ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಾನಸ ಗಂಗೋತ್ರಿಯ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಮಾನಸಗಂಗೋತ್ರಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನಿಗೂ ನಾಗರೀಕತೆ ಇರಬೇಕು. ಸಮಾಜವನ್ನು ಹೇಗೆ ಬದಲಾವಣೆ ಮಾಡಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಅಧಿಕಾರ ಇರಬೇಕು. ಅಧಿಕಾರ ಬರಬೇಕಾದರೆ ಶಿಕ್ಷಣ ಇರಬೇಕು ಎಂದು ಹೇಳಿದರು.
ತಾಯಿ ತನ್ನ ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡಲು ಜೀವನವನ್ನೇ ತ್ಯಾಗ ಮಾಡುತ್ತಾಳೆ. ಆ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಹೀಗಾಗಿ, ಮನುಷ್ಯನ ಜೀವನದ ಉದ್ದೇಶಗಳು ಚೆನ್ನಾಗಿರಬೇಕಾದರೆ ಹಾಗೂ ಸಮಾಜಕ್ಕೆ ಉಪಯೋಗ ಆಗುವಂತಿರಬೇಕಾದರೆ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕು ಎಂದರು.ಮೈಸೂರು ವಿವಿಯಿಂದ ಪ್ರತಿವರ್ಷ ಬರುತ್ತಿರುವ 20 ಲಕ್ಷ ರೂ. ಅನುದಾನವನ್ನು ಇನ್ನೂ ಒಂದು ವರ್ಷ ಮುಂದುವರೆಸಲು ಕುಲಪತಿಗಳೊಂದಿಗೆ ಮಾತನಾಡುತ್ತೇನೆ. ಮುಂದಿನ ವರ್ಷದಿಂದ ನನ್ನ ಅನುದಾನದಲ್ಲಿ ಸಂಸ್ಥೆಗೆ ಸಹಾಯ ಮಾಡುತ್ತೇನೆ. ಸಿಎಸ್ಆರ್ ಫಂಡ್ ಕೇಳಲು ಹೋದಾಗ ನನ್ನನ್ನು ಕರೆಯಿರಿ. ಹಣ ಮತ್ತು ರಕ್ತ ಒಂದೇ ಕಡೆ ನಿಲ್ಲಬಾರದು. ಅದು ನದಿಯಂತೆ ಹರಿಯುತ್ತಿರಬೇಕು ಎಂದು ಅವರು ತಿಳಿಸಿದರು.
ಮಾನಸಗಂಗೋತ್ರಿ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಪ್ರೊ.ಬಿ.ಕೆ. ಜಗದೀಶ್, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎ. ಚಿಂದೇಗೌಡ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಿ.ಆರ್. ಪದ್ಮ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಪಿ. ದಿವಾಕರ, ಉಪಾಧ್ಯಕ್ಷ ಹರೀಶ್ ಮೊಗಣ್ಣ, ಕಾರ್ಯದರ್ಶಿ ಎಂ. ರಮೇಶ್, ಬಸವಯ್ಯ, ಸಾಗರ್ ಮೊದಲಾದವರು ಇದ್ದರು.