ಕನ್ನಡಪ್ರಭ ವಾರ್ತೆ ಉಡುಪಿ
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮಮಂದಿರದಲ್ಲಿ ಶ್ರೀ ರಾಮ ದೇವರ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಎಲ್ಲರಿಗೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜನವರಿ 23ರಿಂದ ಮಾರ್ಚ್ 10ರ ವರೆಗೆ 48 ದಿನಗಳ ಕಾಲ ಅಯೋಧ್ಯೆಯಲ್ಲಿ ಮಂಡಲ ಉತ್ಸವ ನಡೆಯಲಿದ್ದು, ಕೊನೆಯ ಐದು ದಿನ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರಲ್ಲಿ ಭಕ್ತರು ಭಾಗವಹಿಸಬಹುದಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಗುರುವಾರ ಶ್ರೀಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ರಾಮ ದೇವರಿಗೆ ವಿಶೇಷ ಸೇವೆ ಸಮರ್ಪಣೆ ಇರುವುದಿಲ್ಲ. ಮಂಡಲ ಉತ್ಸವದಲ್ಲಿ ಕಲಶ ಸೇವೆ ಸಲ್ಲಿಸಬಹುದು. ಒಂದು ರಜತ ಕಲಶಕ್ಕೆ 1 ಲಕ್ಷ ರು. ನಿಗದಿ ಮಾಡಲಾಗಿದ್ದು, ಕಲಶಾಭಿಷೇಕದ ನಂತರ ಪ್ರಸಾದ ರೂಪದಲ್ಲಿ ಅದನ್ನು ಸೇವಾಕರ್ತರಿಗೆ ಮರಳಿಸಲಾಗುವುದು. ಕಲಶ ಸೇವಾ ಬಾಪ್ತಿನ ಹತ್ತು ಪಟ್ಟು ಹಣವನ್ನು ಅವರು ಸಮಾಜ ಸೇವೆಗೆ ವಿನಿಯೋಗಿಸಿದ್ದರೆ ಮಾತ್ರ ಈ ಕಲಶ ಸೇವೆಗೆ ಅರ್ಹರಾಗಿರುತ್ತಾರೆ. ಇದರ ನೋಂದಣಿಗಾಗಿ ವಿಶೇಷ ಆ್ಯಪ್ ರೂಪಿಸಲಾಗಿದೆ ಎಂದರು.2023- 24ನೇ ಹಣಕಾಸು ವರ್ಷದಲ್ಲಿ ಮನೆ ನಿರ್ಮಾಣ, ರೋಗಿಗಳಿಗೆ, ಶಿಕ್ಷಣಕ್ಕೆ, ಗೋಸೇವೆಗ ಇತ್ಯಾದಿಗಳಿಗೆ 10 ಲಕ್ಷ ರು. ಮಿಕ್ಕಿ ವಿನಿಯೋಗಿಸಿದವರು ತಮ್ಮ ಸೇವೆಯ ವಿವರಗಳನ್ನು ಗೆಜೆಟೆಡ್ ಆಫೀಸರ್ ಮೂಲಕ ದೃಢಪಡಿಸಿಕೊಂಡು ಅಯೋಧ್ಯ ಮಂಡಲ ಉತ್ಸವ ಡಾಟ್ ಕಾಮ್‌ನಲ್ಲಿ ಹೆಸರು ನೋಂದಣಿ ಮಾಡಬೇಕು. ಡಿ.1ರಂದು ಆ್ಯಪ್ ಚಾಲನೆಗೊಳ್ಳಲಿದೆ ಎಂದರು.
ರಜತ ಕಲಶ ಸೇವೆಗೆ ನೋಂದಣಿ ಮಾಡಿಕೊಂಡವರು 48 ದಿವಸದಲ್ಲಿ ತಮಗೆ ಅನುಕೂಲವಾದ ದಿನವನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಂಡವರಿಗೆ ರಾಮಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಧಾರ್ಮಿಕ ಸಮಿತಿಯಿಂದ ಸರ್ಟಿಫಿಕೇಟ್ ನೀಡಲಾಗುವುದು. ಇದರ ಆಧಾರದಲ್ಲಿ ಪಾಸ್‌ಗಳನ್ನು ವಿತರಿಸಲಾಗುವುದು ಎಂದರು.ಶ್ರೀ ರಾಮ ಪ್ರತಿಷ್ಠೆಯಂದು ಜನರು ತಂತಮ್ಮ ಊರ ದೇವಾಲಯಗಳಲ್ಲಿ ಭಜನೆ, ಪೂಜೆ, ಕನಿಷ್ಠ 5 ದೀಪಗಳನ್ನು ಬೆಳಗಿಸುವ ಮೂಲಕ ದೀಪೋತ್ಸವ ನಡೆಸಬಹುದು ಎಂದು ಶ್ರೀಗಳು ತಿಳಿಸಿದರು.