ಆಗಸ್ಟ್ ೩೦ರಂದು ಮಂಡ್ಯ ಜಿಲ್ಲಾ ಮಟ್ಟದ ವಿಜ್ಞಾನೋತ್ಸವ

KannadaprabhaNewsNetwork | Published : Jul 17, 2024 12:50 AM

ಸಾರಾಂಶ

ಮಂಡ್ಯ ಜಿಲ್ಲಾ ಮಟ್ಟದ ವಿಜ್ಞಾನ ಶಿಕ್ಷಕರ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, ಇದಕ್ಕಾಗಿ ಶಿಕ್ಷಕರಿಗೆ ವಿನೂತನ ಸ್ಪರ್ಧೆ ಆಯೋಜಿಸಲಾಗಿದೆ. ಹ್ಯಾಕಥಾನ್ ಸ್ಪರ್ಧೆಯಲ್ಲಿ ವಿಜ್ಞಾನ ಶಿಕ್ಷಕರು ಸೇರಿ ಕನಿಷ್ಠ ೫ ರಿಂದ ೧೦ ಮಕ್ಕಳು ಭಾಗವಹಿಸಬಹುದು. ೪ ಗಂಟೆಗಳ ಅವಧಿಯಲ್ಲಿ ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಸಿ ಪ್ರದರ್ಶಿಸಬೇಕು. ಈ ವಿಭಾಗದಲ್ಲಿ ಐವರು ಶಿಕ್ಷಕರನ್ನು ಆಯ್ಕೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಸೇಷನ್ ಸಹಭಾಗಿತ್ವದಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಖಾಸಗಿ ಮತ್ತು ಸರ್ಕಾರಿ ವಿದ್ಯಾಸಂಸ್ಥೆಗಳ ಐದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನೋತ್ಸವ ಕಾರ್ಯಕ್ರಮವನ್ನು ಆಗಸ್ಟ್ ೩೦ರಂದು ನಗರದ ಎ ಅಂಡ್ ಎ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯು ಐದರಿಂದ ಹತ್ತನೇ ತರಗತಿ ವಯಸ್ಸಿನ ಮಕ್ಕಳಿಗೆ ಅಗತ್ಯವಿರುವ ವಿಜ್ಞಾನ ಮಾದರಿಯ ಪ್ರದರ್ಶನವನ್ನು ಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸುವರು. ಇಂಡಿಯನ್ ಸೈನ್ಸ್ ರೀಸರ್ಚ್ ಆರ್ಗನೈಸೇಷನ್ ಸಂಸ್ಥೆ ಸ್ಪೇಸ್ ಆನ್ ವ್ಹೀಲ್ ಪ್ರದರ್ಶಿಸಲಿದ್ದಾರೆ. ಇದರ ಜೊತೆಗೆ ವಿಜ್ಞಾನೋತ್ಸವದಲ್ಲಿ ಭಾಗಿಯಾಗುವ ೨೫೦ ರಿಂದ ೩೦೦ ಜನ ಮಕ್ಕಳಿಗೆ ಇಸ್ರೋ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಿದ್ದಾರೆ. ವೀಕ್ಷಣೆಗೆ ಹೋಗುವ ಮಕ್ಕಳ ಖರ್ಚು-ವೆಚ್ಚಗಳನ್ನು ಆಧ್ಯಾಪನಾ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಭರಿಸಲಿದೆ ಎಂದು ತಿಳಿಸಲಾಗಿದೆ.

ದೇಶದ ಹೆಸರಾಂತ ವಿಜ್ಞಾನ ಅನ್ವೇಷಣಾ ಸಂಸ್ಥೆಯ ಸಮಕ್ಷಮದಲ್ಲಿ ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯ ಪ್ರದರ್ಶನಕ್ಕೆ ಸುವರ್ಣಾವಕಾಶ ಕಲ್ಪಿಸಿಕೊಡಲಾಗಿದೆ. ಪ್ರತಿ ತರಗತಿಯಿಂದ ಇಬ್ಬರು ಮಕ್ಕಳು ಭಾಗವಹಿಸಬಹುದಾಗಿದ್ದು, ಸುಮಾರು ೨ ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

ಶಿಕ್ಷಕರಿಗೆ ವಿಶೇಷ ಸ್ಪರ್ಧೆ:

ಜಿಲ್ಲಾ ಮಟ್ಟದ ವಿಜ್ಞಾನ ಶಿಕ್ಷಕರ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, ಇದಕ್ಕಾಗಿ ಶಿಕ್ಷಕರಿಗೆ ವಿನೂತನ ಸ್ಪರ್ಧೆ ಆಯೋಜಿಸಲಾಗಿದೆ. ಹ್ಯಾಕಥಾನ್ ಸ್ಪರ್ಧೆಯಲ್ಲಿ ವಿಜ್ಞಾನ ಶಿಕ್ಷಕರು ಸೇರಿ ಕನಿಷ್ಠ ೫ ರಿಂದ ೧೦ ಮಕ್ಕಳು ಭಾಗವಹಿಸಬಹುದು. ೪ ಗಂಟೆಗಳ ಅವಧಿಯಲ್ಲಿ ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಸಿ ಪ್ರದರ್ಶಿಸಬೇಕು. ಈ ವಿಭಾಗದಲ್ಲಿ ಐವರು ಶಿಕ್ಷಕರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದ್ದು, ತಾಲೂಕು ಮಟ್ಟದಲ್ಲಿ ತರಗತಿಗೆ ತಲಾ ಮೂರು ಬಹುಮಾನ ನೀಡಲು ನಿರ್ಧರಿಸಲಾಗಿದೆ. ತಾಲೂಕು ಮಟ್ಟದಲ್ಲಿ ಆಯ್ಕೆಯಾದವರನ್ನು ಜಿಲ್ಲಾ ಮಟ್ಟಕ್ಕೆ ಪ್ರತಿ ತರಗತಿಯಿಂದ ಮೂರು ಮಾದರಿಗಳನ್ನು ಆಯ್ಕೆ ಮಾಡಲಾಗುವುದು. ಐದು ತರಗತಿಗಳಲ್ಲಿ ಬಹುಮಾನ ಪಡೆದುಕೊಂಡ ಶಾಲೆಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ. ಭಾಗವಹಿಸಿದ ಪ್ರತಿ ಮಕ್ಕಳಿಗೂ ಪ್ರಮಾಣಪತ್ರ ವಿತರಿಸಲಾಗುವುದು. ವಿಜ್ಞಾನಮಾದರಿಗಳ ಪ್ರಸ್ತುತಪಡಿಸಲು ಅಗತ್ಯ ಸೌಕರ್ಯ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಬರುವ ಮಕ್ಕಳಿಗೆ ನಗರದ ಸರ್ಕಾರಿ ಬಸ್‌ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಆಹಾರ ವ್ಯವಸ್ಥೆ ನೀಡಲಾಗುವುದು ಎಂದು ಅಧ್ಯಾಪನಾ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

Share this article