ಪ್ರವಾಹಕ್ಕೆ ಮಾನಪ್ಪನ ದೊಡ್ಡಿ ಸಂಪೂರ್ಣ ಜಲಾವೃತ

KannadaprabhaNewsNetwork |  
Published : Aug 03, 2024, 12:38 AM IST
ಕೊಡೇಕಲ್ ಸಮೀಪದ ಮಾನಪ್ಪನದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿರುವುದು. | Kannada Prabha

ಸಾರಾಂಶ

ಕೊಡೇಕಲ್ ಸಮೀಪದ ಮಾನಪ್ಪನದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿರುವುದು.

ಕನ್ನಡಪ್ರಭ ವಾರ್ತೆ ಕೊಡೇಕಲ್

ಬಸವಸಾಗರ ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣದಿಂದಾಗಿ ಕೊಡೇಕಲ್ ಸಮೀಪದ ಮಾನಪ್ಪನ ದೊಡ್ಡಿ ಸಂಪೂರ್ಣ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಾನಪ್ಪನ ದೊಡ್ಡಿಗೆ ಭೇಟಿ ನೀಡಿರುವ ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರು ಗ್ರಾಮಸ್ಥರಿಗೆ ನೀರಿನ ಪ್ರಮಾಣ ತಗ್ಗುವವರೆಗೆ ನದಿಯ ದಡಕ್ಕೆ ತೆರಳದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.

ತಾಲೂಕು ಆಡಳಿತದಿಂದ ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರವಾಹ ಪರಿಸ್ಥಿತಿ ಸಂಭವನೀಯವಾಗಿದ್ದರೆ. ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದಾಗಿ ಹೇಳಿದ್ದಾರೆ.

-ಸಂಕಷ್ಟದಲ್ಲಿ ಜನತೆ:

ಜುಮಾಲಪುರ ತಾಂಡಾದ ಮಾನಪ್ಪನ ದೊಡ್ಡಿಗೆ ತೆರಳಬೇಕೆಂದರೆ ಹಳ್ಳ ದಾಟಿಕೊಂಡೆ ತೆರಳಬೇಕು ಆದರೆ ಈದೀಗ ಜಲಾಶಯದಿಂದ ಹರಿಬಿಡಲಾಗುತ್ತಿರುವ ನೀರಿನ ಪ್ರಮಾಣದಿಂದಾಗಿ ಹಳ್ಳಕ್ಕೆ ಪ್ರವಾಹ ಪರಿಸ್ಥಿತಿ ಬಂದಿದ್ದು ಹಳ್ಳದ ದಾರಿಸಂಪರ್ಕ ಕಡಿತಗೊಂಡಿದೆ.

ಜೀವನೊಪಯಕ್ಕಾಗಿ ಕೃಷಿಯೇ ಇವರ ಮೂಲ ಆದಾಯವಾಗಿದ್ದು, ಕಳೆದ ಒಂದು ವಾರದಿಂದ ರಸ್ತೆ ಜಲಾವೃತವಾಗಿರುವುದರಿಂದ ಯಾವ ಆದಾಯವು ಇಲ್ಲದಂತಾಗಿದೆ. ಅಗತ್ಯ ಮೂಲಭೂತ ವಸ್ತುಗಳ ಖರೀದಿ ಮಾಡಲು ಹುಣಸಗಿ ಪಟ್ಟಣ ಹಾಗೂ ಕೊಡೇಕಲ್ ಪಟ್ಟಣಗಳನ್ನು ನೆಚ್ಚಿಕೊಂಡಿದ್ದು, ಸಂಪರ್ಕ ಕಡಿತದಿಂದಾಗಿ ತರಕಾರಿ, ದಿನಸಿ ಸೇರಿದಂತೆ ಆಸ್ಪತ್ರೆಗೆ ತೆರಳಲು ಸಹ ಮೂಲಭೂತ ವ್ಯವಸ್ಥೆಗಳಿಲ್ಲದೇ ಪರದಾಡುವಂತಾಗಿದೆ.

ದೊಡ್ಡಿಯಲ್ಲಿ 15ರಿಂದ 20 ಕುಟುಂಬಗಳು ವಾಸಿಸುತ್ತಿದ್ದು, 50ಕ್ಕೂ ಹೆಚ್ಚು ಜನರು ಜೀವನ ನಡೆಸುತ್ತಿದ್ದಾರೆ. ಸಂಪರ್ಕ ಕಡಿತದಿಂದಾಗಿ ಮಕ್ಕಳು ಶಾಲೆಗೂ ತೆರಳದಂತಾಗಿದೆ. ಇದರಿಂದಾಗಿ ಶೀಘ್ರವೇ ದೊಡ್ಡಿಯ ಜನತೆಗೆ ದಿನಸಿ, ತರಕಾರಿ ಸೇರಿದಂತೆ ಅಗತ್ಯ ಮೂಲಭೂತ ವಸ್ತಗಳನ್ನು ಒದಗಿಸಬೇಕೆಂದು ಗ್ರಾಮದ ಜನತೆ ಸುರಪುರ ವಿಧಾನಸಭಾ ಶಾಸಕ ರಾಜಾ ವೆಣುಗೋಪಾಲನಾಯಕ ಅವರಿಗೆ ಮನವಿ ಮಾಡಿದ್ದಾರೆ.

-ಕೃಷಿ ಅಧಿಕಾರಿಗಳ ಭೇಟಿ: ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಟ್ಟಿರುವುದರಿಂದ ಜುಮಾಲಪುರ ಹತ್ತಿರವಿರುವ ಹಳ್ಳಕ್ಕೆ ನದಿಯ ನೀರು ಹಿಮ್ಮುಖವಾಗಿ ಹರಿದಿರುವುದರಿಂದ ಮಾನಪ್ಪನ ದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ಅಲ್ಲದೇ ಕೆಲವು ಬೆಳೆಗಳಿಗೆ ನೀರು ನುಗ್ಗಿದ್ದು, ಕೊಡೇಕಲ್ ಕೃಷಿ ಅಧಿಕಾರಿ ರಾಮನಗೌಡ ಪಾಟೀಲ್, ಗ್ರಾಮಾಡಳಿತ ಅಧಿಕಾರಿ ಪರಶುರಾಮ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸೇತುವೆ ನಿರ್ಮಿಸಲು ಆಗ್ರಹ: ಪ್ರತಿ ಬಾರಿಯೂ ಜಲಾಶಯದಿಂದ ನದಿಗೆ ನೀರು ಹರಿಬಿಟ್ಟಾಗ ಮಾನಪ್ಪದೊಡ್ಡಿ ಸಮೀಪದ ಹಳ್ಳ ಜಲಾವೃತಗೊಂಡು ದೊಡ್ಡಿಯ ಜನರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೆಲವೊಮ್ಮೆ ತಿಂಗಳು ಗಟ್ಟಲೇ ಪ್ರವಾಹವನ್ನು ದೊಡ್ಡಿಯ ಜನತೆ ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಆಮಲಿಂಗೇಶ್ವರ(ಮಾನಪ್ಪ)ದೊಡ್ಡಿಗೆ ಸೇತುವೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ನೀಡಬೇಕೆಂದು ದೊಡ್ಡಿಯ ಜನತೆ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ