ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರಸಭೆ ವ್ಯಾಪ್ತಿಯ ಗಾಂಧಿನಗರ ನಿವಾಸಿ, ಕೆಎಸ್‌ಆರ್‌ಟಿಸಿ ಕಿರಿಯ ಸಹಾಯಕಿ ಮಂಗಳ ನಾಯ್ಕ್ ಅವರು ಸೋಮವಾರ ಠಾಣೆಗೆ ದೂರು ನೀಡಿದ್ದರು. ತಮಗೆ ಪರಿಚಯವಿದ್ದ ಮುರಳಿ ಹಾಗೂ ಆತನ ಸಹೋದರ ರವಿ ಎಂಬುವರು, ನಿಮ್ಮ ಮೇಲೆ ವಾಮಾಚಾರ ಪ್ರಯೋಗವಾಗಿದೆ. ಅದನ್ನು ಪರಿಹರಿಸದಿದ್ದರೆ ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ದೊಡ್ಡ ಮಟ್ಟದ ಸಮಸ್ಯೆಯಾಗಬಹುದು ಎಂದು ಭಯ ಹುಟ್ಟಿಸಿದ್ದರು. ನಂತರ ನಮ್ಮ ಮನೆಗೆ ಆಗಮಿಸಿ ವಾಮಾಚಾರ ಪರಿಹರಿಸುವುದಾಗಿ ಪೂಜೆ ನಡೆಸಿದ್ದರು. ಪೂಜೆ ಮುಗಿದ ನಂತರ ಬಂಗಾರದ ಒಡವೆ ಹಾಗೂ ನಗದು ಹಣ ತಮ್ಮ ಬಳಿ ನೀಡುವಂತೆ ತಿಳಿಸಿ, ಅವುಗಳನ್ನು ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಮಾಡಿ ವಾಪಸ್ ನೀಡುವುದಾಗಿ ನಂಬಿಸಿದ್ದರು. ಹಾಗಾಗಿ ತಮ್ಮ ಬಳಿ ಇದ್ದ 193 ಗ್ರಾಂ ಒಡವೆ ಹಾಗೂ 2 ಲಕ್ಷ ರು. ನಗದು ಹಣ ನೀಡಲಾಗಿದೆ. ಬಳಿಕ ಪಡೆದುಕೊಂಡ ಚಿನ್ನಾಭರಣ ಮತ್ತು ನಗದು ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ತಿಪ್ಲಾಪುರ ಕ್ಯಾಂಪ್ ನಿವಾಸಿ ಮುರುಳಿ ಅಲಿಯಾಸ್ ಕರಿಯಾ (31) ಎಂಬಾತನನ್ನು ಬಂಧಿಸಿದ್ದು, 22.50 ಲಕ್ಷ ರು. ಮೌಲ್ಯದ 161 ಗ್ರಾಂ ಒಡವೆ ಹಾಗೂ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ.ತನಿಖೆ ವೇಳೆ ಮುರುಳಿ ಚಿನ್ನಾಭರಣದ ಕೆಲವು ಭಾಗವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟಿರುವುದು ಹಾಗೂ ಮತ್ತಷ್ಟು ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿಯಾಗಿ ಮಾಡಿಕೊಂಡು ಮನೆಯಲ್ಲಿ ಬಚ್ಚಿಟ್ಟಿರುವುದು ಪೊಲೀಸರ ಕಾರ್ಯಾಚರಣೆ ವೇಳೆ ಬಯಲಿಗೆ ಬಂದಿದೆ.