ಮನಸೂರೆಗೊಂಡ ಬಯಲು ಬಯಲಾಯಿತ್ತು ನಾಟಕ ಪ್ರದರ್ಶನ

KannadaprabhaNewsNetwork |  
Published : Oct 19, 2026, 03:00 AM IST
18ಬಿಎಸ್ವಿ01- ಬಸವನಬಾಗೇವಾಡಿಯ ಯಲ್ಲಾಲಿಂಗ ಮಠದ ಆವರಣದಲ್ಲಿ ಶನಿವಾರ ಸಂಜೆ ಪ್ರದರ್ಶನಗೊಂಡ ಬಯಲು ಬಯಲಾಯಿತ್ತು ನಾಟಕದ ಕೊನೆಯ ದೃಶ್ಯ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಮಸಬಿನಾಳ ರಸ್ತೆಯ ಯಲ್ಲಾಲಿಂಗ ಮಠದ ಆವರಣದಲ್ಲಿ ಶನಿವಾರ ಸಂಜೆ ಬನಹಟ್ಟಿಯ ವಾತ್ಸಲ್ಯ ವಿಚಾರ ವೇದಿಕೆಯಿಂದ ಪ್ರದರ್ಶನಗೊಂಡ ಸಿದ್ದೇಶ್ವರ ಸ್ವಾಮೀಜಿಯವರ ಜೀವನಾಧಾರಿತ ನಾಟಕ ಬಯಲು ಬಯಲಾಯಿತ್ತು ನಾಟಕ ಪ್ರೇಕ್ಷಕರ ಮನಸೂರೆಗೊಳಸಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಮಸಬಿನಾಳ ರಸ್ತೆಯ ಯಲ್ಲಾಲಿಂಗ ಮಠದ ಆವರಣದಲ್ಲಿ ಶನಿವಾರ ಸಂಜೆ ಬನಹಟ್ಟಿಯ ವಾತ್ಸಲ್ಯ ವಿಚಾರ ವೇದಿಕೆಯಿಂದ ಪ್ರದರ್ಶನಗೊಂಡ ಸಿದ್ದೇಶ್ವರ ಸ್ವಾಮೀಜಿಯವರ ಜೀವನಾಧಾರಿತ ನಾಟಕ ಬಯಲು ಬಯಲಾಯಿತ್ತು ನಾಟಕ ಪ್ರೇಕ್ಷಕರ ಮನಸೂರೆಗೊಳಸಿತು.

ನಾಡಿನ ಖ್ಯಾತ ಸಾಹಿತಿ ಬಿ.ಆರ್‌.ಪೊಲೀಸಪಾಟೀಲ ರಚಿಸಿರುವ ಬಯಲು ಬಯಲಾಯಿತ್ತು ನಾಟಕದಲ್ಲಿ ಶ್ರೀಗಳ ಬಾಲ್ಯ, ಆಧ್ಯಾತ್ಮಿಕ ಹಸಿವು, ಶಿಕ್ಷಣ, ಅವರ ಗುರು, ಮಾರ್ಗದರ್ಶಿ, ವೇದಾಂತ ಕೇಸರಿ ಶ್ರೀಮಲ್ಲಿಕಾರ್ಜುನ ಸ್ವಾಮೀಜಿಯವರ ಬದುಕಿನ ಪ್ರಮುಖ ಮಜಲುಗಳು, ವಚನ ಪಿತಾಮಹ ಫ.ಗು.ಹಳಕಟ್ಟಿ ಅವರೊಂದಿಗೆ ಸಂವಾದ, ಅವರ ಪಾರಮಾರ್ಥಿಕ ಸಿದ್ಧಿ, ಸಾಧನೆ, ಜೀವನಯೋಗ, ಪೂರ್ಣತ್ವ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿ ಶ್ರೀಸಾಮಾನ್ಯರಿಗೂ ಅರ್ಥವಾಗುವಂತೆ ಇರುವುದು ವಿಶೇಷ.ವಾತ್ಸಲ್ಯ ವಿಚಾರ ವೇದಿಕೆಯಿಂದ ಹವ್ಯಾಸಿ ಕಲಾವಿದರು ನಾಟಕವನ್ನು ಮನೋಜ್ಞವಾಗಿ ನಡೆಸಿಕೊಟ್ಟರು. ವೇದಾಂತಕೇಸರಿ ಶ್ರೀಮಲ್ಲಿಕಾರ್ಜನ ಸ್ವಾಮೀಜಿಯವರಾಗಿ ಸ್ವತಃ ನಾಟಕ ರಚನೆಕಾರ ಸಾಹಿತಿ ಬಿ.ಆರ್.ಪೊಲೀಸಪಾಟೀಲರ ಅಭಿನಯಿಸಿದ್ದರು. ಹವ್ಯಾಸಿ ಕಲಾವಿದರಾದ ಮೂಕೇಶ ತೇಲಿ, ಸಂತೋಷಿಮಾ ರಾಮದುರ್ಗ, ರವಿ ಹೊನಗೌಡ, ಸಂಗಮೇಶ ಬಗಲಿ, ಶ್ವೇತಾ ಕಲ್ಲೂರ, ಶ್ರೀದೇವಿ ಕಲಕಂಬ, ಚಿನ್ನಪ್ಪ ಕರಲಟ್ಟಿ, ಚಂದ್ರಶೇಖರ ಶೆಟ್ಟಿ, ನಜೀರ ಹುಣಶ್ಯಾಳ, ಮಹಾಂತೇಶ ಕಾಮಗೊಂಡ, ಶಶಿಕಾಂತ ಹುನ್ನೂರ ವಿವಿಧ ಹವ್ಯಾಸಿ ಕಲಾವಿದರ ಅಭಿನಯ ಜನರ ಗಮನ ಸೆಳೆಯತು.ನಾಟಕ ರಚಿಸಿದ ಸಾಹಿತಿ ಬಿ.ಆರ್‌.ಪೊಲೀಸಪಾಟೀಲ ಮಾತನಾಡಿ, ವೇದಿಕೆಯಿಂದ ಇದುವರೆಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಈ ವೇದಿಕೆಯಿಂದ ಶಿಕ್ಷಕ ವೃತ್ತಿ ಸೇರಿದಂತೆ ವಿವಿಧ ವೃತ್ತಿಯ 16 ಜನ ಹವ್ಯಾಸಿ ರಂಗಕಲಾವಿದರ ತಂಡ ಕಟ್ಟಿಕೊಂಡು ನಾನು ರಚಿಸಿರುವ ಬಯಲು ಬಯಲಾಯಿತ್ತು ನಾಟಕದ ಮೊದಲ ಪ್ರಯೋಗ ಕೊಲ್ಹಾರದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಆಗಿದೆ. ನಂತರ ಮುಳವಾಡದಲ್ಲಿ ಎರಡನೇ ಪ್ರಯೋಗವಾಗಿದೆ. ಮೂರನೇ ಪ್ರಯೋಗ ಬಸವ ಜನಿಸಿದ ಬಸವನಬಾಗೇವಾಡಿಯಲ್ಲಿ ನಡೆಯುತ್ತಿದೆ. ರಾಜ್ಯದ ವಿವಿಧೆಡೆಗಳಿಂದ ಹಾಗೂ ಹೊರರಾಜ್ಯದಿಂದಲೂ ನಾಟಕ ಪ್ರಯೋಗಕ್ಕಾಗಿ ಬೇಡಿಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮಯ ನೋಡಿಕೊಂಡು ಪ್ರಯೋಗ ಮಾಡಲಾಗುವುದು ಎಂದು ತಿಳಿಸಿದರು.

ನಾಟಕ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಕ್ಷೇತ್ರದ ಮೇರುಪರ್ವತವಾಗಿರುವ ಸಿದ್ದೇಶ್ವರ ಸ್ವಾಮೀಜಿಯವರ ಜೀವನಾಧಾರಿತ ನಾಟಕ ಮುಂದಿನ ಪೀಳಿಗೆಗೆ ಅವರ ಜೀವನ ಸಂದೇಶ, ಅವರ ತತ್ವ ಮುಟ್ಟಿಸುತ್ತದೆ. 2015ರ ನವೆಂಬರನಲ್ಲಿ ಒಂದು ತಿಂಗಳ ಕಾಲ ಸಿದ್ದೇಶ್ವರ ಸ್ವಾಮೀಜಿಯವರು ಬಸವ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ನೀಡಿರುವ ಪ್ರವಚನ ಇನ್ನೂ ಜನರ ಮನಸ್ಸಿನಲ್ಲಿದೆ. ಯಲ್ಲಾಲಿಂಗ ಮಠದ ಬಸವರಾಜ ಮಹಾರಾಜರು ತಮ್ಮ ಶ್ರೀಮಠಕ್ಕೆ ಸಿದ್ದೇಶ್ವರ ಸ್ವಾಮೀಜಿಯವರು ಭೇಟಿ ನೀಡಿದ್ದನ್ನು ಎಂದಿಗೂ ಮರೆತಿಲ್ಲ. ಅವರ ಸ್ಮರಣೆಗಾಗಿ ಇಂದು ವಾತ್ಸಲ್ಯ ವೇದಿಕೆಯಿಂದ ಈ ನಾಟಕ ಪ್ರದರ್ಶನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಬಹುಶಕ್ತಿಗಳ ಸಂಗಮವಾಗಿರುವ ಸಾಹಿತಿ ಬಿ.ಆರ್.ಪಾಟೀಲ ಅವರಿಂದ ರಚನೆಗೊಂಡಿರುವ ಬಯಲು ಬಯಲಾಯಿತ್ತು ನಾಟಕ ತುಂಬಾ ಮಾರ್ಮಿಕವಾಗಿದೆ. ಈ ನಾಟಕದ ಪ್ರಯೋಗಗಳು ಇದು ನಾಡಿನಲ್ಲಿ ಹೆಚ್ಚಾಗಬೇಕು ಎಂದರು.

ನಾಟಕ ನಿರ್ದೇಶನ ಮಾಡಿರುವ ಸಾಣೇಹಳ್ಳಿಯ ರಂಗಕರ್ಮಿ ವೈ.ಡಿ.ಬದಾಮಿ, ಅವರ ಪತ್ನಿ ರಂಗಕರ್ಮಿ ಮಂಜುಳಾ ಬದಾಮಿ, ಶಿವಾನಂದ ಈರಕಾರಮುತ್ಯಾ, ಯಲ್ಲಾಲಿಂಗ ಮಠದ ಬಸವರಾಜ ಮಹಾರಾಜರು, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಸಂಗಮೇಶ ಪೂಜಾರಿ, ಡಾ.ಯುವರಾಜ ಮಾದನಶೆಟ್ಟಿ, ಸಾವಿತ್ರಿ ಕಲ್ಯಾಣಶೆಟ್ಟಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೃದಯದ ಭಾಷೆಯೇ ನಿಜವಾದ ಸಾಹಿತ್ಯ: ಡಾ.ಶ್ರೀರಾಮ ಇಟ್ಟನ್ನವರ
ನಶಿಸಿಸುತ್ತಿರುವ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು: ಅನುಪಮಾ ಧಾರವಾಡ