ಮಂಗಳೂರು: ನವೋದಯ ‘ರಜತ ಸಂಭ್ರಮ’ಕ್ಕೆ ಸರ್ವ ಸಿದ್ಧತೆ

KannadaprabhaNewsNetwork | Published : May 10, 2025 1:08 AM
ನವೋದಯ ರಜತ ಸಂಭ್ರಮ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌. | Kannada Prabha

ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಮೇ 10ರಂದು ನಗರದ ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ನಡೆಯಲಿರುವ ನವೋದಯ ಸ್ವಸಹಾಯ ಗುಂಪುಗಳ 25ನೇ ವರ್ಷದ ಅಭೂತಪೂರ್ವ ‘ರಜತ ಸಂಭ್ರಮ’ ಸಮಾರಂಭದ ಯಶಸ್ಸಿಗಾಗಿ ಭರದ ಸಿದ್ಧತೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಮೇ 10ರಂದು ನಗರದ ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ನಡೆಯಲಿರುವ ನವೋದಯ ಸ್ವಸಹಾಯ ಗುಂಪುಗಳ 25ನೇ ವರ್ಷದ ಅಭೂತಪೂರ್ವ ‘ರಜತ ಸಂಭ್ರಮ’ ಸಮಾರಂಭದ ಯಶಸ್ಸಿಗಾಗಿ ಭರದ ಸಿದ್ಧತೆ ನಡೆಯುತ್ತಿದೆ.

ಸುಮಾರು ಒಂದೂವರೆ ಲಕ್ಷದಷ್ಟು ಸ್ವಸಹಾಯ ಗುಂಪುಗಳ ಮಹಿಳೆಯರು ಸಮವಸ್ತ್ರದಲ್ಲಿ ಭಾಗವಹಿಸಲಿರುವ ಈ ದಾಖಲೆಯ ಚಾರಿತ್ರಿಕ ಸಮಾವೇಶದ ಸಿದ್ಧತೆಯನ್ನು ಪರಿಶೀಲಿಸಿದ ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ನ ಸಂಸ್ಥಾಪಕ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ರಾಜ್ಯಕ್ಕೆ ಗೌರವ ತರುವ ಸಮಾವೇಶ:

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌, ರಜತ ಸಂಭ್ರಮ ಸಮಾವೇಶಕ್ಕೆ ಯಾವುದೇ ರೀತಿಯ ಕೊರತೆಯಾಗದಂತೆ ಅತ್ಯಂತ ವ್ಯವಸ್ಥಿತವಾಗಿ, ದೇಶಕ್ಕೆ ಮಾದರಿಯಾಗುವಂತೆ ಅಭೂತಪೂರ್ವ ರೀತಿಯಲ್ಲಿ ನಡೆಸಲು ಎಲ್ಲ ತಯಾರಿಗಳನ್ನು ಮಾಡಿದ್ದೇವೆ. ದ.ಕ. ಜಿಲ್ಲೆ ಮಾತ್ರವಲ್ಲ, ನವೋದಯ ಸ್ವಸಹಾಯ ಸಂಘಗಳು, ರಾಜ್ಯಕ್ಕೆ ಗೌರವ ತರುವ ರೀತಿಯಲ್ಲಿ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಒಂದೂವರೆ ಲಕ್ಷ ಮಹಿಳೆಯರು ಒಂದೇ ಸಮವಸ್ತ್ರದಲ್ಲಿ ಒಂದೆಡೆ ಭಾಗವಹಿಸುತ್ತಿರುವುದು ಇದುವರೆಗೆ ರಾಜ್ಯದಲ್ಲಿ ನಡೆದ ಇತಿಹಾಸವಿಲ್ಲ. ಈ ಸಮಾವೇಶ ಇತಿಹಾಸ ಸೃಷ್ಟಿ ಮಾಡಲಿದೆ. 25 ವರ್ಷಗಳ ಹಿಂದೆ ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗಿ ಮಹಿಳೆಯರ ಸಬಲೀಕರಣದ ಧ್ಯೇಯೋದ್ದೇಶದೊಂದಿಗೆ ಆರಂಭಿಸಲಾದ ನವೋದಯ ಸ್ವಸಹಾಯ ಗುಂಪುಗಳು ಇಂದು 8-9 ಜಿಲ್ಲೆಗಳಿಗೆ ವಿಸ್ತರಿಸಿ ಮಹಿಳೆಯರ ಜೀವನ ಮಟ್ಟವನ್ನು ಎತ್ತರಿಸಿದೆ. ಈ 25 ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸಿ ಮಾದರಿಯಾಗಿವೆ ಎಂದರು.

ಸಮಯಕ್ಕೆ ಮಹತ್ವ:

ಸಮಾವೇಶವನ್ನು ಅಚ್ಚುಕಟ್ಟಾಗಿ ನಡೆಸಲು ಸಮಯಕ್ಕೆ ಮಹತ್ವ ನೀಡಲಾಗುವುದು. ವಿವಿಧ ಜಿಲ್ಲೆಗಳಿಂದ ಆಗಮಿಸಲಿರುವ ಸ್ವಸಹಾಯ ಗುಂಪುಗಳ ಸದಸ್ಯರು ಸಕಾಲಕ್ಕೆ ಹಿಂತಿರುಗಲು ಅನುಕೂಲವಾಗುವಂತೆ ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ಸಮಾಪ್ತಿಗೊಳಿಸಲಿದ್ದೇವೆ ಎಂದು ರಾಜೇಂದ್ರ ಕುಮಾರ್‌ ತಿಳಿಸಿದರು.

160 ಊಟದ ಕೌಂಟರ್‌:

ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಮಾತನಾಡಿ, ಸಮಾವೇಶದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿರುವುದರಿಂದ ಅದಕ್ಕೆ ಪೂರಕವಾಗಿ 160 ಊಟದ ಕೌಂಟರ್‌ಗಳು, ಪುರುಷ- ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಸಮಾವೇಶ ಸ್ಥಳದಲ್ಲಿ ಬಿಸಿಲ ಬೇಗೆ ನೀಗಿಸಲು ಜರ್ಮನ್‌ ಟೆಂಟ್‌, ಬೃಹತ್‌ ಫ್ಯಾನ್‌ಗಳ ವ್ಯವಸ್ಥೆ, ಕೂಲರ್‌ಗಳ ವ್ಯವಸ್ಥೆ ಮಾಡಲಾಗಿದೆ. ಸ್ವಸಹಾಯ ಗುಂಪುಗಳ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಲು 3 ಸಾವಿರ ಬಸ್‌ಗಳನ್ನು ನಿಯೋಜಿಸಲಾಗಿದೆ. 750 ಕಾರುಗಳನ್ನು ಬುಕ್‌ ಮಾಡಲಾಗಿದೆ ಎಂದು ತಿಳಿಸಿದರು.

ವಿವಿಧೆಡೆಗಳಿಂದ ಆಗಮಿಸುವ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಪಡುಬಿದ್ರಿ, ವಾಮಂಜೂರು, ಬಂಟ್ವಾಳ, ಫರಂಗಿಪೇಟೆಯಲ್ಲಿ ಉಪಹಾರದ ಪೊಟ್ಟಣಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ಸ್ಥಳದಲ್ಲಿ ಪ್ರತಿಯೊಬ್ಬರಿಗೂ ನೀರು, ಬಿಸ್ಕತ್ತು, ಚಾಕಲೇಟ್‌ ವಿತರಿಸಲು ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ವಾಹನ ಪಾರ್ಕಿಂಗ್‌ಗೆ ಸರ್ವಸಜ್ಜಿತ ವ್ಯವಸ್ಥೆ ಮಾಡಸಲಾಗಿದ್ದು, ಎಲ್ಲ ಕೆಲಸಗಳನ್ನು ಸ್ವಯಂ ಸೇವಕರು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳು, ರಾಜಕೀಯ ದಿಗ್ಗಜರು, ಪ್ರಾಥಮಿಕ, ತಾಲೂಕು, ಜಿಲ್ಲೆ, ರಾಜ್ಯ ಸಹಕಾರಿಗಳು ಸುಮಾರು 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಹಿರಿಯ ಅಧಿಕಾರಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ದೇವಿಪ್ರಸಾದ್‌ ಶೆಟ್ಟಿ ಹೇಳಿದರು.

5 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಆರ್ಥಿಕ ಭದ್ರತೆ:

ಮಹಿಳಾ ಸಬಲೀಕರಣದ ಉದ್ದೇಶದ ನವೋದಯ ಸ್ವಸಹಾಯ ಗುಂಪುಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಂತೂ ಗ್ರಾಮ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ಆಸ್ತಿ ಅಡಮಾನ ಇಲ್ಲದೆ ಗುಂಪು ಸಾಲ ನೀಡಿ ಶೇ.100ರಷ್ಟು ಮರುಪಾವತಿ ಆಗುತ್ತಿರುವ ಏಕೈಕ ಸಂಘಟನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 8 ಜಿಲ್ಲೆಗಳಲ್ಲಿ 5 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಲಾಗಿದೆ ಎಂದರು.

ಪಕ್ಷಾತೀತ, ಜಾತ್ಯತೀತ:

ನವೋದಯ ಸ್ವಸಹಾಯ ಗುಂಪುಗಳು ಪಕ್ಷಾತೀತ, ಜಾತ್ಯತೀತ. ಎಲ್ಲ ಜಾತಿ, ಧರ್ಮಗಳನ್ನು ಒಳಗೊಂಡು ನಡೆಯುತ್ತಿರುವ ಸಂಘಟನೆ. ಹಾಗಾಗಿ ಸಮಾವೇಶಕ್ಕೆ ಎಲ್ಲ ಪಕ್ಷಗಳ ಎಲ್ಲ ಕ್ಷೇತ್ರಗಳ ಗಣ್ಯಾತಿಗಣ್ಯ ಮುಖಂಡರು ಆಗಮಿಸುತ್ತಿದ್ದಾರೆ. ಇಂಥ ಅಭೂತಪೂರ್ವ ಸಮಾವೇಶವನ್ನು ನೋಡುವುದೇ ಒಂದು ಯೋಗ ಎಂಬಂತೆ ಭಾಸವಾಗಲು ಸರ್ವ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ವಸ್ತು ಪ್ರದರ್ಶನ ಮಳಿಗೆಗಳು:

ಸಮಾವೇಶ ನಡೆಯುವ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳನ್ನೂ ತೆರೆಯಲಾಗುವುದು. ಸ್ವಸಹಾಯ ಗುಂಪುಗಳ ಮಹಿಳೆಯರ ಉತ್ಪಾದನೆಯ ಅನೇಕ ಸ್ಟಾಲ್‌ಗಳು ಇರಲಿವೆ ಎಂದು ದೇವಿ ಪ್ರಸಾದ್‌ ಶೆಟ್ಟಿ ಮಾಹಿತಿ ನೀಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರಾದ ಟಿ.ಜಿ. ರಾಜಾರಾಮ ಭಟ್, ಶಶಿಕುಮಾರ್ ರೈ ಬಿ., ಮೋನಪ್ಪ ಶೆಟ್ಟಿ ಎಕ್ಕಾರು, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ನವೋದಯ ಟ್ರಸ್ಟಿಗಳಾದ ಮೇಘರಾಜ್ ಆರ್. ಜೈನ್, ಸುನಿಲ್ ಕುಮಾರ್ ಬಜಗೋಳಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಉದ್ಯಮಿಗಳಾದ ಪುಷ್ಪರಾಜ್ ಜೈನ್, ಜಯಪ್ರಕಾಶ್ ತುಂಬೆ, ಟ್ರಸ್ಟ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮತ್ತಿತರರು ಇದ್ದರು.

--------------ಅಬಲೆಯರ ಬದುಕು ಕಟ್ಟಿದ ನವೋದಯ ಗುಂಪುಗಳು..

25 ವರ್ಷಗಳ ಹಿಂದೆ ನವೋದಯ ಸ್ವಸಹಾಯ ಗುಂಪಿನ ಸದಸ್ಯರಾಗಿ ಸೇರ್ಪಡೆಯಾದ ಕಾಪುವಿನ ನಂದಿನಿ ಸ್ವಸಹಾಯ ಗುಂಪಿನ ಸದಸ್ಯೆ ಪ್ರಭಾವತಿ ಸ್ಥಳಕ್ಕಾಗಮಿಸಿದ್ದರು. ಅವರನ್ನು ವೇದಿಕೆಗೆ ಕರೆಸಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್‌, ಪ್ರಭಾವತಿ ಅವರ ಸಬಲೀಕರಣದ ಹಾದಿಯನ್ನು ವಿವರಿಸಿದರು. ಪ್ರಭಾವತಿ ಅನಕ್ಷರಸ್ಥೆ. 25 ವರ್ಷಗಳ ಹಿಂದೆ ಅವರ ಪತಿ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. ಇಂಥ ಪರಿಸ್ಥಿತಿಯಲ್ಲಿ ನವೋದಯ ಸ್ವಸಹಾಯ ಗುಂಪಿಗೆ ಸೇರ್ಪಡೆಯಾಗಿ ಆರ್ಥಿಕ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ ಎಂದರು.

ಇದೇ ರೀತಿ ಸ್ವಸಹಾಯ ಗುಂಪಿನ ಮಹಿಳೆಯರ ಮಕ್ಕಳು ವೈದ್ಯರು, ಎಂಜಿನಿಯರ್‌ಗಳು, ವಿವಿಧ ಉನ್ನತ ಹುದ್ದೆಗಳಿಗೆ ತೆರಳಿದ್ದಾರೆ. ಮಹಿಳಾ ಸಬಲೀಕರಣ ಎಂದರೆ ಇದೇ. ನವೋದಯ ಸ್ವಸಹಾಯ ಗುಂಪುಗಳ ಯಶಸ್ಸು ಇಂಥ ಸಾರ್ಥಕತೆಯಲ್ಲೇ ಅಡಗಿದೆ ಎಂದು ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.