ಮಳವಳ್ಳಿ: ವ್ಯಕ್ತಿಯನ್ನು ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿದ ನಂತರ ಬೈಕ್‌ನಲ್ಲಿ ಶವ ಸಾಗಿಸುವ ವೇಳೆ ಪಟ್ಟಣದಲ್ಲಿ ಆರೋಪಿಗಳು ಸಾರ್ವಜನಿಕರಿಗೆ ಸಿಕ್ಕಿ ಬಿದ್ದ ಪರಿಣಾಮ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ತಾಲೂಕಿನ ಭೀಮನಹಳ್ಳಿ ಗ್ರಾಮದ ಮಹೇಶ್(34) ಮೃತ ದುರ್ದೈವಿ. ರಾಮನಾಥಮೋಳೆ ಗ್ರಾಮದ ರಾಜೇಶ್ ಬಂಧಿತ ಆರೋಪಿ. ಮಂಗಳವಾರ ರಾತ್ರಿ ಭೀಮನಹಳ್ಳಿಯ ಅಕ್ಕನ ಮನೆಯಲ್ಲಿ ಊಟ ಮಾಡುತ್ತಿದ್ದ ಮಹೇಶ್‌ನನ್ನು ರಾಜೇಶ್ ಕರೆ ಮಾಡಿ ಕರೆದುಕೊಂಡು ಹೋಗಿ ಇತರೆ ಸ್ನೇಹಿತರ ಜೊತೆಗೂಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆಂದು ಮೃತ ಸಹೋದರಿ ರತ್ನಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಭೀಮನಹಳ್ಳಿಯಿಂದ ಸುಲ್ತಾನ್ ರಸ್ತೆ ಮಾರ್ಗವಾಗಿ ಕೊಳ್ಳೇಗಾಲದ ಕಡೆಗೆ ಹೋಗುತ್ತಿದ್ದಾಗ ಪಟ್ಟಣದ ಸೆಸ್ಕಾಂ ಕಚೇರಿ ಮುಂದೆ ಪೆಟ್ರೋಲ್ ತೀರಿಹೋದ ಹಿನ್ನೆಲೆ ಬೈಕ್ ನಿಂತಿದೆ. ರಕ್ತದ ಮಡುವಿನಲ್ಲಿದ್ದ ದೇಹವನ್ನು ನೋಡಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ಹೋಗುತ್ತಿದ್ದೇವೆಂದು ಆರೋಪಿಗಳು ತಿಳಿಸಿದ್ದಾರೆ. ಅನುಮಾನಗೊಂಡ ಸಾರ್ವಜನಿಕರು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ ಬೆನ್ನಲ್ಲೇ ಸ್ಥಳದಲ್ಲಿದ್ದ ಆರೋಪಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
-----------
17ಕೆಎಂಎನ್ ಡಿ11ಮಹೇಶ್