ಕನ್ನಡಪ್ರಭ ವಾರ್ತೆ ಬೆಂಗಳೂರು
ನೆಲಮಂಗಲ ಸಮೀಪದ ಹುಸ್ಕೂರಿನ ಕೋಡಿಪಾಳ್ಯದಲ್ಲಿರುವ ಝೊಮ್ಯಾಟೋ ಆಹಾರ ವಿತರಣಾ ಸಂಸ್ಥೆಯ ಉಗ್ರಾಣದಲ್ಲಿ (ವೇರ್‌ಹೌಸ್) ರಾತ್ರಿ ಪಾಳಯದಲ್ಲಿ ಕನ್ನಡದ ಕಾರ್ಮಿಕನೊಬ್ಬ ಕೆಲಸ ಮಾಡುವ ವೇಳೆ ತನಗೆ ಹಿಂದಿ ಬರಲ್ಲ ಎಂದಿದ್ದಾನೆ. ಇದರಿಂದ ಆಕ್ರೋಶಗೊಂಡ ಹಿಂದಿ ಭಾಷೆಯ ಗೋದಾಮಿನ ಮೇಲ್ವಿಚಾರಕ ಸತೀಶ್ ಎಂಬಾತನು, ‘ಹಿಂದಿ ಕಲಿಯಿರಿ, ಹಿಂದಿ ಕಲಿತು ಕೆಲಸಕ್ಕೆ ಬರಬೇಕು. ಇಲ್ಲ ಅಂದರೆ ಕೆಲಸದಿಂದ ವಜಾ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ.ಈ ದೃಶ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವಿಡಿಯೋದಲ್ಲಿ ‘ನಾನು ನಿಮಗೆ ನೇರವಾಗಿ ಹೇಳ್ತಿದ್ದೀನಿ.. ನೀವೆಲ್ಲರೂ ಹಿಂದಿ ಕಲಿತು ಬರಬೇಕು. ಕನ್ನಡ ಯಾರೆಲ್ಲಾ ಮಾತಾಡ್ತೀರಾ ಅವರೆಲ್ಲಾ ಕೆಲಸ ಬಿಟ್ಟು ಹೋಗಬಹುದು. ನನಗೆ ಯಾವುದೇ ಸಮಸ್ಯೆ ಇಲ್ಲ! ನನಗೆ ಕನ್ನಡ ಬರಲ್ಲ, ನಾನು ಹಿಂದಿಯಲ್ಲೇ ಮಾತಾಡೋದು. ಕರ್ನಾಟಕದಲ್ಲಿದ್ದರೆ ಏನಾಯ್ತು? ನಮ್ಮ ಬಳಿ ಕೆಲಸವಿದೆ, ಎಲ್ಲರೂ ಗಾಡಿ ಹತ್ತಿ ಜಾಗ ಖಾಲಿ ಮಾಡಿ ಎಂದು ಕೆಣಕಿದ್ದಾನೆ ಎಂದು ಆರೋಪಿಸಲಾಗಿದೆ.
ವೈರಲ್ ವಿಡಿಯೋದಿಂದ ಆಕ್ರೋಶಗೊಂಡ ಯುವ ಕರ್ನಾಟಕ ವೇದಿಕೆಯ ಕಾರ್ಯಕರ್ತರು ವೇದಿಕೆ ಅಧ್ಯಕ್ಷ ರೂಪೇಶ್ ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಝೊಮ್ಯಾಟೋ ಆಹಾರ ವಿತರಣಾ ಸಂಸ್ಥೆಯ ಉಗ್ರಾಣದ ಮುಂಭಾಗ ಪ್ರತಿಭಟನೆ ನಡೆಸಿದರು. ಗೋದಾಮು ಮೇಲ್ವಿಚಾರಕ ಅಶೋಕ್‌ನಲ್ಲಿ ಕೆಲಸದಿಂದ ವಜಾಗೊಳಿಸಬೇಕು ಮತ್ತು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ವಿಷಯ ತಿಳಿಯುತ್ತಿದ್ದಂತೆ ಹಿಂದಿ ಭಾಷಿಕ ಮೇಲ್ವಿಚಾರಕ ಸತೀಶ್‌ನನ್ನು ವಶಕ್ಕೆ ಪಡೆದಿರುವ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದರು.ತನ್ನ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಹಿಂದಿವಾಲಾ ಕೈಮುಗಿದು ತನ್ನದು ತಪ್ಪಾಯಿತು. ಇನ್ಮುಂದೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ. ಕನ್ನಡಿಗರನ್ನು ಬೈದಿದ್ದಕ್ಕೆ ಕ್ಷಮೆಯಾಚಿಸುವುದಾಗಿ ಕೈಮುಗಿದು ಕ್ಷಮೆ ಕೇಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಅಲ್ಲದೇ ಝೊಮ್ಯಾಟೋ ಸಂಸ್ಥೆ ಸತೀಶ್‌ನನ್ನು ಕೆಲಸದಿಂದ ವಜಾ ಮಾಡಿದೆ ಎಂದು ಮೂಲಗಳು ತಿಳಿಸಿವೆ.