ತುರ್ತು ಚಿಕಿತ್ಸೆ ಲಭಿಸದೆ ವ್ಯಕ್ತಿ ಸಾವು: ದಿಢೀರ್ ಪ್ರತಿಭಟನೆ

KannadaprabhaNewsNetwork |  
Published : Jul 05, 2025, 01:48 AM IST
ದಿ.4.ಅರ್.ಪಿ.ಟಿ.3ಪಿ: ರಿಪ್ಪನ್‍ಪೇಟೆಯಲ್ಲಿ ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಹಿನ್ನೆಲೆ ಬಿಜೆಪಿ ಮುಖಂಡ, ತಾಪಂ ಮಾಜಿ ಅಧ್ಯಕ್ಷ ವಿರೇಶ್ ಅಲುವಳ್ಳಿ ಅವರ ನೇತೃತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಲಾಯಿತು. | Kannada Prabha

ಸಾರಾಂಶ

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳು ಇಲ್ಲದೆ ಕಲ್ಲೂರು ಗ್ರಾಮದ ರಾಮಪ್ಪ ಎಂಬುವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಶುಕ್ರವಾರ ಬಿಜೆಪಿಯಿಂದ ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ರಿಪ್ಪನ್‍ಪೇಟೆ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳು ಇಲ್ಲದೆ ಕಲ್ಲೂರು ಗ್ರಾಮದ ರಾಮಪ್ಪ ಎಂಬುವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಶುಕ್ರವಾರ ಬಿಜೆಪಿಯಿಂದ ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಬಿಜೆಪಿ ಮುಖಂಡ, ತಾಪಂ ಮಾಜಿ ಅಧ್ಯಕ್ಷ ವಿರೇಶ್ ಅಲುವಳ್ಳಿ ಅವರ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಇರುವ ವೈದ್ಯರ ಬಳಿ ಚರ್ಚೆ ನಡೆಸಲಾಯಿತು.

ಬಳಿಕ ಪತ್ರಿಕಾಗೋಷ್ಠಿ ನಡೆಸಿದ ವಿರೇಶ್ ಅಲುವಳ್ಳಿ ಅವರು, ಇಲ್ಲಿನ ವೈದ್ಯಾಧಿಕಾರಿಗಳು ಇನ್‍ಚಾರ್ಜ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಳಗ್ಗೆಯಿಂದ ಸಂಜೆಯ ವರಗೆ ಕರ್ತವ್ಯ ಮಾಡಲಾಗುತ್ತಿದೆ. ಹೆರಿಗೆ ಇನ್ನಿತರ ಅಗತ್ಯ ಸೌಲಭ್ಯಗಳು ರಾತ್ರಿ ವೇಳೆ ಬಂದರೆ ಯಾರು ಇರುವುದಿಲ್ಲ. ಇದರಿಂದಾಗಿ ಸಮಸ್ಯೆ ಉದ್ಭವವಾಗುವಂತಾಗಿದೆ. ಅಲ್ಲದೆ ಆರೋಗ್ಯ ಕಾರ್ಯಕರ್ತೆಯರೂ ಡೆಪ್ಟೇಷನ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಖಾಯಂ ಅರೋಗ್ಯ ಕಾರ್ಯಕರ್ತೆ ನಿಯೋಜನೆಯ ಮೇಲೆ ಭದ್ರಾವತಿಯಲ್ಲಿ ಕಾರ್ಯನಿಹಿಸುತ್ತಿದ್ದಾರೆ. ಇದರಿಂದಾಗಿ ಅಸ್ಪತ್ರೆಯಲ್ಲಿ ಡಿ.ಗ್ರೂಪ್ ನೌಕರರೇ ಚುಚ್ಚು ಮದ್ದು ನೀಡುವುದು ಅನಿವಾರ್ಯವಾಗಿದೆ ಎಂದು ದೂರಿದರು.

ತಜ್ಞರಲ್ಲದ ಡಿ.ಗ್ರೂಪ್ ನೌಕರರು ಇಂಜೆಕ್ಷನ್ ನೀಡಿ ಏನಾದರೂ ಅವಘಡ ಸಂಭವಿಸಿದರೆ ಹೂಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವಂತಾಗಿದೆ. ತಕ್ಷಣ ಈ ಅವ್ಯವಸ್ಥೆಯನ್ನು ಸರಿಪಡಿಸಿಕೊಡುವುದರೊಂದಿಗೆ ರೋಗಿಗಳಿಗೆ ಸಮರ್ಪಕ ಸೇವೆ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಈ ಸಮಸ್ಯೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನಾವು ಆಸ್ಪತ್ರೆಯ ಮುಂಭಾಗ ಆಥವಾ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮತ್ತು ಜಿಲ್ಲಾ ಅರೋಗ್ಯಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ರಿಪ್ಪನ್‍ಪೇಟೆಯಿಂದ ಕಾಲ್ನಡಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿ ಹರತಾಳು ಹಾಲಪ್ಪನವರು ಆಧಿಕಾರದಲ್ಲಿದ್ದ ಆವಧಿಯಲ್ಲಿ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸರ್ಕಾರಿ ಅಸ್ಪತ್ರೆಯ ವಿರುದ್ಧ ಪಾದಯಾತ್ರೆ ನಡೆಸುವ ಮೂಲಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿ ಈ ಅಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಭರವಸೆ ನೀಡಿದ್ದರು. ಅವರು ಈಗ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆಯುತ್ತಾ ಬಂದರೂ ಆಸ್ಪತ್ರೆಯ ಅಭಿವೃದ್ಧಿಗೆ ಸರ್ಕಾರದಿಂದ ಒಂದು ನೈಯಾಪೈಸೆ ಅನುದಾನ ತಂದಿಲ್ಲ. ಶಾಸನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲ. ಇವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ರೀತಿಯಲ್ಲಿ ಆಸ್ಪತ್ರೆ ಅವ್ಯಸ್ಥೆಗೆ ಕಾರಣವಾಗಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಜಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್.ಸತೀಶ್, ಮುಖಂಡರಾದ ಪದ್ಮಸುರೇಶ್, ಎಂ.ಬಿ.ಮಂಜುನಾಥ, ಗ್ರಾಪಂ ಉಪಾಧ್ಯಕ್ಷ ಸುದೀಂದ್ರ ಪೂಜಾರಿ, ಗ್ರಾಪಂ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ್, ಆಶ್ವಿನಿರವಿಶಂಕರ್, ತಾಪಂ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಪಿ.ಸುಧೀರ್ ಮತ್ತಿತರರಿದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ