ಕರ್ಮ ಸಿದ್ಧಾಂತ ಶತಮಾನಗಳಿಂದ ನಮ್ಮನ್ನು ಕೊಲ್ಲುತ್ತಿದೆ

KannadaprabhaNewsNetwork |  
Published : Apr 06, 2025, 01:48 AM IST
5 | Kannada Prabha

ಸಾರಾಂಶ

ಹಿರೋಶಿಮಾ ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದರೂ, ಅಲ್ಲಿನ ಜನತೆ 20 ವರ್ಷಗಳಲ್ಲಿ ದೇಶವನ್ನು ಪುನರ್ ನಿರ್ಮಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಭಾರತದಲ್ಲಿ ಕರ್ಮ ಸಿದ್ಧಾಂತ ಶತಮಾನಗಳಿಂದ ನಮ್ಮನ್ನು ಕೊಲ್ಲುತ್ತಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಅದರ ವೇಗ ದ್ವಿಗುಣಗೊಂಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ, ತಥಾಗತ ಬುದ್ಧ ವಿಹಾರ-ನಂಜನಗೂಡು, ವಿಶ್ವಮೈತ್ರಿ ಬುದ್ಧ ವಿಹಾರ- ಮೈಸೂರು, ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸಂಶೋಧಕರ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಾನವ ಮೈತ್ರಿ ಸಂಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಹಿರೋಶಿಮಾ ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದರೂ, ಅಲ್ಲಿನ ಜನತೆ 20 ವರ್ಷಗಳಲ್ಲಿ ದೇಶವನ್ನು ಪುನರ್ ನಿರ್ಮಿಸಿದರು. ಆದರೆ ದೇಶದ ಮೇಲೆ ಹಾಕಿರುವ ದೊಡ್ಡ ಬಾಂಬ್ ಎಂದರೆ ಕರ್ಮ ಸಿದ್ಧಾಂತ. ಈ ಕರ್ಮ ಸಿದ್ಧಾಂತದ ವಿರುದ್ಧ ಮೊದಲು ಯುದ್ಧ ಸಾರಿದ್ದು ಗೌತಮ ಬುದ್ಧ ಎಂದರು.ಕರ್ಮ ಸಿದ್ಧಾಂತವು ನಮ್ಮನ್ನು ನಿರಂತರವಾಗಿ ಕೊಲ್ಲುತ್ತಿದೆ. ನಮ್ಮಲ್ಲಿ ಸ್ವರ್ಗ, ನರಕ ಕಲ್ಪನೆ ಬಿತ್ತಲಾಗಿದೆ. ಇದನ್ನು ಬುದ್ಧ ನಂಬಲಿಲ್ಲ. ಇಷ್ಟು ದೊಡ್ಡ ಜಗತ್ತಿನಲ್ಲಿ ಒಬ್ಬನಾದರೂ ಸ್ವರ್ಗ ನೋಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಶತಮಾನಗಳಿಂದ ನೋಡದೇ ಇರುವುದನ್ನು ನಂಬುತ್ತಿದ್ದೇವೆ. ನಂಬುವ ಹಾಗೆ ಶಾಸ್ತ್ರ, ಪುರಾಣಗಳನ್ನು ಕಟ್ಟಲಾಗಿದೆ. ತಳ ಸಮುದಾಯಗಳು ಪ್ರಗತಿ ಆಗದಂತೆ ಧರ್ಮ ಸೂಕ್ಷ್ಮಗಳನ್ನು ಹೇಳಿಕೊಂಡು ಬರಲಾಗಿದೆ ಎಂದು ಅವರು ಹೇಳಿದರು.ಕರ್ಮ ಸಿದ್ಧಾಂತವನ್ನು ಹೊಡೆದು ಮನುಷ್ಯನಿಗೆ ಘನತೆ, ಸ್ವಾತಂತ್ರ್ಯತಂದು ಕೊಟ್ಟವರು ಬುದ್ಧ, ಡಾ.ಬಿ.ಆರ್. ಅಂಬೇಡ್ಕರ್. ಆ ಕಾರಣಕ್ಕಾಗಿಯೇ ವರ್ತಮಾನ ಕಾಲದಲ್ಲೂ ಒಗ್ಗುತ್ತಲೇ ಇದ್ದಾರೆ ಎಂದು ಅವರು ಹೇಳಿದರು.ಪ್ರಯಾಗ್‌ ರಾಜ್ ಕುಂಭಮೇಳದಲ್ಲಿ 66 ಕೋಟಿ ಜನ ಸ್ನಾನ ಮಾಡಿದ್ದರಿಂದ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಆದಾಯ ಬಂತೆ ಹೊರತು ಜನರಿಗೆ ಏನು ಸಿಕ್ಕಿತು? ಆದರೆ, ಕುಂಭಮೇಳಕ್ಕೆ ಹೋಗಿ ಸತ್ತವರು, ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಸಿಗುವುದಿಲ್ಲ. ಇದು ಈ ದೇಶದ ಪರಿಸ್ಥಿತಿ ಎಂದರು.ಬುದ್ಧ ಮಾರ್ಗದಾತ ಮೋಕ್ಷದಾತನಲ್ಲ. ಬುದ್ಧ ದೇವರಲ್ಲದೆ ಇರುವುದರಿಂದ ಪ್ರಶ್ನಾತೀತನಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಧಮ್ಮವು ಬೈಬಲ್, ಕುರಾನ್‌ ನಂತೆ ದೇವವಾಕ್ಯವಲ್ಲ. ಅಂಬೇಡ್ಕರ್ ಜಗತ್ತಿನ ಎಲ್ಲ ಜ್ಞಾನ ಧಾರೆಗಳನ್ನು ಅಧ್ಯಯನ ಮಾಡಿ ಹೃದಯಕ್ಕೆ ಹತ್ತಿರವಾಗುವ ಧರ್ಮ ಬೌದ್ಧ ಧರ್ಮ ಎಂದಿದ್ದಾರೆ. ಅದನ್ನು ನಾವು ಪಾಲಿಸಬೇಕು ಎಂದು ಹೇಳಿದರು.ನಿವೃತ್ತ ಐಪಿಎಸ್ ಅಧಿಕಾರಿ ಮರಿಸ್ವಾಮಿ ಮಾತನಾಡಿ, ಜಗತ್ತು ವಿಜ್ಞಾನದ ಜ್ಞಾನದ ಕಡೆ ಹೆಚ್ಚು ಗಮನ ಕೊಡುತ್ತಿದ್ದರೆ, ನಾವಿಲ್ಲಿ ಮೌಢ್ಯತೆ ಕಡೆಗೆ ಹೋಗುತ್ತಿದ್ದೇವೆ ಎಂದರು.ಮಾಜಿ ಮೇಯರ್‌ ಪುರುಷೋತ್ತಮ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಕಲಬುರಗಿ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ.ಎಚ್.ಟಿ. ಪೋತೆ, ಟಿ. ನರಸೀಪುರದ ನಳಂದ ಬುದ್ಧ ವಿಹಾರದ ಬಂತೇ ಬೋಧಿರತ್ನ ಇದ್ದರು. ಲೇಖಕ ಸಿ. ಹರಕುಮಾರ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ