- ಜಿಲ್ಲಾ ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘದ ಸರ್ವ ಸದಸ್ಯರ ಮಹಾಸಭೆ
ಮನುಷ್ಯನು ಪರೋಪಕಾರ, ತ್ಯಾಗ, ಸೇವಾ ಗುಣಗಳನ್ನು ಹೊಂದಿ, ಸಮಾಜಕ್ಕೆ ಆದರ್ಶವಾಗಿ ಬದುಕುವ ಜೊತೆಗೆ ಇತರರಿಗೆ ಮಾರ್ಗದರ್ಶಕರಾಗಿರಬೇಕೆಂದು ಅಮೃತ್ ನೋನಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಭಾನುವಾರ ಬಸವನಹಳ್ಳಿಯ ರಂಗಣ್ಣನವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘದ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ನಿವೃತ್ತ ನೌಕರರಿಗೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಪ್ರ ನೌಕರರ ಸಂಘದವರು ನಮ್ಮ ಭಾಷೆ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸುವ ಜೊತೆಗೆ ಸಮಾಜಕ್ಕೆ ಆದರ್ಶ ಪ್ರಾಯವಾಗಿ ಬದುಕುತ್ತಿದ್ದೇವೆ ಎಂದರು.ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹಿಂದಿನ ಕಾಲದಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಿ ಗೌರವ ಬರುವಂತೆ ನಡೆದು ಕೊಳ್ಳುತ್ತಿದ್ದರು. ಆದರೆ, ಇಂದು ವ್ಯಾಪಾರೀಕರಣ ಆಗುತ್ತಿರುವುದು ವಿಷಾದನೀಯ ಸಂಗತಿ. ಆಧುನಿಕ ಶಿಕ್ಷಣ ಹಲವು ಅವಕಾಶಗಳನ್ನು ಒದಗಿಸಿ ಕೊಡುತ್ತದೆ. ಉನ್ನತ ವ್ಯಾಸಂಗ ಮಾಡಿದ ನಾವುಗಳು ನಮ್ಮ ದೇಶದಲ್ಲಿಯೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಮಾತನಾಡಿ, ಸಮಾಜ ಬಾಂಧವರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಜೊತೆಗೆ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ವಿದ್ಯಾಭ್ಯಾಸ ನೀಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ನಮ್ಮ ಸಂಸ್ಕಾರ ಸಂಸ್ಕೃತಿ ಕಲಿಸಿಕೊಡಬೇಕು, ಪ್ರತಿಯೊಬ್ಬರು ಪ್ರತಿದಿನ ಸಂಧ್ಯಾ ವಂದನೆ ಜೊತೆ ಗಾಯಿತ್ರಿ ಮಂತ್ರ ಪಠಿಸಬೇಕು, ಆಗ ನಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ ಎಂದು ತಿಳಿಸಿದರು.
ಗೋಪಾಲಕೃಷ್ಣ ಸ್ವಾಗತಿಸಿ, ಗಿರೀಶ್ ನಿರೂಪಿಸಿ, ಸುನೀಲ್ ವಂದಿಸಿದರು. ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಅನಂತರಾಮಯ್ಯ, ಚಂದ್ರಮೌಳಿ, ಉಪಾಧ್ಯಕ್ಷರಾದ ಕೆ.ಯು.ವಿನುತ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಜೆ.ಪಿ.ಕಿರಣ್, ನಿರ್ದೇಶಕರಾದ ಗೋಪಾಲಕೃಷ್ಣ, ಬದ್ರಿನಾರಾಯಣ್, ಸುನೀಲ್ ಉಪಸ್ಥಿತರಿದ್ದರು. 7 ಕೆಸಿಕೆಎಂ 3