂಬರ್‌ನಲ್ಲಿ ಭಾರತಿನಗರ ಸರ್ಕಲ್ ರಸ್ತೆಯಲ್ಲಿ ಹೋಗುವಾಗ ಗಿಳಿಶಾಸ್ತ್ರ ಹೇಳುವ ಶೇಖರ್, ಅವರನ್ನು ಕಂಡು ನಿಮ್ಮ ಮುಖ ನೋಡಿ ಭವಿಷ್ಯ ಹೇಳುತ್ತೇನೆ, ನಿಮಗೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ. ಬಳಿಕ ಜೀವನ ಸುಧಾರಣೆಗಾಗಿ ದೊಡ್ಡ ಪೂಜೆ ಮಾಡಿಸಬೇಕೆಂದು ಹೇಳಿ, ಮೊದಲು 50 ಸಾವಿರ ರು. ಪಡೆದು ಪೂಜೆ ಮಾಡಿದ್ದ. ನಂತರ ವೃತ್ತಿಯಲ್ಲಿ ಮುಂಬಡ್ತಿ, ಉತ್ತಮ ಸ್ಥಳಕ್ಕೆ ವರ್ಗಾವಣೆ ಆಗಬೇಕೆಂದರೆ ದೊಡ್ಡ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯಲ್ಲಿದ್ದ ಚಿನ್ನಾಭರಣವನ್ನು ತರುವಂತೆ ಹೇಳಿದ್ದ. ಅದರಂತೆ 194 ಗ್ರಾಂ ಬಂಗಾರ, 1.3 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ಸತ್ಯನಾರಾಯಣ ಅವರಿಂದ ಪಡೆದು ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.