ಮನುಷ್ಯನಿಗೆ ಆಹಾರ, ಆರೋಗ್ಯ, ಆಧ್ಯಾತ್ಮ ಅವಶ್ಯಕ

KannadaprabhaNewsNetwork | Published : Dec 31, 2024 1:04 AM

ಸಾರಾಂಶ

ಮಾನವ ಯಾವಾಗಲೂ ಸುಖಾಪೇಕ್ಷಿ, ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಆಹಾರ, ಆರೋಗ್ಯ ಹಾಗೂ ಆಧ್ಯಾತ್ಮಿಕತೆ ಅತ್ಯವಶ್ಯಕವಾಗಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರುಮಾನವ ಯಾವಾಗಲೂ ಸುಖಾಪೇಕ್ಷಿ, ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಆಹಾರ, ಆರೋಗ್ಯ ಹಾಗೂ ಆಧ್ಯಾತ್ಮಿಕತೆ ಅತ್ಯವಶ್ಯಕವಾಗಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು. ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವಾನದಲ್ಲಿ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ಜನಜಾಗೃತಿ ಸಮಾರೋಪ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕೋಟಿ ಹಣ ಇದ್ದರೇನು ಮಾನವೀಯ ಮೌಲ್ಯವಿಲ್ಲದ ಜೀವನ ನಿರರ್ಥಕ. ಜೀವನ ಎಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ ಧರ್ಮ ಎಂಬ ಹುಟ್ಟು ಅವಶ್ಯಕ. ಜ್ಞಾನದಿಂದ ಅಧಿಕಾರ ಸಿಗಬಹುದು. ಆದರೆ ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಬೇಕು ಎಂದರು.ಅನುಭವ ಜಗತ್ತಿನ ಶ್ರೇಷ್ಠ ಶಿಕ್ಷಕ. ಉಸಿರಿರುವವರೆಗೂ ಜ್ಞಾನಾರ್ಜನೆ ಜೀವನದ ಗುರಿಯಾಗಿರಬೇಕು. ಯಾರು ಎಷ್ಟೇ ತುಳಿದರೂ ಗರಿಕೆ ಕ್ಷಣಗಳಲ್ಲಿ ಮೊದಲಿನ ಸ್ಥಿತಿಗೆ ಬರುತ್ತದೆ. ಅದು ಯಾವತ್ತೂ ಬೇಸರಿಸಿಕೊಳ್ಳುವುದಿಲ್ಲ ಮತ್ತು ಎದ್ದು ನಿಲ್ಲುವುದನ್ನು ಮರೆಯುವುದಿಲ್ಲ. ಮನುಷ್ಯನ ಮನೋಭಾವವೂ ಗರಿಕೆಯಂತಿರಬೇಕು ಎಂದು ಹೇಳಿದರು. ಮೂಗನ ಮಾತನ್ನು ಬೇಗ ಅರ್ಥ ಮಾಡಿಕೊಳ್ಳಬಹುದು. ಆದರೆ ಮುಖವಾಡ ಧರಿಸಿ ಹಿಂದೆ ಓಡಾಡುವವರ ಮಾತನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಜಗದ್ಗುರು ರೇಣುಕಾಚಾರ್ಯರು ಉಜ್ವಲ ಬದುಕಿಗೆ ಜೀವನ ದರ್ಶನದ ಅರಿವನ್ನು ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಘಟನೆಗಳನ್ನು ಕಾಣಬಹುದು. ತುಮಕೂರಿನಲ್ಲಿ ಹಮ್ಮಿಕೊಂಡಿರುವ ಧನುರ್ಮಾಸ ಪೂಜಾ ಹಾಗೂ ಸಮಾರಂಭಗಳು ತಮಗೆ ತೃಪ್ತಿ ತಂದಿವೆ ಎಂದ ಜಗದ್ಗುರುಗಳು, ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಂಘಟಕರಿಗೆ ಶುಭ ಹಾರೈಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಂಕರ ಮಹಾದೇವ ಬಿದರಿ ಮಾತನಾಡಿ, ವೀರಶೈವ ಧರ್ಮದ ಸಂಸ್ಕೃತಿ ಬೆಳೆದುಬಂದ ಪರಂಪರೆ ಅಪೂರ್ವ. ಆಚಾರ್ಯರ ಮತ್ತು ಶರಣರ ಪರಿಶ್ರಮದಿಂದ ಸಖಲ ಜೀವಾತ್ಮರಿಗೆ ಒಳಿತನ್ನೇ ಬಯಸುತ್ತಾ ಬಂದಿದೆ. ವೀರಶೈವ ಧರ್ಮದಲ್ಲಿ ನೂರಾರು ಒಳಪಂಗಡಗಳ ಬೇಧ ಭಾವನೆಯಿಂದಾಗಿ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಒಳಪಂಗಡ ಮರೆತು ಎಲ್ಲರೂ ಒಗ್ಗಟ್ಟಿನಿಂದ ಬಾಳುವ ಅಗತ್ಯವಿದೆ ಎಂದರು.ಪ್ರಶಾಂತ ರಿಪ್ಪನ್‌ಪೇಟೆ ಅವರು ಜಗದ್ಗುರು ಪಂಚಾಚಾರ್ಯ ಪಂಚ ಸೂತ್ರ ಕುರಿತು ಉಪನ್ಯಾಸ ನೀಡಿದರು.

ಮಾಜಿ ಸಚಿವ ಸೊಗಡು ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಮುರಳಿಧರ ಹಾಲಪ್ಪ. ಎ.ಎಸ್.ಸೋಮಶೇಖರ್, ಬಿ.ಎಸ್.ಮಂಜುನಾಥ್, ನಾ.ಚಂ.ಗಂಗಾಧರ ಶಾಸ್ತ್ರಿ, ಎಸ್.ಶ್ರೀಧರ್, ಡಿ.ಎಂ.ರಾಜಶೇಖರ್, ಸಿದ್ದಪ್ಪ, ರೇಣುಕಾ ಪರಮೇಶ್ ರಾಜೇಶ್ವರಿ ರುದ್ರಪ್ಪ, ನಳಿನಾ ಶಿವಾನಂದ ಗುರುರಕ್ಷೆ ಸ್ವೀಕರಿಸಿದರು.ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಗವಿಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವೀರಶೈವ ಧರ್ಮ ಸಂಸ್ಕೃತಿ ಗುರುಪರಂಪರೆಯ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದರು. ಪಂಚಾಚಾರ್ಯ ಸೇವಾ ಟ್ರಸ್ಟ್ನ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ, ಉಪಾಧ್ಯಕ್ಷ ಕೆ.ಎನ್.ಉಮೇಶ್‌ಕುಮಾರ್, ಕಾರ್ಯದರ್ಶಿ ಭಸ್ಮಾಂಗಿ ರುದ್ರಯ್ಯ ಮತ್ತಿತರರು ಭಾಗವಹಿಸಿದ್ದರು.

ಫೋಟೋ :

Share this article