ಕನ್ನಡಪ್ರಭ ವಾರ್ತೆ ಬೆಂಗಳೂರು
ಬಟ್ಟೆ ವ್ಯಾಪಾರದಲ್ಲಿ ಆಗಿದ್ದ ನಷ್ಟ ಸರಿದೂಗಿಸಲು ತನ್ನ ಪರಿಚಿತ ಉದ್ಯಮಿ ಮನೆಗೆ ಕನ್ನ ಹಾಕಿ ಕೊಟ್ಯಾಂತರ ರು. ಮೌಲ್ಯದ ನಗ-ನಾಣ್ಯ ದೋಚಿದ್ದ ಬಟ್ಟೆ ವ್ಯಾಪಾರಿ ಹಾಗೂ ಆತನ ಸ್ನೇಹಿತನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸುಂಕದಕಟ್ಟೆಯ ವಿಘ್ನೇಶ್ ನಗರದ ಎಚ್.ಕೆ.ಶ್ರೀನಿವಾಸ್ ಮೂರ್ತಿ ಹಾಗೂ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯ ಬಿ.ಎನ್.ಅರುಣ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ ₹1.14 ಕೋಟಿ ನಗದು, 16 ಗ್ರಾಂ ಚಿನ್ನದ ಸರ ಹಾಗೂ ಕಾರು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಹುಲಿಮಂಗಲದ ಎಲಿಗೆನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಉದ್ಯಮಿ ಸುನೀಲ್ ಕುಮಾರ್ ಫ್ಲ್ಯಾಟ್‌ನಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ಅವರ ಮಾರ್ಗದರ್ಶನದಲ್ಲಿ ತನಿಖೆಗಿಳಿದ ಎಸಿಪಿ ಸತೀಶ್ ಸಾರಥ್ಯದ ಹೆಬ್ಬಗೋಡಿ ಇನ್ಸ್‌ಪೆಕ್ಟರ್ ಸೋಮಶೇಖರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಆರ್.ವಿ.ಅಯ್ಯಪ್ಪ ಒಳಗೊಂಡ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ.ನಿರೀಕ್ಷಿಸಿದ್ದು 20 ಲಕ್ಷ ಸಿಕ್ಕಿದ್ದು 1 ಕೋಟಿ:
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ವೇಣುಗೋಪಾಲಪುರ ಗ್ರಾಮದ ಸುನೀಲ್ ಕುಮಾರ್ ಅವರು, ಬೊಮ್ಮನಹಳ್ಳಿಯಲ್ಲಿ ಸಣ್ಣ ಕೈಗಾರಿಕೆ ನಡೆಸುತ್ತಿದ್ದು, ನೈಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಹೇರೋಹಳ್ಳಿಯ ಶ್ರೀನಿವಾಸ್ ಜತೆ ಗೆಳೆತನವಾಗಿತ್ತು. ಸುನೀಲ್ ಅವರ ಆರ್ಥಿಕ ವಹಿವಾಟಿನ ಬಗ್ಗೆ ತಿಳಿದಿದ್ದ ಶ್ರೀನಿವಾಸ್ ತನ್ನ ಉದ್ಯೋಗ ತೊರೆದು ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿ ಇಟ್ಟು ಕೈಸುಟ್ಟುಕೊಂಡಿದ್ದ. ಈ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಸುನೀಲ್ ಮನೆಯಲ್ಲಿ ಕಳ್ಳತನಕ್ಕೆ ಆತ ಯೋಜಿಸಿದ್ದ. ಈ ಕೃತ್ಯಕ್ಕೆ ಹಣದಾಸೆ ತೋರಿಸಿ ನೈಸ್ ಕಂಪನಿಯ ಎಲೆಕ್ಟ್ರಿಷಿಯನ್ ಅರುಣ್‌ನನ್ನು ಶ್ರೀನಿವಾಸ್ ಸೆಳೆದಿದ್ದ. ನ.8ರಂದು ತಮ್ಮ ಕುಟುಂಬದ ಸಮೇತ ಸುನೀಲ್ ಹೊರ ಹೋಗಿದ್ದನ್ನು ಖಚಿತಪಡಿಸಿಕೊಂಡು ಕೊಟ್ಯಾಂತರ ರು. ಮೌಲ್ಯದ ನಗ-ನಾಣ್ಯ ದೋಚಿಕೊಂಡು ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದರು.ಒಂದು ಬಾರಿ ವಿಫಲ ಯತ್ನ:
ಒಂದು ಬಾರಿ ಸುನೀಲ್ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಆರೋಪಿಗಳು ವಿಫಲರಾಗಿದ್ದರು. ಮನೆಗೆ ಬಂದು ಭಯದಿಂದ ಆರೋಪಿಗಳು ಪರಾರಿಯಾಗಿದ್ದರು.ಸಿಸಿಟಿವಿ ದೃಶ್ಯ ಆಧರಿಸಿ ಸೆರೆ
ಪೊಲೀಸರಿಗೆ ಸಿಕ್ಕಿಬೀಳುವ ಆತಂಕದಿಂದ ಈ ಕೃತ್ಯದ ವೇಳೆ ಮೊಬೈಲ್ ಅನ್ನು ಸಹ ಆರೋಪಿಗಳು ಬಳಸಿರಲಿಲ್ಲ. ತಲೆಗೆ ಹೆಲ್ಮೆಟ್ ಹಾಕಿಕೊಂಡು ಮನೆಗೆ ನುಗ್ಗಿ ಹಣ ಹಾಗೂ ಒಡವೆ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಗಳು ಚಲನವಲನದ ದೃಶ್ಯಾವಳಿ ಸಿಕ್ಕಿತು. ಅದೇ ವೇಳೆ ಆರೋಪಿಗಳು ಬಳಸಿದ್ದ ಕಾರು ಸಹ ಪತ್ತೆಯಾಯಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದಾಗ ಕೊನೆಗೆ ಶ್ರೀನಿವಾಸ್ ಹಾಗೂ ಆತನ ಸ್ನೇಹಿತ ಖಾಕಿ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.