ಜಪಾನ್‌ಗೆ ತೆರಳಲಿರುವ ಮಂಡ್ಯ ರಿಪಬ್ಲಿಕ್ ಶಾಲೆ ಮಕ್ಕಳು

KannadaprabhaNewsNetwork | Published : Apr 2, 2025 1:00 AM

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ವಿಧೇಯತೆ ರೂಢಿಸಿಕೊಳ್ಳಬೇಕು. ಮಾತಾ- ಪಿತೃಗಳೇ ತಮಗೆ ಆದರ್ಶವಾಗಬೇಕು. ಜಿಲ್ಲೆಯಲ್ಲಿ ಕೃಷಿ ಅವಲಂಬಿತ ಪೋಷಕರು ಹೆಚ್ಚಾಗಿದ್ದು, ಅವರ ಕನಸಿಗೆ ನೀರೆರೆಯುವ ಜಾಣ್ಮೆ ರೂಢಿಸಿಕೊಂಡು ಕಾಣದ ದೇವರನ್ನು ಪೋಷಕರಲ್ಲೇ ಕಾಣಬೇಕೆಂದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಅವಿರತವಾಗಿ ಶ್ರಮಿಸುತ್ತಾರೆ, ಅವರ ಕನಸಿನ ಮೌಲ್ಯವನ್ನು ಅರಿತು ಸತ್ಪ್ರಜೆಗಳಾಗಿ ಹೊರ ಹೊಮ್ಮುವ ಕನವರಿಕೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ರೂಢಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಿಸಿದರು.

ತಾಲೂಕಿನ ಸಿದ್ದಯ್ಯನ ಕೊಪ್ಪಲು ಗ್ರಾಮದ ಬಳಿ ಇರುವ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಆಯೋಜನೆಗೊಂಡಿದ್ದ ಜಪಾನ್ ದೇಶದಲ್ಲಿ ನಡೆಯುವ ''''ವಿದ್ಯಾರ್ಥಿ ವಿನಿಮಯ'''' ಕಾರ್ಯಕ್ರಮಕ್ಕೆ ಆಯ್ಕೆಗೊಂಡಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಉತ್ತಮ ಪರಿಸರದಲ್ಲಿ, ಅತ್ಯುತ್ತಮ ವಾತಾವರಣದಲ್ಲಿ ನಿರ್ಮಾಣಗೊಂಡಿದ್ದು, ಉತ್ತಮ ಬೋಧಕ ವರ್ಗವನ್ನು ಹೊಂದಿದೆ. ಶಾಲಾ ಸಮಿತಿ ಅಧ್ಯಕ್ಷ ಮಂಜು ಅವರ ಕಾಳಜಿ ಅನನ್ಯವಾಗಿದ್ದು, ಇಂತಹ ಸುಂದರ ಪರಿಸರದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಗುಣಗಾನ ಮಾಡಿದರು.

ಭಾರತ ಮತ್ತು ಜಪಾನ್ ರಾಷ್ಟ್ರಗಳ ನಡುವಿನ ವಿದ್ಯಾರ್ಥಿಗಳಲ್ಲಿ ಬಾಂಧವ್ಯ ವೃದ್ಧಿಸುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಸತತ ಮೂರನೇ ಬಾರಿಗೆ 7 ವಿದ್ಯಾರ್ಥಿಗಳು ಆಯ್ಕೆಗೊಂಡಿರುವುದು ಸಂತಸದ ವಿಚಾರವಾಗಿದ್ದು, ವಿದ್ಯಾರ್ಥಿಗಳ ಪ್ರಗತಿ ಪೋಷಕರ ಸಂತಸಕ್ಕೆ ನಾಂದಿ ಹಾಡುತ್ತದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ ಶೈಕ್ಷಣಿಕ ಅವಧಿ ಅಮೂಲ್ಯವಾಗಲಿದ್ದು, ಅದನ್ನು ಸದ್ಬಳಕೆ ಅಥವಾ ದುರ್ಬಳಕೆ ಮಾಡಿಕೊಳ್ಳುವ ಅವಕಾಶವಿದ್ದು, ಶೈಕ್ಷಣಿಕ ಅವಧಿಯಲ್ಲಿ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಗುರು- ಹಿರಿಯರಿಗೆ ಮತ್ತು ಪೋಷಕರಿಗೆ ಗೌರವಿಸುವ ಮೌಲ್ಯಯುತ ಶಿಕ್ಷಣದ ಜೊತೆಗೆ ಅಧಿಕ ಅಂಕ ಗಳಿಸುವ ಜಾಣ್ಮೆ ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ವಿಧೇಯತೆ ರೂಢಿಸಿಕೊಳ್ಳಬೇಕು. ಮಾತಾ- ಪಿತೃಗಳೇ ತಮಗೆ ಆದರ್ಶವಾಗಬೇಕು. ಜಿಲ್ಲೆಯಲ್ಲಿ ಕೃಷಿ ಅವಲಂಬಿತ ಪೋಷಕರು ಹೆಚ್ಚಾಗಿದ್ದು, ಅವರ ಕನಸಿಗೆ ನೀರೆರೆಯುವ ಜಾಣ್ಮೆ ರೂಢಿಸಿಕೊಂಡು ಕಾಣದ ದೇವರನ್ನು ಪೋಷಕರಲ್ಲೇ ಕಾಣಬೇಕೆಂದರು.

ಶಿಕ್ಷಣದ ಅವಧಿಯಲ್ಲಿ ಅಭ್ಯಾಸದ ಗೀಳು ರೂಢಿಸಿಕೊಳ್ಳಬೇಕು. ಉತ್ತಮ ಸ್ನೇಹಿತರ ಆಯ್ಕೆಗೆ ಮಾನದಂಡ ರೂಢಿಸಿಕೊಳ್ಳಬೇಕು. ಶಿಸ್ತು, ಶುಚಿತ್ವ, ಏಕಾಗ್ರತೆ ರೂಢಿಸಿಕೊಂಡು ಗುಣಾತ್ಮಕ ಶಿಕ್ಷಣ ಪಡೆಯುಲು ಮುಂದಾಗಬೇಕು. ಡಿಜಿಟಲ್ ಕ್ರಾಂತಿಯ ಲಾಭವನ್ನು ಸದುಪಯೋಗ ಪಡೆದುಕೊಳ್ಳುವಾಗ ಜಾಗೃತಿ ವಹಿಸಬೇಕೆಂದು ಕಿವಿಮಾತು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎಸ್.ಮಂಜು , ಪಾಂಶ್ರುಪಾಲೆ ಸುನೀತಾ ರಾಜನ್ ಉಪಸ್ಥಿತರಿದ್ದರು.

Share this article