)
ಕನ್ನಡಪ್ರಭ ವಾರ್ತೆ ಬೆಂಗಳೂರು
ಚೊಕ್ಕಸಂದ್ರದ ನಿವಾಸಿ ದೀಪಕ್ (28) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಕಲಬುರಗಿ ಜಿಲ್ಲೆಯ ಮಹಿಪಾಲ ರೆಡ್ಡಿ ಹಾಗೂ ಸಂತೋಷ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ಗುರಾಯಿಸಿದ ವಿಚಾರವಾಗಿ ದೀಪಕ್ ಹಾಗೂ ರೆಡ್ಡಿ ಸ್ನೇಹಿತರ ಮಧ್ಯೆ ಭಾನುವಾರ ರಾತ್ರಿ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸ ಅರಸಿಕೊಂಡು ಕಲಬುರಗಿ ಜಿಲ್ಲೆಯ ರೆಡ್ಡಿ ಹಾಗೂ ಸಂತೋಷ್ ಸೇರಿದಂತೆ ಸ್ನೇಹಿತರ ಕುಟುಂಬಗಳು ಸಹ ನಗರಕ್ಕೆ ಬಂದು ನಂದಿನಿಲೇಔಟ್, ಚೊಕ್ಕಸಂದ್ರ ಹಾಗೂ ಯಶವಂತಪುರ ಕಡೆ ಅವರು ನೆಲೆಸಿದ್ದರು. ಇವರು ಕ್ಯಾಬ್ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು.ಚೊಕ್ಕಸಂದ್ರ ಬಳಿ ಶನಿವಾರ ರಾತ್ರಿ ಕಲಬುರಗಿ ಹುಡುಗರು ಹೋಗುವಾಗ ಸಣ್ಣ ವಿಚಾರವಾಗಿ ಸ್ಥಳೀಯ ದೀಪಕ್ ಹಾಗೂ ಆತನ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ತಮ್ಮನ್ನು ಗುರಾಯಿಸಿ ಗಲಾಟೆ ಮಾಡಿದರು ಎಂದು ಕಲಬುರಗಿ ಜಿಲ್ಲೆಯ ಯುವಕರು ಆರೋಪಿಸಿದ್ದಾರೆ. ಈ ಮಾತಿನ ಚಕಮಕಿ ಬಳಿಕ ಚೊಕ್ಕಸಂದ್ರಕ್ಕೆ ತೆರಳಿ ಭಾನುವಾರ ರಾತ್ರಿ ರೆಡ್ಡಿ ಹಾಗೂ ಸಂತೋಷ್ ಸ್ನೇಹಿತರು ಏಕಾಏಕಿ ಗಲಾಟೆ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ತೀವ್ರವಾಗಿ ಹಲ್ಲೆಗೊಳಗಾದ ದೀಪಕ್ ಮೃತಪಟ್ಟರೆ, ಮತ್ತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಘಟನೆ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.