ಸುಮಲತಾ ಕೈ ತಪ್ಪಿದ ಮಂಡ್ಯ ಕ್ಷೇತ್ರ

KannadaprabhaNewsNetwork | Published : Mar 24, 2024 1:37 AM

ಸಾರಾಂಶ

ಇದೀಗ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಸಂಸದೆ ಸುಮಲತಾ ಬಂಡಾಯವೇಳುವ ಅಥವಾ ಪಕ್ಷೇತರವಾಗಿ ಚುನಾವಣಾ ಅಖಾಡ ಪ್ರವೇಶಿಸುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಅದಕ್ಕೆ ಪೂರಕವಾದ ವಾತಾವರಣವೂ ಮಂಡ್ಯದೊಳಗೆ ಇಲ್ಲದಂತಾಗಿದೆ.

ಜೆಡಿಎಸ್‌ಗೆ ಬಿಟ್ಟುಕೊಟ್ಟು ಬಿಜೆಪಿಯಿಂದ ಅಧಿಕೃತ ಘೋಷಣೆ । ಬಂಡಾಯವೇಳುವುದರಿಂದ ರಾಜಕೀಯ ಲಾಭಕ್ಕಿಂತ ನಷ್ಟವೇ ಹೆಚ್ಚು

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಸಂಸದೆ ಸುಮಲತಾ ಕಾರಣದಿಂದ ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟು ಅಧಿಕೃತ ಘೋಷಣೆ ಮಾಡಿದೆ. ಇದು ಮಂಡ್ಯ ಕ್ಷೇತ್ರದ ಮೈತ್ರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಸಂಸದೆ ಸುಮಲತಾ ಆಸೆಗೆ ತಣ್ಣೀರೆರಚಿದಂತಾಗಿದೆ. ಇದೀಗ ಸುಮಲತಾ ಅವರ ಮುಂದಿನ ರಾಜಕೀಯ ನಡೆಯನ್ನು ಕುತೂಹಲದಿಂದ ನೋಡುವಂತಾಗಿದೆ.

ನಾನು ಸ್ಪರ್ಧಿಸುವುದಾದರೆ ಅದು ಮಂಡ್ಯದಲ್ಲಿ ಮಾತ್ರ. ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂಬ ನಿಲುವಿಗೆ ಸುಮಲತಾ ಬದ್ಧರಾಗಿದ್ದರು. ಬಿಜೆಪಿ ಹೈಕಮಾಂಡ್ ಮಂಡ್ಯ ಕ್ಷೇತ್ರದ ಟಿಕೆಟ್‌ನ್ನು ನನಗೇ ನೀಡಲಿದೆ ಎಂಬ ಖಚಿತ ವಿಶ್ವಾಸದಲ್ಲಿದ್ದರು. ಆದರೆ, ಸುಮಲತಾ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದೆ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಬಿಜೆಪಿ ಅಧಿಕೃತ ಘೋಷಣೆ ಮಾಡಿರುವುದು ಸುಮಲತಾ ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಕಟ್ಟಿದ್ದ ಆಶಾಗೋಪುರ ಗಾಳಿಗೋಪುರವಾಗುವಂತೆ ಮಾಡಿದೆ.

ಮಾ.೧೭ರಂದು ಸಂಸದೆ ಸುಮಲತಾ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ವಾಪಸಾದ ಬಳಿಕ ಮಂಡ್ಯ ಕಡೆ ಮುಖ ಮಾಡಿರಲಿಲ್ಲ. ಸ್ಪರ್ಧೆ ಕುರಿತು ಯಾವುದೇ ಮಾತನಾಡದೆ ಮೌನಕ್ಕೆ ಜಾರಿದ್ದರು. ಆಗಲೇ ಮಂಡ್ಯ ಕ್ಷೇತ್ರ ತಮ್ಮ ಕೈತಪ್ಪಿ ಹೋಗಿರುವ ಸುಳಿವು ಅವರಿಗೆ ದೊರಕಿತ್ತು. ಆದರೂ ಬಹಿರಂಗವಾಗಿ ಅದನ್ನು ವ್ಯಕ್ತಪಡಿಸದೆ ಕಾದುನೋಡುವ ತಂತ್ರ ಅನುಸರಿಸುತ್ತಿದ್ದರು. ಈಗ ಮಂಡ್ಯ ಕ್ಷೇತ್ರದ ಬಗ್ಗೆ ಇದ್ದ ಕುತೂಹಲಕ್ಕೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ.

ಸುಮಲತಾಗೆ ಕಾಡುತ್ತಿದೆ ಅತಂತ್ರ ಪರಿಸ್ಥಿತಿ:

ಇದೀಗ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಸಂಸದೆ ಸುಮಲತಾ ಬಂಡಾಯವೇಳುವ ಅಥವಾ ಪಕ್ಷೇತರವಾಗಿ ಚುನಾವಣಾ ಅಖಾಡ ಪ್ರವೇಶಿಸುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಅದಕ್ಕೆ ಪೂರಕವಾದ ವಾತಾವರಣವೂ ಮಂಡ್ಯದೊಳಗೆ ಇಲ್ಲದಂತಾಗಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಒಂದು ಗುಂಪು ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾರಿಗೆ ಬೆಂಬಲ ಸೂಚಿಸಿತ್ತು. ಬಿಜೆಪಿ ಅಭ್ಯರ್ಥಿಯನ್ನೇ ಹಾಕದೆ ಬಹಿರಂಗ ಬೆಂಬಲ ಘೋಷಿಸಿತ್ತು. ರೈತಸಂಘ, ಜೆಡಿಎಸ್‌ನೊಳಗಿದ್ದ ಒಂದು ಗುಂಪು, ಅಂಬರೀಶ್ ಅಭಿಮಾನಿಗಳು ಎಲ್ಲರೂ ಸುಮಲತಾಗೆ ಶಕ್ತಿ ತುಂಬಿ ಗೆಲುವು ದೊರಕಿಸಿದ್ದರು. ಈಗಿನ ಸಂದರ್ಭದಲ್ಲಿ ಜಿಲ್ಲೆಯೊಳಗಿನ ರಾಜಕೀಯ ಚಿತ್ರಣವೇ ಬದಲಾಗಿದೆ. ಪಕ್ಷೇತರವಾಗಿ ಸುಮಲತಾ ಕಣಕ್ಕಿಳಿದರೂ ರಾಜಕೀಯ ವಾತಾವರಣ ಅವರ ಪರವಾಗಿಲ್ಲ. ಇದು ಸುಮಲತಾ ಅವರಿಗೂ ಗೊತ್ತಿರುವುದರಿಂದಲೇ ಮೌನ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನೊಳಗೂ ವಿರೋಧ:

ಕಾಂಗ್ರೆಸ್ ಪಕ್ಷ ಕೂಡ ಮಂಡ್ಯ ಲೋಕಸಭಾ ಅಭ್ಯರ್ಥಿಯನ್ನಾಗಿ ವೆಂಕಟರಮಣೇಗೌಡ ಅವರನ್ನು ಘೋಷಿಸಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆಗಳೂ ಇಲ್ಲ. ಒಮ್ಮೆ ಸೇರಿದರೂ ಮಂಡ್ಯ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಸುಮಲತಾ ಸೇರ್ಪಡೆಗೆ ಕಾಂಗ್ರೆಸ್‌ನೊಳಗೂ ವಿರೋಧವಿದೆ ಎನ್ನಲಾಗಿದೆ.

--------------------------

ಬಾಕ್ಸ್...........................

ಮೈತ್ರಿ ಧರ್ಮ ಪಾಲನೆ ಅನಿವಾರ್ಯ:

ಮಂಡ್ಯ ಜೆಡಿಎಸ್ ಪಾಲಾಗಿರುವುದರಿಂದ ಸುಮಲತಾ ದಳಪತಿಗಳೊಂದಿಗೆ ಹೊಂದಿದ್ದ ಹಳೆಯ ವಿರಸವನ್ನು ಮರೆತು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸುವುದು. ಸ್ಟಾರ್ ಪ್ರಚಾರಕಿಯಾಗಿ ಚುನಾವಣಾ ಪ್ರಚಾರ ನಡೆಸಿ ಎರಡೂ ಪಕ್ಷದದವರ ವಿಶ್ವಾಸದಲ್ಲಿ ಮುಂದುವರೆಯುವುದು ಅನಿವಾರ್ಯವಾಗಿದೆ.

ಬಿಜೆಪಿ ವರಿಷ್ಠರನ್ನು ಭೇಟಿಯಾದ ಸಮಯದಲ್ಲಿ ಪರ್ಯಾಯ ರಾಜಕೀಯ ಅವಕಾಶಗಳನ್ನು ದೊರಕಿಸುವ ಭರವಸೆ ಸುಮಲತಾ ಅವರಿಗೆ ಸಿಕ್ಕಿರಬಹುದು. ಅದೇ ಕಾರಣಕ್ಕೆ ಅವರು ಸೈಲೆಂಟಾಗಿದ್ದಾರೆ. ಅವರು ಬಿಜೆಪಿ ಸೇರ್ಪಡೆಯಾಗುವ ತೀರ್ಮಾನ ಕೈಗೊಳ್ಳುವುದರಿಂದ ಭವಿಷ್ಯದಲ್ಲಿ ಅವರಿಗೆ ಉತ್ತಮ ಅವಕಾಶಗಳು ಸಿಗಬಹುದು. ಬಂಡಾಯವೇಳುವುದರಿಂದ ಸುಮಲತಾ ಅವರಿಗೆ ರಾಜಕೀಯವಾಗಿ ನಷ್ಟವೇ ಹೊರತು ಲಾಭವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

----------------

(ಸುಮಲತಾ- ಅವರ ಹೆಸರಿನಲ್ಲೇ ಫೋಟೋ ಇದೆ)

Share this article