ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಮಲ್ಲಿಪಟ್ಟಣ ಹೋಬಳಿ ನೆಲಬಳ್ಳಿ ಗ್ರಾಮದ ವೆಂಕಟೇಗೌಡ ಎಂಬುವರಿಗೆ ಸೇರಿದ ಕೃಷಿ ಭೂಮಿಯಲ್ಲಿ ವಿದ್ಯುತ್ ತಂತಿ ತಗುಲಿ ಗಂಡಾನೆ ಸಾವನ್ನಪ್ಪಿದೆ.ರೈತರು ಬೆಳೆ ಸಂರಕ್ಷಣೆ ಮಾಡಲು ಅಳವಡಿಸಿಕೊಂಡಿರುವ ವಿದ್ಯುತ್ ತಂತಿ ಬೇಲಿಯನ್ನು ದಾಟುವ ವೇಳೆ 25 ವರ್ಷದ ಗಂಡಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕೃಷಿ ಜಮೀನಿನಲ್ಲಿ ಪ್ರಾಣಬಿಟ್ಟಿದೆ.
ಶುಕ್ರವಾರ ರಾತ್ರಿ ಮರಿಯೊಂದಿಗೆ 2 ಆನೆಗಳು ನೆಲಬಳ್ಳಿ ಗ್ರಾಮದ ಸುತ್ತ ಮುತ್ತ ಆಹಾರವನ್ನು ಅರಸಿ ಸುತ್ತಾಡಿ ಹಲವು ಬೆಳೆಗಳನ್ನು ನಾಶಗೊಳಿಸಿದ್ದವು. ಇದೇ ಗ್ರಾಮದ ಪ್ರಕಾಶ್ ಎಂಬುವವರ ತೋಟದಲ್ಲಿ 80ಕ್ಕು ಅಧಿಕ ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿವೆ. ಮೂರು ನಾಲ್ಕು ದಿನಗಳಿಂದ ಬೈಸೂರು ಅರಣ್ಯದಲ್ಲಿ ಬೀಡುಬಿಟ್ಟಿದ್ದ ಆನೆಗಳ ಗುಂಪಿನ ಗಂಡಾನೆ ಇಂದು ಬೆಳಗಿನ ಜಾವ ಗೆಣಸು ಹೊಲದಲ್ಲಿ ಸಾವನ್ನಪ್ಪಿದೆ.ರೈತರ ಆಕ್ರೋಶ:
ಹಲವಾರು ವರ್ಷಗಳಿಂದ ರೈತರ ಬೆಳೆಗಳನ್ನು ನಾಶ ಪಡಿಸುತ್ತಿರುವ ಆನೆಗಳ ಹಿಂಡಿನ ಬಗ್ಗೆ ಅರಣ್ಯ ಇಲಾಖೆಗೆ ಹಲವಾರು ಬಾರಿ ದೂರು ನೀಡಿದರೂ ಇಲ್ಲಿಯವರೆಗೆ ಪರಿಹಾರ ದೊರಕಿಲ್ಲ, ನಮ್ಮ ಕಷ್ಟಕ್ಕೆ ಸ್ಪಂದಿಸದ ಅರಣ್ಯ ಇಲಾಖೆ ಇಂದು ಆನೆ ಸತ್ತ ವಿಷಯವನ್ನು ತಿಳಿದು ಹಿಂಡು ಹಿಂಡಾಗಿ ಆಗಮಿಸುತ್ತಿದ್ದಾರೆ. ಆನೆ ಸಾವನ್ನಪ್ಪಿರುವುದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಮೇಲೆ ಕೇಸ್ ದಾಖಲಿಸಬೇಡಿ:
ನೆಲಬಳ್ಳಿ ರೈತ ಬೆಳೆ ರಕ್ಷಣೆಗೆ ವಿದ್ಯುತ್ ತಂತಿ ಬೇಲಿಯನ್ನು ನಿರ್ಮಿಸಿಕೊಂಡಿದ್ದಾರೆ. ಆಹಾರ ಹುಡುಕಿಕೊಂಡು ಬಂದಿರುವ ಮೂರು ಆನೆಗಳ ಪೈಕಿ ಒಂದು ಗಂಡಾನೆ ವಿದ್ಯುತ್ ಅವಘಡದಿಂದ ಸತ್ತಿದೆ. ರೈತನ ಜಮೀನಿನಲ್ಲಿ ಸಾವನ್ನಪ್ಪಿದೆ ಎಂಬ ಕಾರಣಕ್ಕೆ ರೈತನ ಮೇಲೆ ಕೇಸ್ ದಾಖಲಿಸಬೇಡಿ ಎಂದು ಶಾಸಕ ಮಂಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸ್ಥಳದಲ್ಲಿ ತಹಸೀಲ್ದಾರ್ ಸೌಮ್ಯ, ಅರಣ್ಯಾಧಿಕಾರಿಗಳಾದ ಯಶ್ಮಾ ಮಾಚಮ್ಮ, ಶಂಕರ್, ಕಂದಾಯ ಅಧಿಕಾರಿಗಳಾದ ಹರೀಶ್ ಇತರರು ಹಾಜರಿದ್ದರು. ಹಾಸನ ಪಶು ವೈಧ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ನೆಲಬಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಸಾವನ್ನಪ್ಪಿರುವ ಆನೆಯನ್ನು ನೋಡಲು ಜಮಾಯಿಸಿದ್ದರು.
======* ಬಾಕ್ಸ್: ರೈತರಿಗೆ ಪರಿಹಾರ ಕೊಡಿಸುವುದಾಗಿ ಶಾಸಕ ಮಂಜು ಭರವಸೆಆನೆ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎ.ಮಂಜುಅವರು ಆನೆ ಸಾವಿಗೆ ಕಂಬನಿ ಮಿಡಿದರು. ರೈತರು ಹಾಗೂ ಆನೆಗಳ ನಡುವಿನ ಸಂಘರ್ಷ ಹಲವಾರು ವರ್ಷಗಳಿಂದ ನಡೆಯುತ್ತಲೆ ಬರುತ್ತಿದೆ. ನಾನು ಮಂತ್ರಿಯಾಗಿದ್ದಾಗ ಈ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸಿದ್ದೆ. ಆದರೆ ಯಾವುದೇ ಸರ್ಕಾರಗಳು ಕಾಮಗಾರಿಗೆ ಮುಂದಾಗದ ಕಾರಣ ಈ ಪರಿಸ್ಥಿತಿ ತಲೆದೋರಿದೆ. ಸೋಮವಾರ ವಿಧಾನಸಭಾ ಕಲಾಪದಲ್ಲಿ ಆನೆ ಕಾರಿಡಾರ್, ಬೆಳೆ ಪರಿಹಾರ ಕುರಿತು ಸರ್ಕಾರದ ಗಮನ ಸೆಳೆದು ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ಆನೆ ಕಾರಿಡಾರ್ ನಿರ್ಮಾಣಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.