ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಹೊರವಲಯದ ಕುಡುಪು ಬಳಿ ಕ್ರಿಕೆಟ್ ಪಂದ್ಯಾಟದ ವೇಳೆ ಗುಂಪು ಹಲ್ಲೆ ನಡೆಸಿ ಅಪರಿಚಿತ ವ್ಯಕ್ತಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 30 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಲ್ಲಿ 25 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.ಕುಡುಪು ನಿವಾಸಿ ಸಚಿನ್ ಎಂಬಾತ ಹಲ್ಲೆ ನಡೆಸಿದ ಪ್ರಮುಖ ಆರೋಪಿ. ಕುಡುಪು ಆಸುಪಾಸಿನ ನಿವಾಸಿಗಳಾದ ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೇಶ್ ಕುಮಾರ್ ಅಲಿಯಾಸ್ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಆಳ್ವಾರೀಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಷ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಮೃತಪಟ್ಟ ವ್ಯಕ್ತಿಯ ಮೂಲ ಇನ್ನೂ ಗೊತ್ತಾಗಿಲ್ಲ. ಒಂದೆಡೆ ಬಂಗಾಳ, ಬಿಹಾರ ಮೂಲದವನೆಂದು ಹೇಳಲಾಗುತ್ತಿದೆ, ಆದರೆ ಮಲಯಾಳಂ ಕೂಡ ಮಾತನಾಡುತ್ತಿದ್ದ ಮಾಹಿತಿ ಲಭಿಸಿದೆ. ಆತನ ವಯಸ್ಸು ಸುಮಾರು 35-40 ವರ್ಷ ಆಗಿರಬಹುದು. ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ನಡೆದದ್ದೇನು?: ಭಾನುವಾರ ಮಧ್ಯಾಹ್ನ 3.30ಕ್ಕೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನ ಬಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿ ಮೈದಾನಕ್ಕೆ ಬಂದಿದ್ದು, ಮುಖ್ಯ ಆರೋಪಿ ಸಚಿನ್‌ನೊಂದಿಗೆ ಜಗಳ ಆರಂಭವಾಗಿದೆ. ಈ ವೇಳೆ ಕ್ರಿಕೆಟ್ ಆಟದಲ್ಲಿ ತೊಡಗಿಕೊಂಡ ಗುಂಪು ಕೈ- ಕಾಲು ಮತ್ತು ದೊಣ್ಣೆಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದೆ. ಕೆಲವರು ತಡೆಯಲು ಯತ್ನಿಸಿದರೂ, ನಿರಂತರವಾಗಿ ಭಾರೀ ಹಲ್ಲೆ ನಡೆಸಿದ ಕಾರಣ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.ಅದೇ ದಿನ ಸಂಜೆ ಸುಮಾರು 5.30ರ ವೇಳೆಗೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿತ್ತು. ಸ್ಥಳ ಪರಿಶೀಲನೆ ವೇಳೆ ಮೃತದೇಹದ ಮೈಮೇಲೆ ಸ್ಪಷ್ಟವಾದ ಹಾಗೂ ಗಂಭೀರ ಗಾಯಗಳು ಕಂಡುಬಾರದ ಕಾರಣ, ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು. ಅಪರಾಧ ಸ್ಥಳ ಪರಿಶೀಲನಾ ತಜ್ಞರು ಮತ್ತು ಪೊರೆನ್ಸಿಕ್ ತಂಡಗಳು ಶವ ಪರೀಕ್ಷೆ ನಡೆಸುವಂತೆ ಶಿಫಾರಸು ಮಾಡಿದ್ದರು. ಅದರಂತೆ ಸೋಮವಾರ ಅಪರಿಚಿತ ಶವ ಪರೀಕ್ಷೆ ನಡೆಸಲಾಯಿತು.
ಬಲವಾದ ಏಟುಗಳಿಂದ ಸಾವು:ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಪ್ರಾಥಮಿಕ ವರದಿ ಪ್ರಕಾರ, ಮೃತನ ಬೆನ್ನು ಭಾಗದಲ್ಲಿ ಬಹಳಷ್ಟು ಬಲವಾದ ಹೊಡೆತಗಳ ಕಾರಣದಿಂದ ಉಂಟಾದ ರಕ್ತಸ್ರಾವ, ದೇಹದ ಒಳಭಾಗಗಳಿಗೆ ಉಂಟಾದ ಏಟು, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿರುವುದು ಕಂಡುಬಂದಿದೆ, ಮೃತನ ಖಾಸಗಿ ಅಂಗಗಳಿಗೂ ಜಖಂ ಉಂಟಾಗಿತ್ತು. ಪೋಸ್ಟ್ ಮಾರ್ಟಂ ವರದಿ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.
ದೇಶದಲ್ಲಿ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತಾ) ಕಾಯಿದೆ ಜಾರಿಯಾದ ಬಳಿಕ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗುಂಪು ಹಲ್ಲೆಯಿಂದ ಕೊಲೆ ನಡೆದಿರುವುದು ಇದೇ ಮೊದಲು. ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ ೩೭/೨೦೨೫, ಕಲಂ ೧೦೨ (೨), ೧೮೯ (೨),೧೯೧ (೧), ೧೯೧(೩), ೨೪೦ ಭಾರತೀಯ ನ್ಯಾಯ ಸಂಹಿತೆ ೨೦೨೩ (ಬಿಎನ್‌ಎಸ್ ೨೦೨೩) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದರು.ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ರವಿಶಂಕರ್ ಇದ್ದರು.
ಮಾಜಿ ಕಾರ್ಪೊರೇಟರ್ ಪತಿ ಭಾಗಿ?ಕೊಲೆ ಪ್ರಕರಣದ ಇತರ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಮಾಜಿ ಕಾರ್ಪೊರೇಟರ್ ಒಬ್ಬರ ಪತಿ ರವೀಂದ್ರ ನಾಯಕ್ ಎಂಬವರ ಹೆಸರೂ ಕೇಳಿಬರುತ್ತಿದ್ದು, ಈ ದಿನಕ್ಕಿನಲ್ಲೂ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.
ವ್ಯಕ್ತಿಯನ್ನು ಹೊಡೆಯುತ್ತಿರುವ ವಿಡಿಯೊವನ್ನು ಸ್ಥಳದಲ್ಲಿದ್ದ ಅನೇಕರು ಮಾಡಿದ್ದಾರೆ ಎನ್ನಲಾಗಿದ್ದು, ಈ ವಿಡಿಯೊಗಳನ್ನು ಡಿಲೀಟ್ ಮಾಡಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.ಪಾಕಿಸ್ತಾನ್ ಜಿಂದಾಬಾದ್ ಹೇಳಿದ್ದನೇ?
ಕೊಲೆಯಾದ ವ್ಯಕ್ತಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಮೈದಾನಕ್ಕೆ ಬಂದು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದ್ದಾಗಿಯೂ, ಅದಕ್ಕಾಗಿ ಹಲ್ಲೆ ನಡೆಸಿರುವುದಾಗಿ ಮಾತುಗಳು ಕೇಳಿಬರುತ್ತಿದ್ದು, ಇದನ್ನು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಖಚಿತಪಡಿಸಿಲ್ಲ.ಆದರೆ ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.