ರಾಣಿ ಚೆನ್ನಮ್ಮ ಜಯಂತಿ ಆಚರಿಸದ ತಹಸೀಲ್ದಾರರಿಗೆ ಕಡ್ಡಾಯ ರಜೆ!

KannadaprabhaNewsNetwork |  
Published : Oct 25, 2025, 01:00 AM IST
ಪೊಟೋ-ಪಟ್ಟಣದ ತಹಸೀಲ್ದಾರ ಅವರು ರಾಣಿ ಚನ್ನಮ್ಮನ ಜಯಂತಿ ಆಚರಣೆ ಮಾಡದ ತಹಸೀಳ್ದಾರ ವಿರುದ್ದ ಕ್ರಮ ಕೈಗೊಳ್ಳುವಂತೆ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಆಗಮಿಸಿ ಧನಂಜಯ ಅವರನ್ನು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಆದೇಶ ನೀಡಿ ಮಾತನಾಡಿದರು.  | Kannada Prabha

ಸಾರಾಂಶ

ಶುಕ್ರವಾರ ಬೆಳಗ್ಗೆ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಅವರು, ತಹಸೀಲ್ದಾರ್ ನಿರ್ಲಕ್ಷ್ಯ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಮತ್ತು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದರು.

ಲಕ್ಷ್ಮೇಶ್ವರ: ವೀರರಾಣಿ ಕಿತ್ತೂರು ಚೆನ್ನಮ್ಮನ ಜಯಂತ್ಯುತ್ಸವ ಆಚರಿಸದ ತಹಸೀಲ್ದಾರ ಧನಂಜಯ ಎಂ. ಅವರಿಗೆ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಆದೇಶಿಸಿದ್ದು, ಹೀಗಾಗಿ ತಹಸೀಲ್ದಾರ್‌ ನಡೆ ಖಂಡಿಸಿ ತಾಲೂಕು ಪಂಚಮಸಾಲಿ ಸಮಾಜದವರು ನಡೆಸುತ್ತಿದ್ದ ಪ್ರತಿಭಟನೆ ಶುಕ್ರವಾರ ಅಂತ್ಯಗೊಂಡಿದೆ.

ತಹಸೀಲ್ದಾರ ಧನಂಜಯ ಎಂ. ಅವರು ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಿಸದೇ ನಿರ್ಲಕ್ಷಿಸಿ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಗುರುವಾರ ಲಕ್ಷ್ಮೇಶ್ವರ ತಹಸೀಲ್ದಾರ ಕಚೇರಿಯ ಮುಂದೆ ಪಂಚಮಸಾಲಿ ಸಮಾಜದವರು, ವಿವಿಧ ಸಂಘಟನೆಯವರು ಅಹೋರಾತ್ರಿ ಧರಣಿ ಆರಂಭಿಸಿದ್ದರು.

ಗುರುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಆರ್.ಕೆ. ಅವರು, ತಹಸೀಲ್ದಾರರಿಗೆ ನೊಟೀಸ್ ನೀಡಲಾಗುವುದು ಎಂದು ಪ್ರತಿಭಟನಾನಿರತರನ್ನು ಸಮಾಧಾನಪಡಿಸಲು ಯತ್ನಿಸಿದ್ದರು. ಘಟನೆಗೆ ಸಂಬಂಧಿಸಿ ತಹಸೀಲ್ದಾರರಿಗೆ ವರ್ಗಾವಣೆ, ಕೆಳಹಂತಹ ಓರ್ವ ಸಿಬ್ಬಂದಿಗೆ ಅಮಾನತು, ಇಬ್ಬರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅಮಾನತ್ತಿನ ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಮಳೆಯ ನಡುವೆಯೂ ಭಜನೆ ಮಾಡುತ್ತಾ ಅಹೋರಾತ್ರಿ ಧರಣಿ ನಡೆಸಿದ್ದರು.

ಶುಕ್ರವಾರ ಬೆಳಗ್ಗೆ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಅವರು, ತಹಸೀಲ್ದಾರ್ ನಿರ್ಲಕ್ಷ್ಯ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಮತ್ತು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದರು.

ಅಲ್ಲದೇ ಶಿರಹಟ್ಟಿ ತಹಸೀಲ್ದಾರರಿಗೆ ಹೆಚ್ಚುವರಿ ಪ್ರಭಾರ ವಹಿಸಲಾಗುವುದು. ತಹಸೀಲ್ದಾರರಿಂದಾದ ನಿರ್ಲಕ್ಷ್ಯಕ್ಕೆ ನಾನು ಕ್ಷಮೆ ಕೇಳುವೆ. ಧರಣಿ ನಿಲ್ಲಿಸಿ. ಸಮಾಜದವರು ತಾಲೂಕು ಮಟ್ಟದ ಚೆನ್ನಮ್ಮ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸಿದರೆ ತಪ್ಪದೇ ನಾನೂ ಪಾಲ್ಗೊಳ್ಳುವೆ ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿಗಳು ಕ್ಷಮೆ ಕೇಳಿದ್ದರಿಂದ ಮತ್ತು ತಹಸೀಲ್ದಾರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರಿಂದ ಸಮಾಧಾನಗೊಂಡ ಪ್ರತಿಭಟನಾಕಾರರು ಹೋರಾಟದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡರು.

ಈ ವೇಳೆ ಮಾತನಾಡಿದ ಮುಖಂಡ ಮಂಜುನಾಥ ಮಾಗಡಿ, ಇನ್ನು ಮುಂದೆ ಯಾವುದೇ ಮಹಾನ್ ನಾಯಕರ ಜಯಂತಿ ಆಚರಣೆ ವೇಳೆಯೂ ಈ ರೀತಿ ಆಗದಂತೆ ತಹಸೀಲ್ದಾರ, ತಾಲೂಕು ಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಈ ತಹಸೀಲ್ದಾರರಿಗೆ ಗದಗ ಜಿಲ್ಲೆಯಲ್ಲಿ ಸೇವೆಗೆ ಅವಕಾಶ ಕೊಡಬಾರದು ಎಂದರು. ಚನ್ನಪ್ಪ ಜಗಲಿ ಮಾತನಾಡಿ, ತಹಸೀಲ್ದಾರರ ನಿರ್ಲಕ್ಷ್ಯಕ್ಕೆ ಅವರ ಬದಲಾಗಿ ಕೆಳ ಹಂತದ ಅಧಿಕಾರಿಗಳ ಮೇಲೆ ಮಾಡಿದ ಶಿಸ್ತುಕ್ರಮದ ಆದೇಶವು ಗುಬ್ಬಿ ಮೇಲೆ ಮಾಡಿದ ಬ್ರಹ್ಮಾಸ್ತ್ರವಾಗುತ್ತದೆ. ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ಮಾಡಿದ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದರು. ಈ ವೇಳೆ ಅನ್ನಪೂರ್ಣ ಮಹಾಂತಶೆಟ್ಟರ, ಶಾರದಾ ಮಹಾಂತಶೆಟ್ಟರ, ದೇವೇಂದ್ರಪ್ಪ ಮರಳಿಹಳ್ಳಿ, ವಿರುಪಾಕ್ಷಪ್ಪ ಅಣ್ಣಿಗೇರಿ, ಶಿವಯ್ಯ ಮಠಪತಿ, ಶರಣು ಗೋಡಿ, ಬಸವರಾಜ ಹೊಗೆಸೊಪ್ಪಿನ, ಮಂಜು ಮುಳಗುಂದ, ಹೊನ್ನಪ್ಪ ವಡ್ಡರ, ಮಂಜುನಾಥ ಗೌರಿ, ಫಕ್ಕಿರೇಶ ಕವಲೂರ, ಪ್ರವೀಣ ಬಾಳಿಕಾಯಿ, ಶಿವನಗೌಡ ಅಡರಕಟ್ಟಿ, ಗುರಪ್ಪ ಮುಳಗುಂದ, ಶಿವಜೋಗೆಪ್ಪ ಚಂದರಗಿ, ಬಸವಣ್ಣೆಪ್ಪ ನಂದೆಣ್ಣವರ, ಎಂ.ಡಿ. ಪಾಟೀಲ, ಮಲ್ಲಿಕಾರ್ಜುನ ನೀರಾಲೂಟಿ, ಪ್ರಕಾಶ ಕಮಡೊಳ್ಳಿ, ಶಂಕರ ಬ್ಯಾಡಗಿ, ಶಿವು ಕಟಗಿ, ಚಂದ್ರು ಮಾಗಡಿ, ಅನ್ನಪೂರ್ಣ ಮೇಟಿ, ಅರುಣಾ ಕಣವಿ ಸೇರಿ ಪಂಚಮಸಾಲಿ ಸಮಾಜದವರು, ಕರ್ನಾಟಕ ರಕ್ಷಣಾ ವೇದಿಕೆ, ಕರವೇ ಸ್ವಾಭಿಮಾನಿ ಸೇನೆ, ಶ್ರೀರಾಮಸೇನೆ, ಸಂಗೊಳ್ಳಿ ರಾಯಣ್ಣ ವೇದಿಕೆ ಸೇರಿ ವಿವಿಧ ಸಂಘಟನೆಯವರು, ಮಹಿಳೆಯರೂ ಸಾಥ್ ನೀಡಿದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ