ಪ್ಲೆಕ್ಸ್ ಅಳವಡಿಸಲು ಅನುಮತಿ ಕಡ್ಡಾಯಗೊಳಿಸಿ

KannadaprabhaNewsNetwork | Published : Dec 10, 2024 12:33 AM

ಸಾರಾಂಶ

ಪಟ್ಟಣದಲ್ಲಿ ಪ್ಲೆಕ್ಸ್ ಹಾವಳಿ ಹೆಚ್ಚುತ್ತಿದೆ. ಪ್ಲೆಕ್ಸ್ ಅಳವಡಿಸಲು ಅನುಮತಿ ಕಡ್ಡಾಯಗೊಳಿಸಿ, ಸಮಯ ನಿಗದಿ ಮಾಡಿ ದಿನಕ್ಕೆ ಇಷ್ಟು ಅಂತ ಕಂದಾಯ ಪಡೆದರೆ ಪಂಚಾಯಿತಿಗೆ ಆದಾಯ ಹೆಚ್ಚುತ್ತದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ವಹಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯ ನಬಿಲ್ ಅನ್ಸಾರ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಪಟ್ಟಣದಲ್ಲಿ ಪ್ಲೆಕ್ಸ್ ಹಾವಳಿ ಹೆಚ್ಚುತ್ತಿದೆ. ಪ್ಲೆಕ್ಸ್ ಅಳವಡಿಸಲು ಅನುಮತಿ ಕಡ್ಡಾಯಗೊಳಿಸಿ, ಸಮಯ ನಿಗದಿ ಮಾಡಿ ದಿನಕ್ಕೆ ಇಷ್ಟು ಅಂತ ಕಂದಾಯ ಪಡೆದರೆ ಪಂಚಾಯಿತಿಗೆ ಆದಾಯ ಹೆಚ್ಚುತ್ತದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ವಹಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯ ನಬಿಲ್ ಅನ್ಸಾರ್ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗದಲ್ಲಿ ಸೋಮವಾರ ನಡೆದ ವಾರ್ಷಿಕ ಬಜೆಟ್ ಮಂಡನೆ ಕುರಿತು ಮೊದಲ ಸುತ್ತಿನ ಸಾರ್ವಜನಿಕರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಪಟ್ಟಣದಲ್ಲಿ ಪ್ಲೆಕ್ಸ್ ಗಳು ಅಳವಡಿಸಲು ಅನುಮತಿ ಕಡ್ಡಾಯಗೊಳಿಸಿ ಪ್ರತಿ ಪ್ಲೆಕ್ಸ್ ಗೆ ಕಂದಾಯ ನಿಗದಿಗೊಳಿಸಬೇಕು. ಇದರಿಂದ ಪಂಚಾಯಿತಿಗೆ ಆದಾಯ ಹೆಚ್ಚುತ್ತದೆ ಎಂದ ಅವರು, ಕಳೆದ ತಿಂಗಳಲ್ಲಿ ನಾಯಕನ ಹಟ್ಟಿ ಪಂಚಾಯಿತಿಯಲ್ಲಿ ಅನುಮತಿ ಪಡೆದಿಲ್ಲ ಎನ್ನುವ ಕಾರಣದಿಂದ ಅಲ್ಲಿ ಕಟ್ಟಲಾಗಿದ್ದ ಎಲ್ಲಾ ಪ್ಲೆಕ್ಸ್ ಗಳನ್ನು ಪಂಚಾಯಿತಿ ಅಧಿಕಾರಿಗಳೇ ತೆರವು ಗೊಳಿಸುವಂತಹ ದಿಟ್ಟ ನಿರ್ಧಾರ ಮಾಡಿದರು ಎಂದು ತಿಳಿಸಿದರು.

ಆ ಪ್ರಕಾರವಾಗಿ ನೀವುಗಳು ಎಂತಹ ಪ್ರಭಾವಿಗಳೇ ಆದರೂ ಪಟ್ಟಣ ವ್ಯಾಪ್ತಿಯಲ್ಲಿ ಅಳವಡಿಸುವ ಪ್ಲೆಕ್ಸ್ ಗಳಿಗೆ ದರ ನಿಗದಿ ಗೊಳಿಸಿ, ವಸೂಲಿ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಪಾಲಯ್ಯ ಮುಂದಿನ ದಿನಗಳಲ್ಲಿ ಪ್ಲೆಕ್ಸ್ ಅಳವಡಿಸುವುದಕ್ಕೆ ದರ ನಿಗದಿಗೊಳಿಸಿ ವಸೂಲಿಗೆ ಮುಂದಾಗುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಸಿಂದಿ ಕ್ಯಾಮರಾಗಳು ಇಲ್ಲದಾಗಿವೆ. ಕೂಡಲೇ ಕ್ರಮ ವಹಿಸುವಂತೆ ಕೆಲ ಸದಸ್ಯರು ಒತ್ತಾಯಿಸಿದರು. ಎನ್.ಎಂ.ಎಸ್ ಬಡಾವಣೆಯಲ್ಲಿ ಸೂಕ್ತ ಚರಂಡಿ ಮತ್ತು ಶೌಚಾಲಯ ಇಲ್ಲದಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿ, ಸೌಲಭ್ಯಕ್ಕೆ ಅಲ್ಲಿನ ಸಮುದಾಯ ಭವನ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ನಾಮ ನಿರ್ದೇಶಿತ ಸದಸ್ಯ ಎಂ.ಸಿ. ದೇವದಾಸ್ ಹಾಗೂ ಮುಖಂಡ ಅರ್ಜುನ್ ಒತ್ತಾಯಿಸಿದರು.

ಬಸ್ ನಿಲ್ದಾಣದ ಸಮೀಪದಲ್ಲಿ ಸೂಕ್ತ ಚರಂಡಿ ಇಲ್ಲದಾಗಿದೆ. ಹಾಗು ಶೌಚಾಲಯ ಸೂಕ್ತ ಸ್ವಚ್ಚತೆ ಇಲ್ಲದಾಗಿದೆ. ಕೊಚ್ಚೆ ನೀರು ಹರಿದು ಹೋಗುವಂತೆ ಲಿಂಕ್ ಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಕೆಲವರು ತಿಳಿಸಿದಾಗ ಬರುವ ಬಜೆಟ್ ನಲ್ಲಿ ಈ ಕಾಮಗಾರಿ ನಿರ್ವಹಣೆ ಬಗ್ಗೆ ಕ್ರಮ ವಹಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.

ದವಲಪ್ಪನ ಕುಂಟೆಯಲ್ಲಿ ಜಾಲಿ ಗಿಡಗಳು ಬೆಳೆದಿವೆ. ಜಾಲಿ ಗಿಡ ತೆರವು ಗೊಳಿಸುವ ಮೂಲಕ ರುದ್ರಭೂಮಿಯಲ್ಲಿ ವಿದ್ಯುತ್ ಲೈಟ್ ಗಳನ್ನು ಅಳವಡಿಸಬೇಕೆಂದು ಸದಸ್ಯೆ ಶುಭ ಪೃಥ್ವಿರಾಜ್ ಹೇಳಿದರು.

ಬೀದಿ ಬದಿ ವ್ಯಾಪಾರಸ್ಥರಿಗೆ ನೆರವು ನೀಡಿ:

ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ನಮಗೆ ಈಗ ಹಳೆ ಸಂತೆ ಮೈದಾನದ ಜಾಗದಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಅಲ್ಲಿಗೆ ವ್ಯಾಪಾರಸ್ಥರು ಬರುವುದು ವಿರಳವಾಗಿದೆ. ಸ್ಥಳದಲ್ಲಿ ಶೌಚಾಲಯ ಹಾಗು ನೀರಿನ ಸಮಸ್ಯೆ ಎದುರಾಗಿದೆ. ಹಾಗು ಚರಂಡಿ ನೀರು ಸರಾಗವಾಗಿ ಹರಿಯದೆ ತೊಂದರೆಯಾಗುತ್ತಿದೆ. ನಮಗೆ ಬದಲಿ ಜಾಗ ತೋರಿಸುವಂತೆ ಬೀದಿ ಬದಿ ವ್ಯಾಪಾರಸ್ಥರು ಸಭೆಯಲ್ಲಿ ಒತ್ತಾಯಿಸಿದಾಗ, ಬದಲಿ ಜಾಗದ ಕೊರತೆ ಇದ್ದು ಈಗಿರುವ ಸ್ಥಳದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡುವುದಾಗಿ ಮುಖ್ಯಾಧಿಕಾರಿ ಪಾಲಯ್ಯ ತಿಳಿಸಿದರು.

ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷ ತಿಪ್ಪೇಸ್ವಾಮಿ ಹಾಗೂ ಸದಸ್ಯರು ಇದ್ದರು.

Share this article