ಕನ್ನಡಪ್ರಭ ವಾರ್ತೆ ಮಂಗಳೂರು
ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ 20 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಪ್ರಧಾನಿಯಿಂದ ಲೋಕಾರ್ಪಣೆಗೊಂಡಿದೆ.
ಈ ಕಾಮಗಾರಿಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಕರಾವಳಿಯ ಕನ್ನಡಿಗ ಅಧಿಕಾರಿಯೊಬ್ಬರು ಕಾರ್ಯ ನಿರ್ವಹಿಸಿದ್ದಾರೆ.
ಕಾಸರಗೋಡು ಮೂಲದ ಮಂಗಳೂರಿನಲ್ಲಿ ನೆಲೆಸಿರುವ ಅನಿಲ್‌ದಾಸ್ ಬೇಕಲ್ ಎಂಬುವರು ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಡಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಜಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾಣ ವೇಳೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅರ್ಹನಿಶಿ ದುಡಿದು ಸಕಾಲದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುವಲ್ಲಿ ತಮ್ಮ ಕೊಡುಗೆಯನ್ನೂ ನೀಡಿದ್ದಾರೆ.
ಪ್ರಸ್ತುತ ಈ ವಿಮಾನ ನಿಲ್ದಾಣ, ಎರಡನೇ ಹಂತದ ವಿಸ್ತರಣಾ ಕಾಮಗಾರಿಗೆ ಮುಂದಡಿ ಇಡುತ್ತಿದೆ. ಬೇಕಲ್ ಅವರು ಹುಬ್ಬಳ್ಳಿಯಿಂದ 2021ರ ಡಿಸೆಂಬರ್‌ನಲ್ಲಿ ಅಯೋಧ್ಯೆ ಏರ್‌ಸ್ಕ್ರಿಪ್‌ಗೆ (ಆಗ ವಿಮಾನ ನಿಲ್ದಾಣ ಆಗಿರಲಿಲ್ಲ) ವರ್ಗಾವಣೆಗೊಂಡಿದ್ದರು.
ಅಲ್ಲಿ ತರಬೇತಿ ಕೇಂದ್ರ ಮಾತ್ರ ಇತ್ತು. ಈ ವೇಳೆ ಅಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು. ಅತ್ಯಂತ ತ್ವರಿತ ಕಾಮಗಾರಿ ನಡೆದು ಕೇವಲ 20 ತಿಂಗಳಲ್ಲಿ ವಿಮಾನ ನಿಲ್ದಾಣ ಸಿದ್ಧಗೊಂಡಿತ್ತು.
ವಿವಿಧ ಕಾಮಗಾರಿಗಳಿಗೆ ಅನುಮೋದನೆ ಕೊಡಿಸುವುದು ಇವರ ಕೆಲಸವಾಗಿತ್ತು. ಸಕಾಲದಲ್ಲಿ ಕಾಮಗಾರಿ ಪೂರ್ತಿಗೊಂಡು ಡಿಸೆಂಬರ್ ಅಂತ್ಯಕ್ಕೆ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸುವಲ್ಲಿ ಇವರ ಪಾತ್ರವೂ ಇದೆ.
1989ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರ್ಪಡೆಯಾದ ಅನಿಲ್‌ದಾಸ್ ಬೇಕಲ್, ಮಂಗಳೂರಿನಿಂದ ವೃತ್ತಿಜೀವನ ಆರಂಭಿಸಿದರು.
ಅಲ್ಲಿಂದ ಬೆಂಗಳೂರು, ಅಸ್ಸಾಂನ ತೇಜ್‌ಪುರ್, ಗೋವಾ, ಕಾಶಿ, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಬಳಿಕ ಅಯೋಧ್ಯೆಗೆ ವರ್ಗಾವಣೆಯಾಗಿದ್ದಾರೆ. ಪ್ರಸಕ್ತ ಅಯೋಧ್ಯೆಯಿಂದ ಬೆಳಗಾವಿಗೆ ವರ್ಗಾವಣೆಗೊಳ್ಳುತ್ತಿದ್ದಾರೆ.