ಮಂಡ್ಯ: ವಿಪತ್ತು ಪರಿಹಾರ ನಿಧಿಗೆ ಕಬ್ಬು ಬೆಳೆ ಸೇರಿಸಲು ಒತ್ತಾಯ

KannadaprabhaNewsNetwork |  
Published : Jan 26, 2024, 01:49 AM IST
೨೫ಕೆಎಂಎನ್‌ಡಿ-೧ಕಬ್ಬು ಬೆಳೆಯನ್ನು ವಿಪತ್ತು ಪರಿಹಾರ ನಿಧಿಗೆ ಸೇರಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಒಕ್ಕೂಟದವರು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ದೀರ್ಘಾವಧಿ ಬೆಳೆಯಾಗಿರುವ ಕಬ್ಬು ಬೆಳೆಯನ್ನು ವಿಪತ್ತು ಪರಿಹಾರ ನಿಧಿಗೆ ಸೇರಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮೈ ಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಸದಸ್ಯರು ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ದೀರ್ಘಾವಧಿ ಬೆಳೆಯಾಗಿರುವ ಕಬ್ಬು ಬೆಳೆಯನ್ನು ವಿಪತ್ತು ಪರಿಹಾರ ನಿಧಿಗೆ ಸೇರಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮೈ ಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಸದಸ್ಯರು ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾಗಿ ಕಬ್ಬು ಬೆಳೆ ವಿದ್ಯುತ್ ಅವಘಡ, ಆಕಸ್ಮಿಕ ಬೆಂಕಿ, ಅತಿವೃಷ್ಟಿ ಹಾಗೂ ಕಾಡುಪ್ರಾಣಿಗಳ ಹಾವಳಿಯಂತಹ ವೈಪರೀತ್ಯಗಳಿಗೆ ತುತ್ತಾಗಿ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಕಬ್ಬು ಬೆಳೆಯ ವೆಚ್ಚ ಅಧಿಕವಾಗಿದೆ ಎಂದು ತಿಳಿಸಿದರು.

ಅವಘಡಗಳಿಂದ ಉಂಟಾಗುತ್ತಿರುವ ನಷ್ಟದಿಂದ ಕಬ್ಬು ಬೆಳೆಗಾರರು ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ. ಆ ಹಿನ್ನೆಲೆಯಲ್ಲಿ ಕಬ್ಬು ಬೆಳೆಯನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಗೆ ಸೇರ್ಪಡೆಗೊಳಿಸಿ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಕೋರಿದರು.

ಫೆಬ್ರವರಿ ತಿಂಗಳಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಸಚಿವರು ಸರ್ಕಾರದ ಗಮನಸೆಳೆದು ಕಬ್ಬು ಬೆಳೆಯನ್ನು ವಿಪತ್ತು ಪರಿಹಾರ ನಿಧಿಗೆ ಸೇರಿಸುವ ನಿರ್ಣಯ ಮಾಡಬೇಕು. ಇದರಿಂದ ಕಬ್ಬು ಬೆಳೆಗಾರರನ್ನು ರಕ್ಷಣೆ ಮಾಡಿದಂತಾಗುತ್ತದೆ ಎಂದು ಮನವಿ ಮಾಡಿದರು.

ಒಕ್ಕೂಟದ ಸದಸ್ಯರಿಂದ ಮನವಿ ಸ್ವೀಕರಿಸಿದ ಸಚಿವ ಚಲುವರಾಯಸ್ವಾಮಿ ಅವರು ಕಬ್ಬು ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕಬ್ಬು ಬೆಳೆಯನ್ನು ವಿಪತ್ತು ಪರಿಹಾರ ನಿಧಿಗೆ ಸೇರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಮುಖ್ಯಮಂತ್ರಿಗಳು ಹಾಗೂ ಸಚಿವರೊಟ್ಟಿಗೆ ಈ ಕುರಿತು ಚರ್ಚಿಸುವ ಭರವಸೆ ನೀಡಿದರು.

ಮೈಶುಗರ್ ಕಾರ್ಖಾನೆ ಕಳೆದ ಸಾಲಿನಲ್ಲಿ ಉತ್ತಮವಾಗಿ ಕಾರ್ಯಾಚರಣೆ ನಡೆಸಿದೆ. ಮುಂದಿನ ವರ್ಷಗಳಲ್ಲೂ ಉತ್ತಮ ರೀತಿಯಲ್ಲಿ ನಡೆಯುವಂತೆ ಕ್ರಮ ವಹಿಸಲಾಗುತ್ತದೆ. ರೈತರು ಸಹಕಾರ ನೀಡುವಂತೆ ಮನವಿ ಮಾಡಿದರು.

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಕಬ್ಬು ಬೆಳೆಯನ್ನು ವಿಪತ್ತು ಪರಿಹಾರ ನಿಧಿಗೆ ಸೇರಿಸುವುದು ನಮ್ಮ ಒತ್ತಾಯವೂ ಆಗಿದೆ. ಈ ವಿಷಯವಾಗಿ ನಾನೂ ಸಹ ಸರ್ಕಾರದ ಗಮನಸೆಳೆಯುತ್ತೇನೆ. ಬಜೆಟ್ ಅಧಿವೇಶನದಲ್ಲೂ ದನಿ ಎತ್ತುವುದಾಗಿ ಸಚಿವರು ಭರವಸೆ ನೀಡಿದರು.

ಗೌರವ ಅಧ್ಯಕ್ಷ ಕೀಲಾರ ಕೃಷ್ಣ, ನಿರ್ದೇಶಕರಾದ ಬಾಣಸವಾಡಿ ಪ್ರಸನ್ನ, ತುಂಬಕೆರೆ ಮಂಜುನಾಥ್, ಸ್ವರ್ಣಸಂದ್ರದ ಲಕ್ಕಪ್ಪ ಹುಲಿಮಂಗಲ ಬಾಲರಾಜು, ರೈತ ಮುಖಂಡರಾದ ಕೀಲಾರ ಸೋಮಣ್ಣ, ಹೆಮ್ಮಿಗೆ ಚಂದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ