ಮಕ್ಕಳಿಗೆ ಆಸ್ತಿ ದಾನಪತ್ರ ನೀಡುವಾಗ ಷರತ್ತು ಕಡ್ಡಾಯವಾಗಿ ನಮೂದಿಸಿ

KannadaprabhaNewsNetwork |  
Published : Oct 02, 2026, 02:15 AM IST
ಸಿರುಗುಪ್ಪ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಸಿವಿಲ್ ನ್ಯಾಯಾಧೀಶ ಎಚ್‌.ಆರ್. ಅಶೋಕ್ ಮಾತನಾಡಿದರು. | Kannada Prabha

ಸಾರಾಂಶ

ಅರ್ಜಿ ವಿಚಾರಣೆ ನಡೆಸುವ ಉಪವಿಭಾಗಾಧಿಕಾರಿಗಳು ದಾನಪತ್ರವನ್ನು ತಕ್ಷಣವೇ ರದ್ದುಗೊಳಿಸುವ ಸಂಪೂರ್ಣ ಅಧಿಕಾರ ಹೊಂದಿದ್ದಾರೆ.

ಸಿರುಗುಪ್ಪ: ತಂದೆ-ತಾಯಿ ತಮ್ಮ ಆಸ್ತಿ ಮಕ್ಕಳಿಗೆ ದಾನಪತ್ರ ಮೂಲಕ ನೀಡುವಾಗ ನನ್ನ ಮಗ ಅಥವಾ ಮಗಳು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಆಶಾವಾದ ಮತ್ತು ನಂಬಿಕೆಯ ಷರತ್ತನ್ನು ಕಡ್ಡಾಯವಾಗಿ ನಮೂದಿಸಬೇಕು. ಒಂದು ವೇಳೆ ಆಸ್ತಿ ಪಡೆದ ನಂತರ ಮಕ್ಕಳು ಪೋಷಕರನ್ನು ಕಡೆಗಣಿಸಿದರೆ, ಹಿರಿಯ ನಾಗರಿಕರು ಯಾವುದೇ ದೀರ್ಘಾವಧಿ ಸಿವಿಲ್ ನ್ಯಾಯಾಲಯಕ್ಕೆ ಹೋಗದೆ ನೇರವಾಗಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸಿವಿಲ್ ನ್ಯಾಯಾಧೀಶ ಆರ್.ಎಚ್. ಅಶೋಕ್ ತಿಳಿಸಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕಾಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರ್ಜಿ ವಿಚಾರಣೆ ನಡೆಸುವ ಉಪವಿಭಾಗಾಧಿಕಾರಿಗಳು ದಾನಪತ್ರವನ್ನು ತಕ್ಷಣವೇ ರದ್ದುಗೊಳಿಸುವ ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ಈ ಕಾಯ್ದೆಯು ಸಂಪೂರ್ಣವಾಗಿ ಹಿರಿಯ ನಾಗರಿಕರು ಮತ್ತು ಪೋಷಕರ ರಕ್ಷಣೆಗಾಗಿ ರೂಪಿಸಲಾಗಿದೆ ಎಂದು ವಿವರಿಸಿದರು.

ಇಂದಿನ ಸಮಾಜದಲ್ಲಿ ನೈತಿಕ ಮೌಲ್ಯ ಕ್ಷೀಣಿಸುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಮಾಜದಲ್ಲಿ ಇಂದು ಪ್ರೀತಿ-ವಾತ್ಸಲ್ಯಕ್ಕಿಂತ ಆಸ್ತಿ ಮತ್ತು ಹಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಕೆಲವರು ಸಾಕುಪ್ರಾಣಿಗಳಿಗೆ ತೋರುವ ಪ್ರೀತಿ ಹೆತ್ತ ತಂದೆ-ತಾಯಂದಿರಿಗೆ ತೋರದೆ ಅವರನ್ನು ವೃದ್ಧಾಶ್ರಮಗಳಿಗೆ ತಳ್ಳುತ್ತಿದ್ದಾರೆ ಎಂದರು.

ನಮ್ಮ ಸಿರುಗುಪ್ಪ ನ್ಯಾಯಾಲಯದಲ್ಲೇ ತಾಯಿಯ ಪೋಷಣೆಯ ಜವಾಬ್ದಾರಿ ಹೊರಲು ಮಕ್ಕಳು ನಿರಾಕರಿಸಿ ಕೊನೆಗೆ ತಾಯಿಯನ್ನೇ ಪಾಲು ಮಾಡಿಕೊಂಡ ವಿಚಿತ್ರ ಹಾಗೂ ನೋವಿನ ಪ್ರಕರಣ ನಡೆದಿವೆ. ಅದೇ ರೀತಿ 75 ವರ್ಷ ದಾಟಿದ ವೃದ್ಧ ಪೋಷಕರು ತಮ್ಮ ಜೀವನಾಂಶಕ್ಕಾಗಿ ಮಕ್ಕಳ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅತ್ಯಗತ್ಯ. ತಮ್ಮ ಹಕ್ಕುಗಳಿಗೆ ಧಕ್ಕೆ ಅಥವಾ ಉಲ್ಲಂಘನೆಯಾದಾಗ ಎಲ್ಲಿಗೆ ಹೋಗಿ ನ್ಯಾಯ ಪಡೆಯಬೇಕು ಎಂಬುದರ ಅರಿವಿರಬೇಕು. ನ್ಯಾಯಾಲಯ, ಕಾನೂನು ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಹಿರಿಯ ನಾಗರಿಕರ ಕಲ್ಯಾಣ ಮತ್ತು ರಕ್ಷಣೆಗೆ ಸದಾ ಬದ್ಧವಾಗಿವೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯಗಳಲ್ಲಿ ಶೀಘ್ರವಾಗಿ ವಿಲೇವಾರಿ ಮಾಡಲು ವಿಶೇಷ ನಿರ್ದೇಶನಗಳಿವೆ ಎಂದರು.

ತಹಸೀಲ್ದಾರ್ ಗೌಸಿಯ ಬೇಗಂ, ವಕೀಲರ ಸಂಘದ ತಾಲೂಕಾಧ್ಯಕ್ಷ ಉಪ್ಪಾರ ವೆಂಕೋಬ, ತಾಪಂ ಇಒ ಪವನ್ ಕುಮಾರ್, ಸಿಡಿಪಿಒ ಪ್ರದೀಪ್ ಮಾತನಾಡಿದರು. ನಿವೃತ್ತ ಶಿಕ್ಷಕ ಸಂಪನ್ಮೂಲ ವ್ಯಕ್ತಿ ನರಸಿಂಹಮೂರ್ತಿ ನ್ಯಾಯ ನಿಮ್ಮದು ನೆರವು ನಮ್ಮದು ಕುರಿತು ವಿಶೇಷ ಉಪನ್ಯಾಸ ನೀಡಿದರು.

ನಿವೃತ್ತ ನೌಕರರ ಸಂಘದ ಹಿರಿಯ ಪ್ರಧಾನ ಕಾರ್ಯದರ್ಶಿ ನೀಲಕಂಠಯ್ಯ ಸ್ವಾಮಿ ಮಾತನಾಡಿ, ತಮಗೆ ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ ಕಾನೂನು ಅರಿವು ಪುಸ್ತಕ ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದರು.

ಸರ್ಕಾರಿ ಸಹಾಯಕ ಅಭಿಯೋಜಕ ಶಿವರಾಜ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಶರೀಫ್ ಸಾಬ್ ಹಾಗೂ ವಕೀಲರು, ಹಿರಿಯ ನಾಗರಿಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿ: ವೇದಮೂರ್ತಿ ಬಿ.ಎಸ್.
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ